Advertisement

Mangaluru University ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಆರಂಭದಲ್ಲೇ ಪಾಠ ಕೊರತೆ ಭೀತಿ!

12:57 AM Aug 08, 2024 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾ ನಿಲಯ ವ್ಯಾಪ್ತಿಯಲ್ಲಿ ಆ. 12ಕ್ಕೆ ಪದವಿ ತರಗತಿ ಆರಂಭವಾಗುತ್ತಿದ್ದರೂ ಸರಕಾರಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಇನ್ನೂ ಆಗಿಲ್ಲ; ಹೀಗಾಗಿ ವಿದ್ಯಾರ್ಥಿಗಳಿಗೆ ತರಗತಿ ಆರಂಭದಲ್ಲೇ “ಪಾಠ ಕೊರತೆ’ ಲಕ್ಷಣ ಎದುರಾಗಿದೆ!

Advertisement

ವಿ.ವಿ. ವ್ಯಾಪ್ತಿಯಲ್ಲಿ 35 ಸರಕಾರಿ ಕಾಲೇಜುಗಳಿವೆ. ಶೇ. 30ರಿಂದ 40ರಷ್ಟು ಖಾಯಂ ಉಪನ್ಯಾಸಕರಿದ್ದು, ಶೇ. 60ಕ್ಕಿಂತ ಅಧಿಕವಾಗಿ (600ರಷ್ಟು)ಅತಿಥಿ ಉಪನ್ಯಾಸಕರ ಅಗತ್ಯವಿದೆ.ಕಳೆದ ಸಾಲಿನಲ್ಲಿ (2023-24) ಆ. 23ಕ್ಕೆ ಕಾಲೇಜು ಆರಂಭವಾಗಿದ್ದರೂ ಅಕ್ಟೋಬರ್‌ 7ಕ್ಕೆ ಕೌನ್ಸೆಲಿಂಗ್‌ ನಡೆಸಿ ಅತಿಥಿ ಉಪನ್ಯಾಸಕರ ನೇಮಕಾತಿ ಆಗಿತ್ತು. ಹೀಗಾಗಿ ಆರಂಭದ 45 ದಿನ ಅತಿಥಿ ಉಪನ್ಯಾಸಕರಿಲ್ಲದೆ ಮಕ್ಕಳಿಗೆ ತರಗತಿ ನಷ್ಟವಾಗಿದೆ. ಈ ಬಾರಿ ಇನ್ನೆಷ್ಟು ದಿನ ತರಗತಿ ನಷ್ಟ ಎಂಬುದನ್ನು ನೋಡಬೇಕಿದೆ.

ಕೌನ್ಸೆಲಿಂಗ್‌ಗೆ ಇನ್ನೆಷ್ಟು ದಿನ?
ಸರಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ಅನಂತರ ಉಳಿಕೆಯಾಗಿರುವ ಬೋಧನಾ ಕಾರ್ಯಭಾರಕ್ಕೆ ಅನುಗುಣವಾಗಿ ಅತಿಥಿ ಉಪನ್ಯಾಸಕರನ್ನು ಆನ್‌ಲೈನ್‌ ಕೌನ್ಸೆಲಿಂಗ್‌ ಮೂಲಕ ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ಅರ್ಜಿ ಸಲ್ಲಿಕೆ ಆಗಿ, ರಾಜ್ಯವ್ಯಾಪಿ ಮೆರಿಟ್‌ ಪಟ್ಟಿ ಪ್ರಕಟಿಸಿ, ಇದರಲ್ಲಿ ತಾತ್ಕಾಲಿಕ ಕಾರ್ಯಭಾರ ಹಾಗೂ ಕೌನ್ಸೆಲಿಂಗ್‌ಗಾಗಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ. ಮೆರಿಟ್‌ ಪಟ್ಟಿಯನ್ವಯ ಕೌನ್ಸೆಲಿಂಗ್‌ ನಡೆಸಿ ಕಾಲೇಜು ಆಯ್ಕೆ ಮಾಡಿ, ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುತ್ತದೆ. ಬಳಿಕವಷ್ಟೇ ಅತಿಥಿ ಉಪನ್ಯಾಸಕರು ಕಾಲೇಜಿಗೆ ಬರಲಿದ್ದಾರೆ. ಒಂದು ವೇಳೆ 2ನೇ ಹಂತದ ಕೌನ್ಸೆಲಿಂಗ್‌ ನಡೆಯಲಿದ್ದರೆ ಇನ್ನಷ್ಟು ದಿನ ಬೇಕು!

ಆಯಾ ವಿ.ವಿ. ವ್ಯಾಪ್ತಿಯಲ್ಲಿ ನೇಮಕ
“ರಾಜ್ಯದಲ್ಲಿ ಪದವಿ ತರಗತಿ ಆರಂಭಕ್ಕೆ ಏಕರೂಪದ ಶೈಕ್ಷಣಿಕ ವೇಳಾಪಟ್ಟಿ ಪ್ರಾರಂಭಿಸಬೇಕು. ಅಲ್ಲಿಯವರೆಗೆ ಆಯಾ ವಿ.ವಿ. ವ್ಯಾಪ್ತಿಯ ಶೈಕ್ಷಣಿಕ ಕ್ಯಾಲೆಂಡರ್‌ ಪ್ರಕಾರವೇ ಅತಿಥಿ ಉಪನ್ಯಾಸಕರನ್ನು ನೇಮಿಸುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಗಳಾಗುವುದಿಲ್ಲ. 10 ತಿಂಗಳುಪೂರ್ಣವಾದ ಕಾರಣದಿಂದ ಆ. 6ರಂದು ನಮ್ಮನ್ನು ಬಿಡುಗಡೆಗೊಳಿಸಲಾಗಿದೆ. ಆದರೆ
ಶೈಕ್ಷಣಿಕ ಕ್ಯಾಲೆಂಡರ್‌ ಮುಗಿಯದೆ ಕೆಲವು ವಿ.ವಿ.ಗಳ ಅತಿಥಿ ಉಪನ್ಯಾಸಕರನ್ನು ಈಗಲೂ ಮುಂದುವರಿಸಿ ರುವುದು ಸರಕಾರದ ದ್ವಂದ್ವ ನಿಲುವು. ಇದರ ಬದಲು ಮಂಗಳೂರು ವ್ಯಾಪ್ತಿಯಲ್ಲಿ ಕಾಲೇಜು ಆರಂಭದ ಸಮಯದಲ್ಲಿ ನಮಗೂ ಇಂತಹುದೇ ಅವಕಾಶ ಕಲ್ಪಿಸಲಿ’ ಎನ್ನುತ್ತಾರೆ ಅತಿಥಿ ಉಪನ್ಯಾಸಕ ಸಂಘದ ಪ್ರಮುಖ ಧೀರಜ್‌ ಕುಮಾರ್‌.

ಕೆಲವೆಡೆ ಬಿಡುಗಡೆ; ಉಳಿದೆಡೆ ಮುಂದುವರಿಕೆ!
ವಿ.ವಿ. ಶೈಕ್ಷಣಿಕ ವೇಳಾಪಟ್ಟಿಯಂತೆ (2023-24ಕ್ಕೆ) ಈಗಾಗಲೇ ತರಗತಿ ಮುಕ್ತಾಯವಾದ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಸೇವೆಯನ್ನು ಆ. 6ಕ್ಕೆ ಸೀಮಿತಗೊಳಿಸಿ ಸರಕಾರ ಕರ್ತವ್ಯದಿಂದ ಬಿಡುಗಡೆ ಮಾಡಿದೆ. ಹೀಗಿದ್ದರೂ ರಾಜ್ಯದ ಕೆಲವು ವಿ.ವಿ.ಗಳ ಶೈಕ್ಷಣಿಕ ವೇಳಾಪಟ್ಟಿ ಸೆಪ್ಟಂಬರ್‌ವರೆಗೂ ಮುಂದುವರಿಯುವುದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಂತಹ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ಆಯಾ ಪ್ರಾಂಶುಪಾಲರ ಹಂತದಲ್ಲಿ ಆಯ್ಕೆ ಮಾಡಲು ಸರಕಾರ ಈ ಬಾರಿ ಅನುಮತಿ ನೀಡಿದೆ.ಆದರೆ ಮಂಗಳೂರು ವಿ.ವಿ.ಯಲ್ಲಿ ಪದವಿ ತರಗತಿ ಆ. 12ಕ್ಕೆ ಆರಂಭವಾಗುತ್ತಿದ್ದರೂ ಆ. 6ಕ್ಕೆ ಬಿಡುಗಡೆಗೊಂಡ ಅತಿಥಿ ಉಪನ್ಯಾಸಕರು ಮತ್ತೆ ಸೇರ್ಪಡೆಗಾಗಿ ದಿನಗಟ್ಟಲೆ ಕಾಯಬೇಕಾಗಿದೆ!

Advertisement

15 ದಿನದೊಳಗೆ
ಅಂತಿಮ ತೀರ್ಮಾನ
ಕಳೆದ ಬಾರಿ ಒಂದೊಂದು ವಿ.ವಿ. ಕಾಲೇಜುಗಳ ತರಗತಿ ಬೇರೆ ಬೇರೆ ದಿನಗಳಂದು ಆರಂಭವಾಗಿ ಸಮಸ್ಯೆ ಆಗಿತ್ತು. ಈ ಬಾರಿ ಅದನ್ನು ನಿವಾರಿಸಲು ಏಕರೂಪದ ಕ್ಯಾಲೆಂಡರ್‌ ಜಾರಿಗೆ ನಿರ್ಧರಿಸಲಾಗಿದೆ. ಈ ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರದಲ್ಲಿಯೇ ಪ್ರಾರಂಭಿ ಸಲು ಉದ್ದೇಶಿಸಲಾಗಿದೆ. ಮುಂದಿನ 15 ದಿನದೊಳಗೆ ಈ ಕುರಿತಂತೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
-ಜಗದೀಶ್‌ ಜಿ.,ಆಯುಕ್ತರು, ಕಾಲೇಜು
ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next