Advertisement

ಕಟ್ಟಡ ನಿರ್ಮಾಣಕ್ಕೆ ನೀರು ಸ್ಥಗಿತ

10:54 AM Apr 29, 2019 | Naveen |

ಮಹಾನಗರ : ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ರಚನೆ ಉದ್ದೇಶಕ್ಕೆ ಬಳಸುವ ನೀರಿನ ಸಂಪರ್ಕವನ್ನು ಇದೀಗ ಸ್ಥಗಿತಗೊಳಿಸಲಾಗಿದೆ.

Advertisement

ನಿರ್ಮಾಣ ಕಟ್ಟಡಗಳ ಬಳಕೆಗೆಂದು ಮಹಾನಗರ ಪಾಲಿಕೆಯು ಪ್ರತ್ಯೇಕ ಪೈಪ್‌ಲೈನ್‌ ಮುಖೇನ ಪ್ರತೀ ದಿನ 6 ಮಿಲಿ ಯನ್‌ ಲೀಟರ್‌ ನೀರು ಸರಬರಾಜು ಮಾಡುತ್ತಿತ್ತು. ವಾಡಿಕೆಯಂತೆ ಮುಂಗಾರು ಆರಂಭಗೊಳ್ಳಲು ಇನ್ನೂ, ಸುಮಾರು ಒಂದು ತಿಂಗಳು ಬಾಕಿ ಇದೆ. ಮುಂಗಾರು ಪ್ರಾರಂಭವಾಗುವವರೆಗೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಾರದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ಪಾಲಿಕೆ ಈ ನಿರ್ಧಾರ ಕೈಗೊಂಡಿದೆ.

ತುಂಬೆ ಡ್ಯಾಂ ನೀರನ್ನು ಕುಡಿಯಲು ಮಾತ್ರ ಬಳಸಲು ಪಾಲಿಕೆ ನಿರ್ಧರಿಸಿದೆ. ಇದಕ್ಕಾಗಿ ಕೈಗಾರಿಕೆಗಳಿಗೆ ಹೋಗುವ ನೀರನ್ನು ಕೂಡ ಕೆಲವು ದಿನಗಳ ಹಿಂದೆ ಕಡಿಮೆ ಮಾಡಲಾಗಿತ್ತು. ಎಂಆರ್‌ಪಿಎಲ್ ಮತ್ತು ಎಂಎಸ್‌ಇಝಡ್‌ ಸಂಸ್ಥೆಯು ಎಎಂಆರ್‌ ಕಿಂಡಿ ಅಣೆಕಟ್ಟಿನಿಂದ ನೀರನ್ನು ಬಳಕೆ ಮಾಡುತ್ತಿದ್ದು, ಇದರಲ್ಲಿ ಎಂಎಸ್‌ಇಝಡ್‌ ಸಂಸ್ಥೆಗೆ 27 ಎಂ.ಜಿ.ಡಿ. ಮತ್ತು ಎಂಆರ್‌ಪಿಎಲ್ ಸಂಸ್ಥೆಗೆ 6 ಎಂ.ಜಿ.ಡಿ. ನೀರನ್ನು ಮೇಲೆತ್ತಲು ಅನುಮತಿ ಇತ್ತು. ಈ ಎರಡೂ ಸಂಸ್ಥೆಯು ಬೇಸಗೆ ಪ್ರಾರಂಭವಾದ ಅವಧಿಯಲ್ಲಿ 18 ಎಂ.ಜಿ.ಡಿ. ನೀರನ್ನು ಬಳಕೆ ಮಾಡುತ್ತಿದ್ದರು. ಇತ್ತೀಚೆಗೆಯಷ್ಟೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಡೆಸಿ ನೀರು ಬಳಕೆ ಪ್ರಮಾಣವನ್ನು ತೀರ್ಮಾನಿಸಲಾಗಿತ್ತು. ಈಗ ಎಎಂಆರ್‌ ಅಣೆಕಟ್ಟಿನಲ್ಲಿ ಬಹುತೇಕ ನೀರು ಖಾಲಿಯಾಗಿರುವುದರಿಂದ ಈ ಎರಡೂ ಸಂಸ್ಥೆಗಳು ಸೇರಿ ದಿನಕ್ಕೆ 6.50 ಎಂ.ಜಿ.ಡಿ. ಮಾತ್ರ ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ತುಂಬೆ ಡ್ಯಾಂನಲ್ಲಿ ಎ. 28ರಂದು ಮಧ್ಯಾಹ್ನ ವೇಳೆ 4.90 ಮೀಟರ್‌ ನೀರಿತ್ತು. ನಿರಂತರ ನೀರು ಪೂರೈಕೆ ಮಾಡಿದರೆ ಮುಂದಿನ 28 ದಿನಗಳಿಗೆ ಸಾಕಾಗುತ್ತದೆ. ನಗರದಲ್ಲಿ ದಿನವೊಂದಕ್ಕೆ 137 ಎಂ.ಎಲ್.ಡಿ. ನೀರಿಗೆ ಬೇಡಿಕೆ ಇದೆ.

ಪ್ರತೀ ದಿನ ತುಂಬೆಯಿಂದ 18 ಎಂಜಿಡಿ ಪೈಪ್‌ಲೈನ್‌ ಮುಖೇನ ನಗರಕ್ಕೆ 160 ಎಂಎಲ್ಡಿ ನೀರು ಸರಬರಾಜು ಆಗುತ್ತಿದೆ.

Advertisement

ನಗರದಲ್ಲಿ ದಿನವೊಂದಕ್ಕೆ ಮನೆ ಬಳಕೆಗೆ 73 ಮಿಲಿಯನ್‌ ಲೀಟರ್‌, ಇತರ ಕಟ್ಟಡಗಳಿಗೆ 15 ಮಿಲಿಯನ್‌ ಲೀಟರ್‌, ನಿರ್ಮಾಣ ಕಟ್ಟಡಗಳಿಗೆ 6 ಮಿಲಿಯನ್‌ ಲೀಟರ್‌, ಬಹುಮಹಡಿ ಕಟ್ಟಡ ಸಂಕೀರ್ಣಗಳಿಗೆ 10 ಮಿಲಿಯನ್‌ ಲೀಟರ್‌, ಕೈಗಾರಿಕೆಗಳಿಗೆ 13 ಮಿಲಿಯನ್‌ ಲೀಟರ್‌ ನೀರು ಪ್ರತೀ ದಿನ ಬಳಕೆಯಾಗುತ್ತಿದೆ.

ಕಟ್ಟಡ ಕೆಲಸಕ್ಕೆ ನೀರು ಬಳಕೆ ಸ್ಥಗಿತ
ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಹರಿವು ಇಲ್ಲದ ಕಾರಣದಿಂದಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ರಚನೆ ಉದ್ದೇಶಕ್ಕೆ ಬಳಸುವ ನೀರಿನ ಜೋಡಣೆಯನ್ನು ಸ್ಥಗಿತಗೊಳಿಸಲಾಗಿದೆ.
ಲಿಂಗೇಗೌಡ,
ಪಾಲಿಕೆ ಕಾರ್ಯನಿರ್ವಾಹಕ ಅಭಿಯಂತರ

ಕುಡಿಯುವ ನೀರಿಗೆ ಪ್ರಾಶಸ್ತ್ಯ
ಪಾಲಿಕೆಯು ಕಟ್ಟಡ ನಿರ್ಮಾಣಕ್ಕೆ ನೀರು ಕಡಿತಗೊಳಿಸಿದ್ದಕ್ಕೆ ನಮ್ಮ ವಿರೋಧವಿಲ್ಲ. ಏಕೆಂದರೆ, ಕುಡಿಯುವ ನೀರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಸದ್ಯ ಕಟ್ಟಡ ನಿರ್ಮಾಣಕ್ಕೆ ನೀರಿನ ಆವಶ್ಯಕತೆಗೆಂದು ಬಾವಿ, ಕೊಳವಿಬಾವಿಯ ನೀರನ್ನು ಉಪಯೋಗಿಸುತ್ತಿದ್ದೇವೆ.
ಪುಷ್ಪರಾಜ್‌ ಜೈನ್‌,
ಕ್ರೆಡಾಯ್‌ ರಾಜ್ಯ ಉಪಾಧ್ಯಕ್ಷ

ಹೊಟೇಲ್ ಗಳಿಗೂ ನೀರಿನ ಕೊರತೆ
ನಗರದಲ್ಲಿ ಶಾಕಾಹಾರಿ ಮತ್ತು ಮಾಂಸಾಹಾರಿ ಸಹಿತ ಸುಮಾರು 400ರಿಂದ 500 ಹೊಟೇಲ್ಗಳಿವೆ. ಕೆಲವೊಂದು ಹೊಟೇಲ್ಗಳಲ್ಲಿ ಬಾವಿ ಮತ್ತು ಕೊಳವೆಬಾವಿಯ ವ್ಯವಸ್ಥೆ ಇದೆ. ಇನ್ನುಳಿದ ಹೊಟೇಲ್ಗಳಲ್ಲಿ ಸದ್ಯ ನೀರಿನ ಅಭಾವವಿದೆ. ಕೆಲವೊಂದು ಹೊಟೇಲ್ಗಳಿಗೆ ಟ್ಯಾಂಕರ್‌ ಮುಖೇನ ನೀರು ಸರಬರಾಜು ಮಾಡಲಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಹೊಟೇಲ್ಗಳು ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು ಎನ್ನುತ್ತಾರೆ ಹೊಟೇಲ್ ಮಾಲಕರು.

ವಿಶೇಷ ವರದಿ

 

Advertisement

Udayavani is now on Telegram. Click here to join our channel and stay updated with the latest news.

Next