Advertisement

ಮೋಡ; ಮಾವು, ದ್ರಾಕ್ಷಿ ಬೆಳೆಗಾರರಲ್ಲಿ ನಡುಕ

03:36 PM Apr 30, 2023 | Team Udayavani |

ಚಿಕ್ಕಬಳ್ಳಾಪುರ: ಹಣ್ಣುಗಳ ರಾಜ ಮಾವು ಮಾರುಕಟ್ಟೆ ಪ್ರವೇಶಕ್ಕೆ ಕೆಲವೇ ದಿನ ಮಾತ್ರ ಬಾಕಿ ಇದೆ. ನಿರೀಕ್ಷೆಯಂತೆ ಮೇ ಮೊದಲ ವಾರದಲ್ಲಿ ಮೊದಲ ಹಂತದಲ್ಲಿ ರಾಜಗಿರಿ, ಸೇಂಧೂರ ಮಾವು ಗ್ರಾಹಕರ ಕೈಗೆ ಸಿಗಲಿದೆ. ಆದರೆ, ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು ಮಾವು, ದ್ರಾಕ್ಷಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.

Advertisement

ಜಿಲ್ಲಾದ್ಯಂತ ಬರೋಬ್ಬರಿ 11,500 ಹೆಕ್ಟೇರ್‌ನಲ್ಲಿ ತರಹೇವಾರಿ ಮಾವು ಇದ್ದರೆ, 2,900ಕ್ಕೂ ಅಧಿಕ ಹೆಕ್ಟೇರ್‌ನಲ್ಲಿ ದ್ರಾಕ್ಷಿ ಫ‌ಸಲು ಬಿಟ್ಟಿದೆ. ದ್ರಾಕ್ಷಿಗಿಂತ ಮಾವು ಮುಂಚಿತವಾಗಿ ಮಾರುಕಟ್ಟೆ ಪ್ರವೇಶಿಸಲಿದ್ದು ಕೊಯ್ಲಿಗೆ ದಿನಗಣನೆ ಶುರುವಾಗಿದೆ. ಆದರೆ, ಜಿಲೆಯಲ್ಲಿ ಅಕಾಲಿಕ ಮಳೆ ಆಗುವ ಆತಂಕ ಕಂಗೆಡಿಸಿದೆ.

ವಾಣಿಜ್ಯ ಬೆಳೆ: ಒಂದರೆಡು ದಿನಗಳ ಹಿಂದೆ ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ ತಾಲೂಕುಗಳಲ್ಲಿ ಭಾರೀ ಮಳೆ ಆಗಿದ್ದು ಈಗ ಜಿಲ್ಲಾದ್ಯಂತ ಅಕಾಲಿಕ ಮಳೆ ಬೀಳುವ ಆತಂಕ ಶುರುವಾಗಿದೆ. ಕೊಯ್ಲಿಗೆ ಬಂದಿರುವ ಮಾವು ವನ್ನು ಕಳೆದುಕೊಳ್ಳುವ ಆತಂಕದಲ್ಲಿ ಬೆಳೆಗಾರರು ಇದ್ದಾರೆ. ಜಿಲ್ಲೆಯಲ್ಲಿ ಕೆಲವೇ ದಿನಕ್ಕೆ ಮಾವು ಸುಗ್ಗಿ ಆರಂಭಗೊಳ್ಳಲಿದೆ. ಪಕ್ಕದ ಕೋಲಾರ ಜಿಲ್ಲೆ ಬಿಟ್ಟರೆ ಮಾವು ಬೆಳೆಯುವುದರಲ್ಲಿ ಜಿಲ್ಲೆಯ ಚಿಂತಾಮಣಿ ತಾಲೂಕು ಮೊದಲ ಸ್ಥಾನದಲ್ಲಿದೆ. ರಾಜಗಿರಿ, ಬೆಂಗಳೂರು, ಸಿಂಧೂರ, ನೀಲಂ, ಬಾದಾಮಿ, ದೇಶಹರಿ, ಆಮ್ರಪಾಲಿ, ತೋತಾಪುರಿ, ಬಂಗನಪಲ್ಲಿ, ಮಲ್ಲಿಕಾ ಹೀಗೆ ತರಹೇವಾರಿ ಮಾವಿನ ಹಣ್ಣುಗಳನ್ನು ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ.

ದ್ರಾಕ್ಷಿಗೆ ಲಕ್ಷ ಲಕ್ಷ ಬಂಡವಾಳ: ದ್ರಾಕ್ಷಿ ಬೆಳೆಯಬೇಕಾದರೆ ಹೆಕ್ಟೇರ್‌ಗೆ ಸರಿ ಸುಮಾರು 1 ರಿಂದ 2 ಲಕ್ಷ ರೂ., ಖರ್ಚು ಮಾಡಬೇಕು. ಈಗಷ್ಟೇ ರೈತರು ದ್ರಾಕ್ಷಿ ತೋಟಗಳನ್ನು ಗೊಬ್ಬರ ಮತ್ತಿತರ ರಾಸಾಯನಿಕ ಗೊಬ್ಬರಗಳನ್ನು ಸಿಂಪಡಿಸಿ ತೋಟಗಳನ್ನು ಹದ ಮಾಡುತ್ತಿದ್ದಾರೆ. ದ್ರಾಕ್ಷಿ ತೋಟಗಳು ಚಿಗುರಿ ಕೆಲವು ಕಡೆ ಸಣ್ಣ ಸಣ್ಣ ಕಾಯಿಗಳು ಬಿಟ್ಟಿವೆ. ಇತಂಹ ಸಂದರ್ಭದಲ್ಲಿ ಮಳೆಯಾದರೆ ದ್ರಾಕ್ಷಿ ಗುಣಮಟ್ಟ ಕುಸಿಯುವುದರ ಜತೆಗೆ ಹಲವು ರೋಗ ಹರಡುತ್ತವೆ ಎಂಬ ಆತಂಕವನ್ನು ಜಿಲ್ಲೆಯ ದ್ರಾಕ್ಷಿ ಬೆಳೆಗಾರರರು ವ್ಯಕ್ತಪಡಿಸುತ್ತಿದ್ದಾರೆ. ಕಳೆದ ವರ್ಷ ಜಿಲ್ಲೆಯ ದ್ರಾಕ್ಷಿ ಬೆಳೆಗಾರರಿಗೆ ಸರಿಯಾಗಿ ಮಾರುಕಟ್ಟೆಯಲ್ಲಿ ಬೆಲೆ ಸಿಗದೇ ಕೈಗೆ ಬಂದ ಬೆಲೆಗೆ ದ್ರಾಕ್ಷಿ ಮಾರಾಟ ಮಾಡುವಂತಾಯಿತು. ಈ ಬಾರಿಯೂ ಬಂಪರ್‌ ಬೆಳೆ ತೆಗೆದು ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಅಕಾಲಿಕ ಮಳೆ ಭೀತಿ ಆವರಿಸಿದೆ. ಒಂದು ವೇಳೆ ಅಕಾಲಿಕ ಮಳೆ ಅಬ್ಬರ ಹೆಚ್ಚಾದರೆ ಅಪಾರ ಪ್ರಮಾಣದ ದ್ರಾಕ್ಷಿ ಬೆಳೆ ಕಳೆದುಕೊಳ್ಳುವುದರ ಜತೆಗೆ ಮಾವು ಬೆಳೆ ಮೇಲೆಯೂ ದುಷ್ಪರಿಣಾಮ ಬೀರಲಿದೆ.

ಮಾರ್ಚ್‌ನಲ್ಲಿ 2 .20 ಕೋಟಿ ಬೆಳೆ ನಷ್ಟ!: ಜಿಲ್ಲೆಯಲ್ಲಿ ಕಳೆದ ಮಾ.17 ರಂದು ಬಿದ್ದ ಆಲಿಕಲ್ಲು ಸಹಿತ ಭಾರೀ ಮಳೆಯಿಂದಾಗಿ ತೋಟಗಾರಿಕಾ ಇಲಾಖೆ ಅಧಿಕಾರಿಗಳು ನಡೆಸಿರುವ ಬೆಳೆ ನಷ್ಟದ ಪ್ರಾಥಮಿಕ ಸಮೀಕ್ಷೆಯಲ್ಲಿ ಬರೋಬ್ಬರಿ 2.20 ಕೋಟಿಗೂ ಅಧಿಕ ಮೌಲ್ಯದ 100 ಹೆಕ್ಟೇರ್‌ನಲ್ಲಿನ ತೋಟಗಾರಿಕೆ ಬೆಳೆ ಮಳೆಯಿಂದ ಹಾನಿಯಾಗಿವೆ. ಇದೀಗ ಮತ್ತೆ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇದ್ದರೂ ಸಹಜವಾಗಿಯೇ ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ.

Advertisement

ಬೆಳೆ ನಷ್ಟ ಪರಿಹಾರಕ್ಕೆ ಎದುರು ನೋಡುತ್ತಿರುವ ಅನ್ನದಾತ: ಮಾರ್ಚ್‌ನಲ್ಲಿ ಜಿಲ್ಲೆಯ ಗುಡಿಬಂಡೆ, ಶಿಡ್ಲಘಟ್ಟ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಅಪಾರ ಪ್ರಮಾಣದ ದ್ರಾಕ್ಷಿ ಸೇರಿ ಹೂ, ಹಣ್ಣು, ತರಕಾರಿ ಬೆಳೆ ನೆಲ ಕಚ್ಚಿವೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳ ಮಾಹಿತಿಯಂತೆ ಜಿಲ್ಲೆಯಲ್ಲಿ ಒಟ್ಟು 100 ಹೆಕ್ಟೇರ್‌ನಲ್ಲಿ ಬೆಳೆ ನಷ್ಟ ಆಗಿದೆ. ಅದರಲ್ಲೂ ಗುಡಿಬಂಡೆ ತಾಲೂಕಿನ ಒಂದರಲ್ಲಿಯೇ ಅತಿ ಹೆಚ್ಚು 55.60 ಹೆಕ್ಟೇರ್‌ ಬೆಳೆ ನಾಶವಾಗಿದೆ. ಈ ಬಗ್ಗೆ ಈಗಾಗಲೇ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಬೆಳೆ ನಷ್ಟಕ್ಕೀಡಾದ ರೈತರ ಮಾಹಿತಿ ಸಂಗ್ರಹಿಸಿ ಪ್ರಾಕೃತಿಕ ವಿಕೋಪದಡಿ ಪರಿಹಾರಕ್ಕೆ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದು ಸರ್ಕಾರದಿಂದ ಬರುವ ಪರಿಹಾರಕ್ಕೆ ಜಿಲ್ಲೆಯ ಅನ್ನದಾತರು ಎದುರು ನೋಡುವಂತಾಗಿದೆ. ಜಿಲ್ಲೆಯಲ್ಲಿ ಗಾಳಿ ಸಹಿತ ಮಳೆ ಹಾಗೂ ಆಲಿಕಲ್ಲು ಮಳೆಯಾದರೆ ಮಾವು ಹಾಗೂ ದ್ರಾಕ್ಷಿ ಬೆಳೆ ನಷ್ಟವಾಗುತ್ತದೆ.

ಕಳೆದ ಮಾರ್ಚ್‌ ನಲ್ಲಿ ಆಲಿಕಲ್ಲು ಮಳೆಗೆ ಸುಮಾರು 2 ಕೋಟಿ ರೂ, ಮೌಲ್ಯದ 100 ಹೆಕ್ಟೇರ್‌ನಲ್ಲಿ ಹೂ, ಹಣ್ಣು, ತರಕಾರಿ, ಪಪ್ಪಾಯಿ, ದ್ರಾಕ್ಷಿ ಮತ್ತಿ ತರ ತೋಟಗಾರಿಕೆ ಬೆಳೆ ನಷ್ಟವಾಗಿದ್ದು ಪರಿಹಾ ರಕ್ಕಾಗಿ ಜಿಲ್ಲಾಡಳಿತಕ್ಕೆ ಈಗಾಗಲೇ ರೈತರ ವಿವರಗಳೊಂದಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. –ಗಾಯಿತ್ರಿ, ಉಪ ನಿರ್ದೇಶಕರು, ತೋಟಗಾರಿಕಾ ಇಲಾಖೆ

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next