ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 41ನೇ ವಾರ್ಷಿಕ ಘಟಿಕೋತ್ಸವ ಮಾ. 15ರಂದು ಬೆಳಗ್ಗೆ 11 ಗಂಟೆಗೆ ವಿಶ್ವವಿದ್ಯಾನಿಲಯದ ಮಂಗಳ ಗಂಗೋತ್ರಿ ಕ್ಯಾಂಪಸ್‌ನ ಮಂಗಳ ಸಭಾಂಗಣದಲ್ಲಿ ನಡೆಯಲಿದ್ದು, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಘಟಿಕೋತ್ಸವ ಉದ್ಘಾಟಿಸಿ ಪದವಿ ಪ್ರದಾನ ಮಾಡಲಿದ್ದಾರೆ ಎಂದು ವಿ.ವಿ. ಕುಲಪತಿ ಪ್ರೊ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ತಿಳಿಸಿದ್ದಾರೆ.
ನ್ಯಾಕ್ ನಿರ್ದೇಶಕ ಪ್ರೊ| ಎಸ್.ಸಿ. ಶರ್ಮ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಸಚಿವ ಡಾ|ಅಶ್ವತ್ಥನಾರಾಯಣ್ ಭಾಗವಹಿಸ ಲಿದ್ದಾರೆ ಎಂದು ಮಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ಡಾ| ರಾಮಕೃಷ್ಣ ಅವರಿಗೆ ಮಂಗಳೂರು ವಿ.ವಿ.ದಿಂದ ಡಾಕ್ಟರ್ ಆಫ್ ಸೈನ್ಸ್ (ಪ್ರಾಣಿಶಾಸ್ತ್ರ) ಪ್ರದಾನ ಮಾಡಲಾಗುವುದು. 115 ಮಂದಿಗೆ ಪಿಎಚ್.ಡಿ. ಪದವಿ (ಕಲೆ -29, ವಿಜ್ಞಾನ -61, ವಾಣಿಜ್ಯ -22, ಶಿಕ್ಷಣ -3) ಪ್ರದಾನ ನಡೆಯಲಿದೆ. 7 ಅಂತಾರಾಷ್ಟ್ರೀಯ ಪುರುಷ ವಿದ್ಯಾರ್ಥಿಗಳು ಪಿಎಚ್.ಡಿ. ಪದವಿ ಪಡೆಯಲಿದ್ದಾರೆ. 55 ಮಂದಿಗೆ ಚಿನ್ನದ ಪದಕ ಮತ್ತು 57 ನಗದು ಬಹುಮಾನ, ವಿವಿಧ ಕೋರ್ಸ್‌ಗಳ 199 ರ್‍ಯಾಂಕ್‌ಗಳಲ್ಲಿ ಪ್ರಥಮ ರ್‍ಯಾಂಕ್ ಪಡೆದ 71 ಮಂದಿಗೆ ರ್‍ಯಾಂಕ್ ಪ್ರಮಾಣ ಪತ್ರ (ಸ್ನಾತಕೋತ್ತರ ಪದವಿ 53 ಮತ್ತು ಪದವಿ 18, ಕಲೆ 17, ವಿಜ್ಞಾನ ಮತ್ತು ತಂತ್ರಜ್ಞಾನ 41, ವಾಣಿಜ್ಯ 9, ಶಿಕ್ಷಣ 4) ನೀಡಲಾಗುವುದು ಎಂದರು.
ಒಟ್ಟು 28,520 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 23,020 ವಿದ್ಯಾರ್ಥಿಗಳು (ಶೇ. 80.72) ಉತ್ತೀರ್ಣರಾಗಿದ್ದಾರೆ. ಈ ಪೈಕಿ ಸ್ನಾತಕೋತ್ತರ ಪದವಿ ಪರೀಕ್ಷೆಗೆ 5,069 ವಿದ್ಯಾರ್ಥಿಗಳು ಹಾಜರಾಗಿದ್ದು, 4,526 (ಶೇ. 89.29) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪದವಿ ಪರೀಕ್ಷೆಗೆ 23,336 ಮಂದಿ ಹಾಜರಾಗಿದ್ದು, 18,379 (ಶೇ. 78.76) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸ್ವಾಯತ್ತ ಕಾಲೇಜುಗಳ ಪೈಕಿ ಒಟ್ಟು 4,535 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 4,343 (ಶೇ. 95.77) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದರು.
ಪದವಿ ಪ್ರಮಾಣಪತ್ರಕ್ಕೆ ಶುಲ್ಕ ಪಾವತಿಸಿದ ಅರ್ಹ ವಿದ್ಯಾರ್ಥಿಗಳ ಪದವಿ ಪ್ರಮಾಣ ಪತ್ರವನ್ನು ಕಾಲೇಜು/ವಿಭಾಗಗಳಿಗೆ ಎಪ್ರಿಲ್ 2ನೇ ವಾರದ ಒಳಗೆ ಕಳುಹಿಸಿಕೊಡಲಾಗುವುದು ಎಂದರು.
ಮಂಗಳೂರು ವಿ.ವಿ. ಪರೀಕ್ಷಾಂಗ ಕುಲಸಚಿವ ಪ್ರೊ| ರಾಜು ಕೃಷ್ಣ ಚಲಣ್ಣವರ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷ ಎಂ.ಪಿ. ಉಮೇಶ್ ಚಂದ್ರ ಉಪಸ್ಥಿತರಿದ್ದರು.
ಗೌರವ ಡಾಕ್ಟರೇಟ್: ಇಂದು ಪ್ರಕಟ
ಮಂಗಳೂರು ವಿ.ವಿ. ವತಿಯಿಂದ ಈ ಬಾರಿಯ ಘಟಿಕೋತ್ಸವದಲ್ಲಿ ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ನಿರ್ಧರಿಸಲಾಗಿದೆ. ಈ ಗೌರವಕ್ಕೆ ಪಾತ್ರರಾಗುವವರ ಹೆಸರನ್ನು ಮಂಗಳವಾರ ವಿ.ವಿ.ಯಲ್ಲಿ ನಡೆಯುವ ಸಿಂಡಿಕೇಟ್ ಸಭೆಯ ಬಳಿಕ ಪ್ರಕಟಿಸಲಾಗುವುದು ಎಂದು ಪ್ರೊ| ಪಿ.ಎಸ್. ಯಡಪಡಿತ್ತಾಯ ತಿಳಿಸಿದ್ದಾರೆ.