Advertisement

Heat Waves: “ಸೂರ್ಯಾಘಾತ’: ಸರಕಾರಿ ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ

11:42 AM Apr 08, 2024 | Team Udayavani |

ಮಂಗಳೂರು: ಕರಾವಳಿ ಭಾಗದಲ್ಲಿಯೂ ಗರಿಷ್ಠ ತಾಪಮಾನ 40 ಡಿಗ್ರಿ ಸೆಲಿÏಯಸ್‌ನತ್ತ ತಲುಪುತ್ತಿದ್ದು, ಹೀಟ್‌ಸ್ಟ್ರೋಕ್‌ (ಸೂರ್ಯಾಘಾತ) ಭೀತಿ ಕಾಡುತ್ತಿದೆ. ಹೀಟ್‌ಸ್ಟ್ರೋಕ್‌ಗೆ ಒಳಗಾದವರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಮಂಗಳೂರು ಸಹಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ವಿಶೇಷ ಹಾಸಿಗೆ ಮೀಸಲಿರಿಸಲಾಗಿದೆ.

Advertisement

ಮಂಗಳೂರಿನ ವೆನಾÉಕ್‌ನಲ್ಲಿ 8 ಹಾಸಿಗೆಯುಳ್ಳ ಐಸಿಯು ಕೇರ್‌ ಮತ್ತು 18 ಹಾಸಿಗೆಗಳುಳ್ಳ ಸಾಮಾನ್ಯ ವಾರ್ಡನ್ನು ಸಜ್ಜುಗೊಳಿಸಲಾಗಿದೆ. ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ, ಉಡುಪಿ, ಕಾರ್ಕಳ, ಕುಂದಾಪುರ ತಾಲೂಕು ಆಸ್ಪತ್ರೆಗಳಲ್ಲಿ ತಲಾ ಎರಡು ಹಾಸಿಗೆಗಳ ಚಿಕಿತ್ಸಾ ಕೊಠಡಿ ಸನ್ನದ್ಧಗೊಳಿಸಲಾಗಿದೆ. ಈ ಕೊಠಡಿಗಳಲ್ಲಿ ಔಷಧ, ಎಸಿ ಸಹಿತ ತುರ್ತು ಆವಶ್ಯಕತೆಗಳನ್ನು ಕಲ್ಪಿಸಲಾಗಿದೆ. ತಜ್ಞ ವೈದ್ಯರನ್ನು ಸನ್ನದ್ಧವಾಗಿರಿಸಲಾಗಿದೆ.

ಮಕ್ಕಳ ಮೇಲೆ ನಿಗಾ ಇರಲಿ
ವಾತಾವರಣದಲ್ಲಿ ಅತಿಯಾದ ಶಾಖದ ಪರಿಣಾಮ ಮಕ್ಕಳ ಮೇಲೆ ಬೀರುವ ಸಾಧ್ಯತೆ ಇದ್ದು, ಎಚ್ಚರ ಅಗತ್ಯ. ಮಕ್ಕಳಲ್ಲಿ ಪ್ರಜ್ಞೆ ತಪ್ಪುವುದು, ಸ್ನಾಯುಗಳ ಸೆಳೆತ, ಅಪಸ್ಮಾರ, ಸಿಡುಕುತನ, ತಲೆನೋವು, ಹೆಚ್ಚು ಬೆವರುವಿಕೆ, ಬಲಹೀನತೆ, ತಲೆ ಸುತ್ತುವುದು, ಗಲಿಬಿಲಿಗೊಂಡಂತೆ ಮಾತನಾ ಡುವುದು, ಉಸಿರಾಟ ಹಾಗೂ ಎದೆಬಡಿತದಲ್ಲಿ ಏರಿಕೆ, ವಾಕರಿಕೆ ಹಾಗೂ ವಾಂತಿಯಾಗುವುದು, ಹಾಸಿಗೆಯಿಂದ ಏಳಲು ಕಷ್ಟವಾಗುವುದು, ದೇಹದ ಉಷ್ಣತೆ 40.5 ಸೆ.ಗಿಂತ ಹೆಚ್ಚಾಗುತ್ತದೆ. ಈ ರೀತಿಯ ಸಮಸ್ಯೆ ಕಂಡುಬಂದರೆ ಪ್ರಥಮ ಚಿಕಿತ್ಸೆಯಾಗಿ ದೇಹವನ್ನು ಒದ್ದೆ ಬಟ್ಟೆಯಿಂದ ಒರೆಸಿರಿ, ಮಗುವನ್ನು ಮಲಗಿಸಿ, ಕಾಲನ್ನು ಸ್ವಲ್ಪ ಎತ್ತರದಲ್ಲಿರಿಸಿ, ಫ್ಯಾನ್‌ ಬಳಸಿ, ಮಗು ಪ್ರಜ್ಞೆ ತಪ್ಪಿದ್ದಲ್ಲಿ ಕುಡಿಯಲು, ತಿನ್ನಲು ಕೊಡಬೇಡಿ, ತೀವ್ರ ರೋಗ ಲಕ್ಷಣ ಇದ್ದರೆ ತತ್‌ಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಿರಿ.

ಏನಿದು ಹೀಟ್‌ ಸ್ಟ್ರೋಕ್‌?
ದೇಹದ ತಾಪಮಾನವನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ ಹೀಟ್‌ ಸ್ಟ್ರೋಕ್‌ ಉಂಟಾಗುತ್ತದೆ. ದೇಹದ ಉಷ್ಣತೆಯ ವೇಗ ಹೆಚ್ಚಾಗಿ ಅತಿಯಾದ ಶಾಖಕ್ಕೆ ಸಿಲುಕುತ್ತದೆ. ಶಾಖಾಘಾತಕ್ಕೆ ಒಳಗಾದವರಲ್ಲಿ ಹೆಚ್ಚಿನ ಮಂದಿ ಬೆವರುವುದಿಲ್ಲ. ಕೆಲ ಸಮಯ ದೇಹದ ಉಷ್ಣತೆ 41.5 ಡಿ.ಸೆ. ಅಥವಾ ಅದಕ್ಕಿಂತ ಹೆಚ್ಚು ಇರುತ್ತದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದರೆ ಆ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆಯೂ ಇರುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಥಮ ಚಿಕಿತ್ಸಾ ಕ್ರಮಗಳು
– ವ್ಯಕ್ತಿಯನ್ನು ತಣ್ಣಗಿನ ಸ್ಥಳದಲ್ಲಿ ಮಲಗಿಸಿ ದೇಹವನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು
– ಕುಡಿಯಲು ಆಗಾಗ್ಗೆ ನೀರನ್ನು ಕೊಡುವುದು
– ವ್ಯಕ್ತಿ ಚೇತರಿಸಿ ಕೊಂಡ ಅನಂತರ ನೀರಿನ ಅಂಶ ಹೆಚ್ಚಾಗಿರುವ ಪದಾರ್ಥ ನೀಡಬೇಕು

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯಕ್ಕೆ ಹೀಟ್‌ ಸ್ಟ್ರೋಕ್‌ನ ಯಾವುದೇ ಪ್ರಕರಣ ಕಂಡುಬಂದಿಲ್ಲ. ಆದರೂ ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ವಹಿಸಲಾ ಗುತ್ತಿದೆ. ವೆನಾÉಕ್‌ ಆಸ್ಪತ್ರೆ ಸಹಿತ ಜಿಲ್ಲೆಯ ಸರಕಾರಿ ತಾಲೂಕು ಆಸ್ಪತ್ರೆಯಲ್ಲಿ ಹೀಟ್‌ ಸ್ಟ್ರೋಕ್‌ ಚಿಕಿತ್ಸೆಗೆಂದು ಪ್ರತ್ಯೇಕ ಹಾಸಿಗೆ ಮೀಸಲಿಡಲಾಗಿದೆ.
– ಡಾ| ತಿಮ್ಮಯ್ಯ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

ಉಡುಪಿ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ತಲಾ 2 ಬೆಡ್‌, ಉಡುಪಿ ಜಿಲ್ಲಾಸ್ಪತ್ರೆಯಲ್ಲಿ 5 ಬೆಡ್‌ಗಳನ್ನು ಮೀಸಲಾಗಿಡಲಾಗಿದೆ. ಈ ವರೆಗೆ ಸೂರ್ಯಾಘಾತದ ಯಾವುದೇ ಪ್ರಕರಣ ಜಿಲ್ಲೆಯಲ್ಲಿ ವರದಿಯಾಗಿಲ್ಲ.
– ಡಾ| ಐ.ಪಿ. ಗಡಾದ್‌, ಜಿಲ್ಲಾ ಆರೋಗ್ಯ ಅಧಿಕಾರಿ

ಸೂರ್ಯಾಘಾತದಿಂದ ರಕ್ಷಣೆ ಹೇಗೆ?
– ಮಧ್ಯಾಹ್ನ ಸಮಯದಲ್ಲಿ ಶ್ರಮದಾಯಕ ಕೆಲಸಗಳನ್ನು ಮಾಡಬೇಡಿ
– ಹೆಚ್ಚು ನೀರನ್ನು ಕುಡಿಯಿರಿ
– ಹೆಚ್ಚು ಸಕ್ಕರೆಯುಕ್ತ ಪಾನೀಯಗಳು/ಕಾಬೋìನೇಟೆಡ್‌ ಪಾನೀಯ ಕುಡಿಯಬೇಡಿ. ಇದರಿಂದ ನಿರ್ಜಲೀಕರಣ ಉಂಟಾಗುತ್ತದೆ
– ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿರಿ
– ಹೊರಾಂಗಣ ಕೆಲಸ ಮಾಡುವಾಗ ಆಗಾಗ್ಗೆ ವಿಶ್ರಾಂತಿ ಪಡೆಯಿರಿ

Advertisement

Udayavani is now on Telegram. Click here to join our channel and stay updated with the latest news.

Next