ಮಹಾನಗರ: ಬಂಗಾಲ ಕೊಲ್ಲಿಯ ಫೈಂಜಾಲ್ ಚಂಡಮಾರುತದ ಪರಿಣಾಮ ಮಂಗಳೂರು ನಗರ, ಗ್ರಾಮಾಂತರ, ಕಾಸರಗೋಡು ಜಿಲ್ಲೆಯಾದ್ಯಂತ ಸೋಮವಾರ ಮಧ್ಯಾಹ್ನದ ಬಳಿಕ ಭಾರೀ ಮಳೆ ಸುರಿದಿದೆ. ವಿವಿಧೆಡೆ ರಸ್ತೆಯಲ್ಲಿ ಮಳೆ ನೀರು ಹರಿದ ಪರಿಣಾಮ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಉಳ್ಳಾಲ, ಮೂಡುಬಿದಿರೆ, ಮೂಲ್ಕಿ, ಮಂಗಳೂರು ತಾಲೂಕಿನ ಬಹುತೇಕ ಕಡೆಗಳಲ್ಲಿ ಸಂಜೆ ವೇಳೆ ಭಾರೀ ಮಳೆ ಸುರಿದಿದೆ. ಮಧ್ಯಾಹ್ನ ವರೆಗೆ ಮೋಡ ಕವಿದ ವಾತಾವರಣದೊಂದಿಗೆ ಹನಿ ಮಳೆಯಾಗಿದೆ. ಸಂಜೆ ಯಾಗುತ್ತಲೇ ತೀವ್ರತೆ ಹೆಚ್ಚಾಗಿ, ಗುಡುಗು-ಮಿಂಚಿನ ಅಬ್ಬರದೊಂದಿಗೆ ವ್ಯಾಪಕ ಮಳೆಯಾಗಿದೆ.
ಸಂಜೆ ವೇಳೆ ಮಳೆ ಆರಂಭವಾದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕೆಲಸದಿಂದ ಮಳೆಗೆ ತೆರಳುವವರು ಸಂಕಷ್ಟ ಅನುಭವಿಸಿದರು. ದಟ್ಟ ಮೋಡ ಕವಿದು ಕತ್ತಲೆಯ ವಾತಾವರಣ ಉಂಟಾಗಿತ್ತು. ನೀರು ತುಂಬಿದ ರಸ್ತೆಯಲ್ಲೇ ವಾಹನಗಳು ಸಾಗಿದ ಹಿನ್ನೆಲೆಯಲ್ಲಿ ಸಂಚಾರ ನಿಧಾನವಾಗಿ ದಟ್ಟಣೆ ಉಂಟಾಯಿತು.
ಹಲವು ದಿನಗಳಿಂದ ಉರಿ ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಮಳೆಯಿಂದಾಗಿ ತುಳು ನಿರಾಳತೆ ಅನುಭವಿಸುವಂತಾದರೂ ಆಗಾಗ್ಗೆ ಎರಗುವ ಮಿಂಚು ಮತ್ತು ಗುಡುಗಿನ ಅಬ್ಬರಕ್ಕೆ ಜನರು ಬೆಚ್ಚಿ ಬೀಳುವಂತಾಯಿತು. ದಟ್ಟ ಮೋಡ ಕವಿದ ಹಿನ್ನೆಲೆಯಲ್ಲಿ ಸಂಜೆ 4 ಗಂಟೆಗೇ ವಾಹನಗಳು ಹೆಡ್ಲೈಟ್ ಹಾಕಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಮಳೆ ನೀರು ಹರಿಯುವ ಸಣ್ಣ ತೋಡುಗಳಲ್ಲಿ ನೀರು ತುಂಬಿ ಹರಿದಿದ್ದು, ರಾಜಕಾಲುಗಳಲ್ಲಿಯೂ ಹಲವು ದಿನಗಳ ಬಳಿಕ ನೀರು ಹರಿದಿದೆ. ಕೆಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಮಸ್ಯೆಯಾಯಿತು. ಮಳೆಯ ನಿರೀಕ್ಷೆ ಇಲ್ಲದೆ ಕೊಡೆ, ರೈನ್ ಕೋಟ್ ಮನೆಯಲ್ಲಿ ಬಿಟ್ಟು ಬಂದವರು ಮಳೆಯಿಂದಾಗಿ ಸಂಕಷ್ಟ ಅನುಭವಿಸುವಂತಾಯಿತು.
ಶಿರಿಯಾ ಹೆದ್ದಾರಿಯಲ್ಲಿ ಕೃತಕ ನೆರೆ
ಕುಂಬಳೆ: ಮಂಗಳೂರು – ಕಾಸರಗೋಡು ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಕಾರಣ ಭಾರೀ ಮಳೆಯ ಪರಿಣಾಮ ಹೆದ್ದಾರಿಯ ಉಪ್ಪಳ ಗೇಟ್, ಶಿರಿಯಾ, ಕುಂಬಳೆ ಪರಿಸರದಲ್ಲಿ ಕೃತಕ ನೆರೆ ಸೃಷ್ಟಿಯಾಗಿ ವಾಹನ, ಜನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮಾಳಂಗೈ ಪರಿಸರದಲ್ಲಿ ಮನೆ ಅಂಗಳದಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದು, ಕಾರುಗಳ ಚಕ್ರ ಮುಳುಗುವಷ್ಟ ನೀರು ಸಂಗ್ರಹಗೊಂಡು ಮನೆ ಮಂದಿ ತೊಂದರೆ ಅನುಭವಿಸುವಂತಾಯಿತು.
ತೊಕ್ಕೊಟ್ಟಿನಲ್ಲಿ ಕೃತಕ ನೆರೆ
ಉಳ್ಳಾಲ: ತೊಕ್ಕೊಟ್ಟಿನಲ್ಲಿ ಜಂಕ್ಷನ್ ಅಭಿವೃದ್ಧಿ ಸೇರಿದಂತೆ ಷಟ³ಥ ರಸ್ತೆ ಕಾಮಗಾರಿ ಆರಂಭಗೊಂಡಿದ್ದು, ಮಣ್ಣು ತುಂಬಿಸುವ ಕಾರ್ಯ ನಡೆಯುತ್ತಿದೆ. ಈ ನಡುವೆ ಉಳ್ಳಾಲ ಸೇವಾ ಸೌಧದ ಬಳಿ ಮರದ ಸಣ್ಣ ಮಿಲ್ಲ್ ಕೃತಕ ನೆರೆಯಿಂದ ನೀರು ಒಳ ಬಂದಿದ್ದು, ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.