ಮಂಗಳೂರು : ನೈಋತ್ಯ ರೈಲ್ವೇಯು ಮಂಗಳೂರು-ಯಶವಂತಪುರ ಸಾಪ್ತಾಹಿಕ ಎಕ್ಸ್ ಪ್ರಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿ ಅಧಿಸೂಚನೆ ಹೊರಡಿಸಿದೆ. ಇದರಂತೆ ರೈಲು ಸಂಖ್ಯೆ 16540 ರವಿವಾರ ಬೆಳಗ್ಗೆ 7ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಯಶವಂತಪುರವನ್ನು ಸಂಜೆ 4.30ಕ್ಕೆ ತಲುಪಲಿದೆ. ಪ್ರಸ್ತುತ ಈ ರೈಲು ರವಿವಾರ ಬೆಳಗ್ಗೆ 9.15ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 8.20ಕ್ಕೆ ಯಶವಂತಪುರ ತಲುಪುತ್ತಿದೆ. ಪರಿಷ್ಕೃತ ವೇಳಾಪಟ್ಟಿ ಜು. 16ರಿಂದ ಜಾರಿಗೊಳ್ಳಲಿದೆ.
ಮಂಗಳೂರು-ಬೆಂಗಳೂರು ನಡುವೆ ಸಾವಿರಾರು ಜನರು ರೈಲು ಪ್ರಯಾಣ ಮಾಡುತ್ತಿದ್ದು, ಧಾರ್ಮಿಕ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಗಳನ್ನು ಸಂಪರ್ಕಿಸಲು ಸಹಾಯವಾಗುವಂತೆ ಜನರ ಬೇಡಿಕೆೆಯ ಮೇರೆಗೆ ಹಗಲು ಹೊತ್ತಿನಲ್ಲಿ ರೈಲು ಸಂಖ್ಯೆ 16575/76 ಮಂಗಳೂರು ಜಂ.-ಯಶವಂತಪುರ ಜಂ. ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲನ್ನು ಆರಂಭಿಸಲಾಗಿತ್ತು. ಈ ರೈಲು ಮಂಗಳೂರಿನಿಂದ ಮಧ್ಯಾಹ್ನ 11.30ಕ್ಕೆ ಹೊರಟು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣವನ್ನು ರಾತ್ರಿ 8.45ಕ್ಕೆ ತಲುಪುತ್ತದೆ.
ಕೊರೊನಾ ಹಿನ್ನೆಲೆಯಲ್ಲಿ ರೈಲು ಸಂಚಾರ ಸ್ಥಗಿತಗೊಂಡು ಮತ್ತೆ ಆರಂಭವಾದಾಗ ಶನಿವಾರ/ರವಿವಾರ ರೈಲು ಸಂಖ್ಯೆ 16539/40 ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್ ಪ್ರಸ್ ಆಗಿ ಪುನರಾರಂಭಿಸಲಾಗಿತ್ತು. ಆದರೆ ಇದರ ಪ್ರಯಾಣ ಸುದೀರ್ಘ. ಜತೆಗೆ ವಾರದ ಮೂರು ದಿನ ಸಂಚರಿಸುವ ಗೊಮ್ಮಟೇಶ್ವರ
ಎಕ್ಸ್ ಪ್ರೆಸ್ ಮಂಗಳೂರಿನಿಂದ ಮಧ್ಯಾಹ್ನ ಹೊರಟು ಬೆಂಗಳೂರಿಗೆ ರಾತ್ರಿ ತಲುಪುವ ಕಾರಣ ಅಲ್ಲಿಂದ ಮುಂದಕ್ಕೆ ಪ್ರಯಾಣ ಕಷ್ಟವಾಗುತ್ತಿದೆ. ಇದರಿಂದ ಈ ಎರಡು ರೈಲುಗಳನ್ನು ಮಂಗಳೂರಿನಿಂದ ಬೆಳಗ್ಗೆ 7 ಗಂಟೆಗೆ ಹೊರಟು ಬೆಂಗಳೂರಿಗೆ ಸಂಜೆ ತಲುಪುವಂತೆ ಸಮಯ ಬದಲಾವಣೆ ಮಾಡಬೇಕು ಎಂಬ ಬೇಡಿಕೆ ಪ್ರಯಾಣಿಕರಿಂದ ವ್ಯಕ್ತವಾಗಿತ್ತು.
Related Articles
ಈ ಬಗ್ಗೆ ಮಂಗಳೂರಿನ ಪಶ್ಚಿಮ ಕರಾವಳಿ ರೈಲು ಯಾತ್ರಿಕರ ಸಂಘವು ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಮನವಿ ಸಲ್ಲಿಸಿತ್ತು. ಸಂಸದರು ನೈಋತ್ಯ ರೈಲ್ವೇ, ದಕ್ಷಿಣ ರೈಲ್ವೇಗೆ ಪತ್ರ ಬರೆದಿದ್ದರು. ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿಯ ಸದಸ್ಯರು ಹುಬ್ಬಳ್ಳಿಯ ನೈಋತ್ಯ ರೈಲ್ವೇ ಕಚೇರಿಗೆ ಕಳೆದ ಫೆಬ್ರವರಿಯಲ್ಲಿ ಭೇಟಿ ನೀಡಿ ಸಂಬಂ ಧಿಸಿದ ಅಧಿ ಕಾರಿಗಳಿಗೆ ಮನವರಿಕೆ ಮಾಡಿ ಲಿಖೀತ ಮನವಿಯನ್ನೂ ಸಲ್ಲಿಸಿದ್ದರು.
ಪ್ರಸಕ್ತ ವೇಳಾಪಟ್ಟಿಯಿಂದ ಮಂಗಳೂರಿನಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಊಟ ತಿಂಡಿಗೂ ಸಮಸ್ಯೆ ಆಗುತ್ತಿತ್ತು. ರಾತ್ರಿ ಯಶವಂತಪುರದ ಮೂಲಕ ಹಲವಾರು ರೈಲುಗಳು ಹಾದುಹೋಗುವುದರಿಂದ ಕ್ರಾಸಿಂಗ್, ಪ್ಲಾಟ್‌ಫಾರ್ಮ್ಗಾಗಿ ನಿಲ್ದಾಣದ ಹೊರಭಾಗದಲ್ಲಿ ಈ ರೈಲುಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಮತ್ತಷ್ಟು ವಿಳಂಬವಾಗುತ್ತಿದೆ. ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್-ಯಶವಂತಪುರ ಎಕ್ಸ್‌ಪ್ರೆಸ್ 357 ಕಿ.ಮೀ. ಕ್ರಮಿಸಲು ಪ್ರಸ್ತುತ 11.5 ತಾಸು ತೆಗೆದುಕೊಳ್ಳುತ್ತಿದೆ. ಘಾಟಿ ಪ್ರದೇಶದಲ್ಲಿ ಕ್ರಾಸಿಂಗ್‌ಗಾಗಿಯೂ ಒಂದು ತಾಸು ನಿಲ್ಲಿಸಲಾಗುತ್ತಿದೆ. ವೇಳಾಪಟ್ಟಿ ಬದಲಾವಣೆ ಆದರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ.
ವಾರದಲ್ಲಿ 3 ದಿನ ಸಂಚರಿಸುವ 16576 ಮಂಗಳೂರು ಜಂಕ್ಷನ್-ಯಶವಂತಪುರ ಜಂಕ್ಷನ್ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿ ಪರಿಷ್ಕರಿಸಿ, ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 7ಕ್ಕೆ ಹೊರಟು ಸಂಜೆ 4.15ಕ್ಕೆ ಯಶವಂತಪುರ ತಲುಪುವ ಹಾಗೆ ಈಗಿನ ವೇಳಾಪಟ್ಟಿಯಲ್ಲಿ ಮಾರ್ಪಾಡು ಮಾಡಲು ಮೈಸೂರು ಹಾಗೂ ಬೆಂಗಳೂರು ವಿಭಾಗ ಮತ್ತು ಪಾಲಕ್ಕಾಡ್ ವಿಭಾಗ ಈಗಾಗಲೇ ಒಪ್ಪಿಗೆ ಸೂಚಿಸಿದ್ದು, ನೈಋತ್ಯ ರೈಲ್ವೇಯ ಹುಬ್ಬಳ್ಳಿ ವಲಯದ ಅನುಮೋದನೆ ದೊರೆಯಬೇಕಿದೆ.