Advertisement

Mangaluru: ಸಂಗ್ರಹಿಸಿದ ಪ್ಲಾಸ್ಟಿಕನ್ನು ಏನ್ಮಾಡ್ತಾರೆ?

03:29 PM Oct 28, 2024 | Team Udayavani |

ಮಹಾನಗರ: ಪ್ಲಾಸ್ಟಿಕ್‌ ಹಾಗೂ ಇತರ ತ್ಯಾಜ್ಯ ಜತೆಯಾಗಿ ಸುರಿಯಲಾಗುತ್ತಿದ್ದ ಕಾರಣದಿಂದಾಗಿ ಪಚ್ಚನಾಡಿಯಲ್ಲಿ ತ್ಯಾಜ್ಯದ ಪರ್ವತವೇ ನಿರ್ಮಾಣಗೊಂಡಿತ್ತು. 2019ರಲ್ಲಿ ಈ ಪ್ಲಾಸ್ಟಿಕ್‌ ಗುಡ್ಡ ಕುಸಿದು ಮಂದಾರ ಎನ್ನುವ ಊರನ್ನೇ ಬಲಿ ಪಡೆದುಕೊಂಡಿತ್ತು. ಈಗ ಮಂಗಳೂರು ಪಾಲಿಕೆ ಪ್ಲಾಸ್ಟಿಕ್‌ ತ್ಯಾಜ್ಯವನ್ನು ನಿಯಂತ್ರಿಸಬೇಕೆನ್ನುವ ನಿಟ್ಟಿನಲ್ಲಿ ಹಸಿಕಸ ಒಣಕಸ ಪ್ರತ್ಯೇಕ ಸಂಗ್ರಹ ಕಾರ್ಯ ನಡೆಸುತ್ತಿದೆ.

Advertisement

ಮಂಗಳೂರು ನಗರದ 60 ವಾರ್ಡ್‌ಗಳಿಂದ ಪ್ರತೀ ಶುಕ್ರವಾರ 200 ಟನ್‌ ಒಣ ಕಸ ಸಂಗ್ರಹಿಸಲಾಗುತ್ತದೆ. ಸಂಗ್ರಹಣೆ ಸಂದರ್ಭವೇ ಈ ಪ್ರತ್ಯೇಕಿಸುವ ಪ್ರಾಥಮಿಕ ಹಂತದ ಕೆಲಸವನ್ನು ಪೌರ ಕಾರ್ಮಿಕರು ಮಾಡುತ್ತಾರೆ. ಉಳಿದ ಪ್ಲಾಸ್ಟಿಕ್‌ ಹಾಗೂ ಇನ್ನಿತರ ವಸ್ತುಗಳನ್ನು ಪಚ್ಚನಾಡಿಯ ಡ್ರೈ ವೇಸ್ಟ್‌ ಏರಿಯಾದಲ್ಲಿ ಸಂಗ್ರಹಿಸಲಾಗುತ್ತದೆ.

ಪಚ್ಚನಾಡಿಯಲ್ಲಿ ಪ್ಲಾಸ್ಟಿಕ್‌ಗಳ ವಿಭಜನೆ
ಪಚ್ಚನಾಡಿಯಲ್ಲಿ ಸಂಗ್ರಹವಾಗುವ ಒಣ ಕಸದಲ್ಲಿ ಅತ್ಯಧಿಕ ಪ್ರಮಾಣ ಇರುವುದು ಪ್ಲಾಸ್ಟಿಕ್‌. ಪ್ಲಾಸ್ಟಿಕ್‌ ರಾಶಿಯಿಂದ ಇತರ ವಸ್ತುಗಳನ್ನು ಪ್ರತ್ಯೇಕಿ ಸುವ ಕೆಲಸ ಮಾಡಲಾಗುತ್ತದೆ. ಎಲ್ಲ ವಿಧವಾದ ಪ್ಲಾಸ್ಟಿಕ್‌ ಲಕೋಟೆಗಳು, ಮಲ್ಟಿ ಲೇಯರ್‌ ಪ್ಲಾಸ್ಟಿಕ್‌ಗಳು ಹಾಗೂ ಬಣ್ಣದ ತೊಟ್ಟೆಗಳನ್ನು ಸಂಗ್ರಹಿಸಲಾಗುತ್ತದೆ.

30 ಮಂದಿ ಸಿಬಂದಿಗಳು
ಪ್ಲಾಸ್ಟಿಕ್‌ ಪ್ರತ್ಯೇಕಿಸುವ ಕೆಲಸಕ್ಕೆ ನೇಚರ್‌ ಫ್ರೆಂಡ್ಲಿ ಸಂಸ್ಥೆಗೆ ಜವಾಬ್ದಾರಿ ನೀಡಲಾಗಿದ್ದು, 30 ಮಂದಿ ಸಿಬಂದಿ ಈ ಕೆಲಸದಲ್ಲಿ ಕೈಜೋಡಿಸಿದ್ದಾರೆ. ನಿತ್ಯ ಒಬ್ಬರು 30 ಕೆ.ಜಿ.ಯಷ್ಟು ಪ್ಲಾಸ್ಟಿಕ್‌ನ್ನು ಪ್ರತ್ಯೇಕಿಸುತ್ತಾರೆ.

ಬಯೋ ಮೈನಿಂಗ್‌ ಚಟುವಟಿಕೆ
ಈ ನಡುವೆ, ಈ ಹಿಂದೆಯೇ ಸಂಗ್ರಹವಾಗಿ ರುವ ಪ್ಲಾಸ್ಟಿಕ್‌ ಸಹಿತ ತ್ಯಾಜ್ಯ ಗುಡ್ಡವನ್ನು ತೆರವು ಗೊಳಿಸುವ ಕೆಲಸ ಚಾಲ್ತಿಯಲ್ಲಿದೆ. ಮಳೆಗಾಲ ಹೊರತುಪಡಿಸಿ, ಬಯೋ ಮೈನಿಂಗ್‌ ಮೂಲಕ ಪ್ಲಾಸ್ಟಿಕ್‌ ವಸ್ತುಗಳನ್ನು ಪ್ರತ್ಯೇಕಿಸಿ ಅವುಗಳನ್ನು ಸಿಮೆಂಟ್‌ ಕಾರ್ಖಾನೆಗೆ ರವಾನಿಸಲಾಗುತ್ತದೆ.

Advertisement

ಸಾರ್ವಜನಿಕರ ಅಭಿಪ್ರಾಯ
ಪರಿಸರಕ್ಕೆ ಮಾರಕವಾಗಿರುವ ಹಿನ್ನೆಲೆಯಲ್ಲಿ ತೆಳುವಾದ ಪ್ಲಾಸ್ಟಿಕ್‌ಗಳ ಉತ್ಪಾದನೆಯನ್ನೇ ನಿಷೇಧಿಸಬೇಕು. ಸರಕಾರಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಬೇಕು. ಸಮರ್ಪಕ ಸಿಸಿ ಕೆಮರಾಗಳನ್ನು ಅಳವಡಿಸುವುದರಿಂದ ಯಾರು ಕಾನೂನು ಪಾಲಿಸುವುದಿಲ್ಲ ಎಂದು ಪರಿಶೀಲಿಸಲು ಸಾಧ್ಯವಿದೆ. ಅಂತಹವರಿಗೆ ವಿದೇಶಗಳಲ್ಲಿರುವಂತೆ ದಂಡವನ್ನು ವಿಧಿಸಬೇಕು. ಶಾಲಾ ಪಠ್ಯದಲ್ಲಿಯೂ ಸ್ವತ್ಛ ಭಾರತಕ್ಕೆ ಸಂಬಂಧಪಟ್ಟ ವಿಚಾರ ಸೇರಿಸಬೇಕು. ಒಣ ಕಸ ವಿಲೇವಾರಿಯನ್ನು ಮನಪಾ ವಾರದಲ್ಲಿ ಎರಡು ದಿನ ಮಾಡುವಂತೆ ಕ್ರಮ ಕೈಗೊಳ್ಳಬೇಕು.
-ಯು. ರಾಮರಾವ್‌, ಕೊಟ್ಟಾರಚೌಕಿ, ಮಂಗಳೂರು

ಪಚ್ಚನಾಡಿಯಲ್ಲಿದೆ ಪ್ಲಾಸ್ಟಿಕ್‌ ಮನೆ!
ಪ್ಲಾಸ್ಟಿಕ್‌ ಫಾರ್‌ ಚೇಂಜ್‌ ಇಂಡಿಯಾ ಫೌಂಡೇಶನ್‌ನಿಂದ ರಾಜ್ಯದಲ್ಲೇ ಮೊದಲ ಬಾರಿಗೆ ಪಚ್ಚನಾಡಿಯಲ್ಲಿ ಪ್ಲಾಸ್ಟಿಕ್‌ ಮನೆ ನಿರ್ಮಿಸಲಾಗಿದೆ. 4.5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಲಾಗಿತ್ತು. ಶಿಟ್‌, ಗೋಡೆ ಎಲ್ಲವೂ ಪ್ಲಾಸ್ಟಿಕ್‌ನಿಂದ ನಿರ್ಮಿಸಲಾಗಿರುವುದು ಈ ಮನೆಯ ವಿಶೇಷತೆ. ಅಲ್ಲದೆ ಸಿಒಡಿಪಿ ಸಂಸ್ಥೆಯ ಮೂಲಕ ಕದ್ರಿ ಪಾರ್ಕ್‌ನಲ್ಲಿ ಪ್ಲಾಸ್ಟಿಕ್‌ ಬಾಟಲ್‌ ಹಾಗೂ ಸಣ್ಣಪುಟ್ಟ ಚೂರುಗಳನ್ನು ಬಳಸಿಕೊಂಡು ಕುಳಿತುಕೊಳ್ಳುವ ಬೆಂಚು ನಿರ್ಮಿಸಲಾಗಿದೆ. ಸಾರ್ವಜನಿಕವಾಗಿಯೂ ಪ್ಲಾಸ್ಟಿಕ್‌ ಮರು ಬಳಕೆಗೆ ಯೋಗ್ಯ ಎಂಬುದನ್ನು ಇದು ಸಾಬೀತುಪಡಿಸಿದೆ.

ಪ್ಲಾಸ್ಟಿಕ್‌ ಪ್ರತ್ಯೇಕಿಸುವ ವಿಧಾನ
ಪ್ಲಾಸ್ಟಿಕ್‌ ರಾಶಿಯಿಂದ ಮರು ಬಳಕೆಗೆ ಯೋಗ್ಯವಾಗುವ ವಸ್ತುಗಳಲ್ಲಿ ಲೋ ವ್ಯಾಲ್ಯೂ(ಕಡಿಮೆ ಮೌಲ್ಯದ) ಹಾಗೂ ಹೈ ವ್ಯಾಲ್ಯೂ(ಅಧಿಕ ಮೌಲ್ಯದ) ಬಾಟಲ್‌ಗ‌ಳನ್ನು ಪ್ರತ್ಯೇಕಿಸುವ ಕೆಲಸ ನಡೆಸಲಾಗುತ್ತದೆ. ಅದರಂತೆ ಮದ್ಯದ ಬಾಟಲ್‌ಗ‌ಳು, ಹಾರ್ಪಿಕ್‌, ಫಿನಾಯಿಲ್‌ ಬಾಟಲ್‌ಗ‌ಳು ಹಾಗೂ ಅವುಗಳಿಗೆ ಸಮಾನವಾದ ಬಾಟಲ್‌ಗ‌ಳು, ಗಾಜಿನ ವಸ್ತುಗಳು, ಗಟ್ಟಿ ಪ್ಲಾಸ್ಟಿಕ್‌ ವಸ್ತುಗಳನ್ನು ವಿಂಗ ಡಿ ಸ‌ಲಾಗುತ್ತದೆ. ಇವುಗಳನ್ನು ಮರುಬಳಕೆಗೆ ಗುಜರಾತ್‌ ಹಾಗೂ ತಮಿಳುನಾಡಿಗೆ ರವಾನಿಸಲಾಗುತ್ತದೆ.

ಸಿಮೆಂಟ್‌ ಫ್ಯಾಕ್ಟರಿಗೆ ರವಾನೆ
ಪ್ರತ್ಯೇಕಿಸಿದ ವಸ್ತುಗಳಲ್ಲಿ ಮರುಬಳಕೆಯಾಗದ ಪ್ಲಾಸ್ಟಿಕನ್ನು ಸುಮಾರು 700 ಕೆ.ಜಿ.ಯಷ್ಟು ಬಂಡಲ್‌ಗ‌ಳನ್ನಾಗಿ ಮಾಡಲಾಗುತ್ತದೆ. ಸುಮಾರು 9 ಟನ್‌ನಷ್ಟು ಪ್ಲಾಸ್ಟಿಕನ್ನು ಒಂದೊಂದು ವಾಹನದ ಮೂಲಕ ಗುಲ್ಬರ್ಗಾ ಸೇಡಂನಲ್ಲಿರುವ ಸಿಮೆಂಟ್‌ ಫ್ಯಾಕ್ಟರಿಗೆ ರವಾನಿಸಲಾಗುತ್ತದೆ. ಯಾವುದಕ್ಕೂ ಉಪಯೋಗಕ್ಕೆ ಬರದ ಪ್ಲಾಸ್ಟಿಕನ್ನು ಅಂತಿಮವಾಗಿ ಸಿಮೆಂಟ್‌ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಪ್ಲಾಸ್ಟಿಕ್‌ ನಿಯಂತ್ರಣ ನಿಮ್ಮ ತಂತ್ರ ಹಂಚಿಕೊಳ್ಳಿ
ಪ್ಲಾಸ್ಟಿಕ್‌ ನಿಯಂತ್ರಣದ ಬಗ್ಗೆ ಅನೇಕ ಸಂಘಟನೆಗಳು, ವಿದ್ಯಾಸಂಸ್ಥೆಗಳು ಧನಾತ್ಮಕ ಕಾರ್ಯತಂತ್ರ ರೂಪಿಸಿವೆ. ಅಂತಹ ಕಾರ್ಯಗಳಿದ್ದಲ್ಲಿ ಹಂಚಿಕೊಳ್ಳಬಹುದು. ವಾಟ್ಸಪ್‌: 9900567000

-ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next