Advertisement

Mangaluru University; ಪದವಿ ಶೈಕ್ಷಣಿಕ ಅವಧಿ ಜುಲೈಯಲ್ಲೇ ಆರಂಭದ ಚಿಂತನೆ

12:34 AM Jan 03, 2024 | Team Udayavani |

ಮಂಗಳೂರು: ಕೊರೊನಾ ಕಾರಣದಿಂದ ಏರುಪೇರಾಗಿದ್ದ ಪದವಿ ಶೈಕ್ಷಣಿಕ ವೇಳಾಪಟ್ಟಿಯನ್ನು ಸರಿದೂಗಿಸುವ ಪ್ರಯತ್ನವನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಸಲಾಗುತ್ತಿದೆ. ಈ ಶೈಕ್ಷಣಿಕ ವರ್ಷದ ಕಾಲೇಜುಗಳು ಆಗಸ್ಟ್‌ನಲ್ಲಿ ಆರಂಭವಾಗಿದ್ದವು. ಮುಂಬರುವ (2024-25ನೇ) ಶೈಕ್ಷಣಿಕ ಅವಧಿಯನ್ನು ಜು. 25ರ ಒಳಗೆ ತರಗತಿ ಆರಂಭಕ್ಕೆ ಚಿಂತಿಸಲಾಗಿದೆ ಎಂದು ಕುಲಪತಿ (ಪ್ರಭಾರ)ಪ್ರೊ| ಜಯರಾಜ್‌ ಅಮೀನ್‌ ತಿಳಿಸಿದ್ದಾರೆ.

Advertisement

ಮಂಗಳೂರು ವಿ.ವಿ.ಯಲ್ಲಿ ಮಂಗಳವಾರ ನಡೆದ ಈ ಶೈಕ್ಷಣಿಕ ಸಾಲಿನ ತೃತೀಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್‌ಗಳ ಪರೀಕ್ಷೆ ಜ. 2ರಿಂದ ಆರಂಭವಾಗಿದೆ. ಈ ಪರೀಕ್ಷೆಗಳ ಮೌಲ್ಯಮಾಪನ ಫೆ. 17ರೊಳಗೆ ಮುಕ್ತಾಯಗೊಳ್ಳಲಿದೆ. ಜ. 15ರಿಂದಲೇ ಮೌಲ್ಯಮಾಪನ ಆರಂಭಿಸಲಾಗುತ್ತದೆ.

ಫೆ. 19ರಿಂದ ಎರಡು, ನಾಲ್ಕು ಮತ್ತು ಆರನೇ ಸೆಮಿಸ್ಟರ್‌ ತರಗತಿ ಆರಂಭಗೊಳ್ಳಲಿದೆ. ಇದರ ಪರೀಕ್ಷೆ ಮುಗಿದ ಕೂಡಲೇ ಮೌಲ್ಯಮಾಪನ ನಡೆಯಲಿದ್ದು ಇದರಿಂದ ಉಪನ್ಯಾಸಕರಿಗೆ ಮುಂದಿನ ತರಗತಿ ನಡೆಸಲು ಅನುಕೂಲವಾಗುತ್ತದೆ. ಈ ಬಾರಿ ಹೊಸ ಸೆನೆಟ್‌ ಹಾಲ್‌ನಲ್ಲೇ ಮೌಲ್ಯಮಾಪನ ನಡೆಸಲಾಗುವುದು. ಯುಜಿಸಿ ವೇತನ ಪಡೆಯುವ ಉಪನ್ಯಾಸಕರು ಮೌಲ್ಯಮಾಪನಕ್ಕೆ ಹಾಜರಾಗದೇ ಇದ್ದರೆ ಅವರ ವಿರುದ್ಧ ಕಟ್ಟುನಿಟ್ಟು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಈ ಎಲ್ಲ ಕ್ರಮಗಳಿಂದಾಗಿ ಮುಂದಿನ ಶೈಕ್ಷಣಿಕ ಅವಧಿಯನ್ನು ಬೇಗ ಪ್ರಾರಂಭಿಸಲು ಸಾಧ್ಯವಾಗಲಿದೆ ಎಂದರು.

ಆಡಿಟ್‌ನಲ್ಲಿ ಆಕ್ಷೇಪ
ವಿ.ವಿ.ಯ 2020-21ನೇ ಸಾಲಿನ ಲೆಕ್ಕಪರಿಶೋಧನ ವರದಿಯಲ್ಲಿ 53.64 ಕೋ.ರೂ.ಗಳಿಗೆ ಆಕ್ಷೇಪ ವ್ಯಕ್ತವಾಗಿದೆ. ಅದರಲ್ಲಿ 4.42 ಕೋ.ರೂ. ವಸೂಲಿ ಆಗಿದೆ. ಉಳಿದ ಮೊತ್ತದ ವಸೂಲಿ ಕುರಿತಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಹಂಗಾಮಿ ಸಮಿತಿ ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಿದೆ ಎಂದು ಹಣಕಾಸು ಅಧಿಕಾರಿ ಸಂಗಪ್ಪ ಮಾಹಿತಿ ನೀಡಿದರು.

Advertisement

ವಿಧಾನ ಪರಿಷತ್‌ ಸದಸ್ಯ ಮಧು ಮಾದೇಗೌಡ ಮಾತನಾಡಿ, ಹಂಗಾಮಿ ಸಮಿತಿ ತೀರ್ಮಾನಿಸುವುದಾದರೆ, ಇಲ್ಲಿ ಕಾರ್ಯಸೂಚಿ ತರುವ ಅಗತ್ಯವೇನಿದೆ? ಇಲ್ಲಿ ದೊಡ್ಡ ಮೊತ್ತದಲ್ಲಿ ನ್ಯೂನ ಕಾಣಿಸುತ್ತಿರುವ ಬಗ್ಗೆ ಲೆಕ್ಕಪರಿಶೋಧಕರು ಆಕ್ಷೇಪ ಎತ್ತಿದ್ದಾರೆ. ಬಾಕಿ ವಸೂಲಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಕುಲಸಚಿವರಾದ (ಆಡಳಿತ) ರಾಜು, ರಾಜು ಚೆಲ್ಲನ್ನವರ್‌, ಹಣಕಾಸು ಅಧಿಕಾರಿ ಸಂಗಪ್ಪ ಉಪಸ್ಥಿತರಿದ್ದರು.

ಅತಿಥಿ ಉಪನ್ಯಾಸಕರಿಗೆ ಸರಕಾರದ ವೇತನ: ಮನವಿಗೆ ನಿರ್ಧಾರ
ಕುಲಪತಿ ಪ್ರೊ| ಜಯರಾಜ್‌ ಅಮೀನ್‌ ಮಾತನಾಡಿ, ಮಂಗಳೂರು ವಿ.ವಿ. ಸೇರಿದಂತೆ ಘಟಕ ಕಾಲೇಜುಗಳಲ್ಲಿ 400 ಅತಿಥಿ ಉಪನ್ಯಾಸಕರಿಗೆ ಮಾಸಿಕ 1.50 ಕೋ.ರೂ. ಮೊತ್ತ ವೇತನಕ್ಕೆ ಪಾವತಿಯಾಗುತ್ತಿದೆ. 409 ನಿವೃತ್ತರಿಗೆ 1.15 ಕೋ.ರೂ. ಪಿಂಚಣಿ ಪಾವತಿಸಲಾಗುತ್ತಿದೆ. ಇದರಲ್ಲಿ ಸರಕಾರದ ಪಾಲು 83 ಲಕ್ಷ ರೂ. ಮಾತ್ರ. ಉಳಿದ ಮೊತ್ತವನ್ನು ವಿ.ವಿ.ಯೇ ಭರಿಸುತ್ತಿದೆ. ಆದರೆ ಇದೀಗ ಇವೆರಡು ಮೊತ್ತ ವಿ.ವಿ.ಗೆ ಹೊರೆಯಾಗುತ್ತಿದೆ. ವಿ.ವಿ.ಯಲ್ಲಿ 1980ರಲ್ಲಿ ಮಂಜೂರಾದ 273 ಖಾಯಂ ಹುದ್ದೆಗಳ ಪೈಕಿ 129 ಹುದ್ದೆ ಖಾಲಿ ಇದೆ. ಬೋಧಕೇತರರಲ್ಲಿ ಮಂಜೂರಾದ 547 ಹುದ್ದೆ ಪೈಕಿ 358 ಹುದ್ದೆ ಖಾಲಿ ಇದೆ. ಕೋರ್ಸ್‌ಗಳ ಕಾರ್ಯಭಾರ ಜಾಸ್ತಿಯಾಗಿದೆ. ಇದೂ ವಿ.ವಿ.ಗೆ ಹೊರೆಯಾಗುತ್ತಿದೆ. ಯುಜಿಸಿ ಅನುದಾನವೂ ಕೆಲವು ವರ್ಷಗಳಿಂದ ಬರುತ್ತಿಲ್ಲ. ಹೀಗಾಗಿ ಪದವಿ ಕಾಲೇಜುಗಳಂತೆ ಸರಕಾರವೇ ವಿವಿ ಅತಿಥಿ ಉಪನ್ಯಾಸಕರಿಗೂ ವೇತನ ನೀಡಿದರೆ ಹೊರೆ ತಗ್ಗಲಿದೆ. ಸರಕಾರಕ್ಕೆ ಈ ಸಂಬಂಧ ಮನವಿ ಸಲ್ಲಿಸಲಾಗುವುದು ಎಂದರು.

ಸಂಯೋಜನಾ ಶುಲ್ಕ ಹೆಚ್ಚಳ
ಮಂಗಳೂರು ವಿಶ್ವವಿದ್ಯಾನಿಲಯದ ಜತೆ ಸಂಯೋಜನೆಗೊಳ್ಳುವ ಕಾಲೇಜುಗಳಿಗೆ ಶುಲ್ಕದಲ್ಲಿ ಈ ಬಾರಿ ಹೆಚ್ಚಳ ಮಾಡಲಾಗುತ್ತದೆ. ಕೊರೊನಾ ವೇಳೆ ಈ ಶುಲ್ಕವನ್ನು ಶೇ. 20ರಷ್ಟು ಕಡಿತಗೊಳಿಸಲಾಗಿತ್ತು. ಈಗ ಶೇ. 10ರಷ್ಟು ಹೆಚ್ಚಳ ಮಾಡಲಾಗುತ್ತಿದೆ. ಈ ಬಗ್ಗೆ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೆ ಬರಲಿದೆ ಎಂದು ಪ್ರೊ| ಜಯರಾಜ್‌ ಅಮೀನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next