Advertisement

ಮಾರುಕಟ್ಟೆಗೆ ತಡವಾಗಿ ಲಗ್ಗೆಯಿಟ್ಟ ಮಾವು

03:30 PM May 26, 2022 | Team Udayavani |

ಹಾವೇರಿ: ಹಣ್ಣುಗಳ ರಾಜನೆಂದೇ ಕರೆಯಲ್ಪಡುವ ಮಾವಿನ ಹಣ್ಣು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಮುಂಗಾರು ಮಳೆ ಆರಂಭಗೊಳ್ಳುವುದರ ಒಳಗಾಗಿ ಮಾವಿನ ಹಣ್ಣು ಖರೀದಿಸಿ ರುಚಿ ಸವಿಯಲು ಜನತೆ ಮುಂದಾಗುತ್ತಿದ್ದಾರೆ.

Advertisement

ಏಪ್ರಿಲ್‌ ಕೊನೆಯ ಹಾಗೂ ಮೇ ಮೊದಲ ವಾರದಲ್ಲಿ ಆಪೂಸ್‌, ಕಲ್ಮಿ, ತೋತಾಪುರಿ, ಬದಾಮಿ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ನಗರದ ಮಾರುಕಟ್ಟೆ ಪ್ರವೇಶಿಸಿವೆ. ಈ ತಳಿಗಳ ಪೈಕಿ ಆಪೂಸ್‌ ಮತ್ತು ತೋತಾಪುರಿಯಂತಹ ಜವಾರಿ ಹಣ್ಣುಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಾಣಸಿಗುತ್ತಿವೆ.

ಕಳೆದ ವರ್ಷಕ್ಕಿಂತ ಈ ವರ್ಷ ಮಾವು ಇಳುವರಿ ಮಾರುಕಟ್ಟೆಯಲ್ಲಿ ಕೊಂಚ ಉತ್ತಮವಾಗಿದ್ದರೂ, ವ್ಯಾಪಾರಸ್ಥರು ನಿರೀಕ್ಷಿಸಿದ ಪ್ರಮಾಣದಲ್ಲಿ ಮಾವಿನ ಹಣ್ಣು ಮಾರುಕಟ್ಟೆಗೆ ಬಂದಿಲ್ಲ. ಕಾರಣ ಕಳೆದ ನವಂಬರ್‌, ಡಿಸೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದ ಮಾವಿನ ಗಿಡದ ಹೂವುಗಳು ಹಾಗೂ ಮೊಗ್ಗುಗಳು ಹಾಳಾಗಿದ್ದವು.

ಅಲ್ಲದೇ, ನಾನಾ ರೋಗ ತಗುಲಿ ಮಾವಿನ ಹಣ್ಣು ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಇದು ಮಾವು ಪ್ರಿಯರಿಗೆ ಮತ್ತು ವ್ಯಾಪಾರಸ್ಥರಿಗೆ ಬೇಸರ ತಂದಿದೆ. ಅಷ್ಟೆಯಲ್ಲದೇ, ಒಂದು ತಿಂಗಳು ತಡವಾಗಿ ಮಾರುಕಟ್ಟೆಗೆ ಬಂದಿದ್ದು, ಮಳೆ ಆರಂಭಗೊಳ್ಳುವ ಒಳಗಾಗಿ ಉತ್ತಮ ಗುಣಮಟ್ಟದ ಮಾವು ಖರೀದಿಸಿ ಸವಿಯಲು ಗ್ರಾಹಕರು ಮಾರುಕಟ್ಟೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.

ಶೇ.30-35ರಷ್ಟು ಫಸಲು ಕುಸಿತ: ಈ ಬಾರಿ ಮಾವು ಹೂ ಬಿಡುವ ಪ್ರಕ್ರಿಯೆ ಸಮಯದಲ್ಲಿ ನವಂಬರ್‌ -ಡಿಸೆಂಬರ್‌ ತಿಂಗಳಲ್ಲಿ ಸುರಿದ ಮಳೆಯಿಂದ ಮಾವಿನ ಹಂಗಾಮು ತಡವಾಗಿದೆ. ಇದರೊಂದಿಗೆ ಪ್ರತಿಕೂಲ ವಾತಾವರಣ, ಹೆಚ್ಚಾಗಿ ಬಿದ್ದ ಇಬ್ಬನಿ ಪರಿಣಾಮ ಫಲವಾಗಿ ಬಿಟ್ಟ ಹೂಗಳು ಕಾಯಿ ಕಟ್ಟದೇ ಉದುರಿ ಹೋಗಿವೆ. ಜತೆಗೆ ಆಗಾಗ ಭಾರೀ ಗಾಳಿ ಸಮೇತ ಮಳೆಯಾಗಿದ್ದರಿಂದ ಗಿಡದಲ್ಲಿದ್ದ ಹೂ ಮತ್ತು ಕಾಯಿ ನೆಲಕಚ್ಚಿದ್ದವು. ಈ ಎಲ್ಲ ಕಾರಣಗಳಿಂದ ಪ್ರಸ್ತುತ ಅಂದಾಜು ಶೇ.30-35ರಷ್ಟು ಮಾವು ಉತ್ಪಾದನೆ ಕಡಿಮೆಯಾಗಿದೆ ಎಂದು ಮಾವು ಬೆಳೆಗಾರರು ಹೇಳುತ್ತಾರೆ.

Advertisement

ಅರ್ಧ ಸೀಜನ್‌ ಮಾತ್ರ ಬಾಕಿ: ಯುಗಾದಿ ಬಳಿಕವಷ್ಟೇ ಆರಂಭವಾಗಬೇಕಿದ್ದ ಮಾವಿನ ಹಣ್ಣಿನ ಸೀಜನ್‌ ಈ ಬಾರಿ ಅಕಾಲಿಕ ಮಳೆಗೆ ತುತ್ತಾಗಿ, ಇಬ್ಬನಿಯಿಂದ ಹೂವು ಮೊಗ್ಗುಗಳಿಗೆ ಹೊಡೆತ ಬಿದ್ದಿದ್ದರಿಂದ ಮಾರುಕಟ್ಟೆಗೆ ತಡವಾಗಿ ಬಂದಿವೆ. ಈಗಾಗಲೇ ಮೇ ಕೊನೆಯ ವಾರ ಆರಂಭವಾಗಿದ್ದು, ಅರ್ಧ ಸೀಜನ್‌ ಮುಗಿದು ಬಿಟ್ಟಿದೆ. ಜೊತೆಗೆ ಕಳೆದೊಂದು ವಾರದಿಂದ ಅಕಾಲಿಕ ಮಳೆ ಸುರಿಯಲಾರಂಭಿಸಿದ್ದು, ಮುಂಗಾರು ಹಂಗಾಮು ಸಮೀಪಿಸುತ್ತಿದೆ. ಮುಂಗಾರು ಮಳೆ ಪ್ರಾರಂಭವಾದರೆ ಮಾವಿನ ಹಣ್ಣುಗಳಿಗೆ ಬೇಡಿಕೆ ಇಲ್ಲದಂತಾಗಿ ಸೀಜನ್‌ ಮುಗಿಯುವ ಆತಂಕ ವ್ಯಾಪಾರಿಗಳದ್ದಾಗಿದೆ.

ಸದ್ಯ ಜಿಲ್ಲೆಯಲ್ಲಿ ಆಪೂಸ್‌, ತೋತಾಪುರಿಯಂತಹ ಸ್ಥಳೀಯ ಮಾವಿನ ಹಣ್ಣುಗಳು ಲಭ್ಯವಿವೆ. ಮಲ್ಲಿಕಾ, ಲಕ್ನೋ 49, ನೀಲಂ, ಮಲಗೋಬಾ ಸೇರಿದಂತೆ ವಿವಿಧ ತಳಿಯ ಹಣ್ಣುಗಳು ಮಾರುಕಟ್ಟೆಗೆ ಸ್ವಲ್ಪ ತಡವಾಗಿ ಬರಲಿವೆ. ಈಗಾಗಲೇ ಅರ್ಧ ಸೀಜನ್‌ ಮುಗಿದಿದ್ದು, ನಿರೀಕ್ಷಿತ ಮಟ್ಟದಲ್ಲಿ ಮಾವು ಮಾರುಕಟ್ಟೆಗೆ ಬಂದಿಲ್ಲ. ಹೀಗಾಗಿ, ಈ ಬಾರಿ ಅಷ್ಟಾಗಿ ವ್ಯಾಪಾರ ಆಗುತ್ತಿಲ್ಲ. ಮಳೆ ಆರಂಭಗೊಂಡರೆ ಈ ಬಾರಿಯ ಮಾವು ಸೀಜನ್‌ ಮುಗಿದಂತೆ. ಹಾಗಾಗಿ, ಗ್ರಾಹಕರು ಮಾವು ಖರೀದಿಗೆ ಆಗಮಿಸುತ್ತಿದ್ದಾರೆ. –ದಾವಲ್‌ ಶಿರಹಟ್ಟಿ, ಹಣ್ಣುಗಳ ವ್ಯಾಪಾರಸ್ಥರು

Advertisement

Udayavani is now on Telegram. Click here to join our channel and stay updated with the latest news.

Next