ಮಂಗಳೂರು: ಮಂಗಳೂರು ವಿ.ವಿ.ಯ 41ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೆಟ್ ಪಡೆದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಅವರಿಗೆ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಅಭಿ ನಂದನೆ-ಅಭಿವಂದನ ಸಮಾರಂಭ ಕೊಡಿಯಾಲಬೈಲ್ ಶಾರದಾ ವಿದ್ಯಾ ಲಯದ ಆವರಣದಲ್ಲಿ ಬುಧವಾರ ಜರುಗಿತು.
ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಡಾ| ಎಂ.ಬಿ. ಪುರಾಣಿಕ್ ಅವರಿಗೆ ಈ ಹಿಂದೆಯೇ ಈ ಪದವಿ ದೊರಕ ಬೇಕಿತ್ತು. ಅವರ ಒಳ್ಳೆಯ ಮಾತು, ಇನ್ನೊಬ್ಬರಿಗೆ ಮಿಡಿಯುವ ಹೃದಯ, ಸಾಮಾಜಿಕ, ಶೈಕ್ಷಣಿಕ ಕಾರ್ಯ ಗೌರವಾರ್ಹ. ಪುರಾಣಿಕರು ಸಮ್ಮಾನ, ಪ್ರಶಸ್ತಿಗಾಗಿ ಎಂದಿಗೂ ಹಂಬಲಿಸಿದವರಲ್ಲ. ಅವರ ಸಾಧನೆ ಇನ್ನೊಬ್ಬರಿಗೆ ಪ್ರೇರಣೆ ಆಗಬೇಕು ಎಂದರು.
ಆರೆಸ್ಸೆಸ್ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪ್ರಕಾಶ್ ಪಿ.ಎಸ್. ಅಭಿನಂದನ ನುಡಿಗಳನ್ನಾಡಿ, ಗೌರವ ಡಾಕ್ಟರೆಟ್ ಪುರಾಣಿಕರ ವ್ಯಕ್ತಿತ್ವಕ್ಕೆ ಸಂದ ಗೌರವ. ಅವರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಎತ್ತರದ ವ್ಯಕ್ತಿ. ನಿರಂತರ ಪರಿಶ್ರಮ, ಅವಿರತ ಕೆಲಸವೇ ಅವರನ್ನು ಈ ಸ್ಥಾನಕ್ಕೆತ್ತರಿಸಿದೆ ಎಂದರು.
ಸಮ್ಮಾನ ಸ್ವೀಕರಿಸಿದ ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ| ಎಂ.ಬಿ. ಪುರಾಣಿಕ್ ಮಾತನಾಡಿ, ಹಿಂದು ಧರ್ಮದಲ್ಲಿ ಹುಟ್ಟಿರುವುದು ನನ್ನ ಸೌಭಾಗ್ಯ. ಗೌರವ ಡಾಕ್ಟರೆಟ್, ಈ ಅಭಿನಂದನೆಯಿಂದ ಧನ್ಯನಾಗಿದ್ದೇನೆ ಎಂದರು.
ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲು, ಯೇನಪೊಯ ಡೀಮ್ಡ್ ಯುನಿವರ್ಸಿಟಿ ಕುಲಪತಿ ಡಾ| ಯೇನಪೊಯ ಅಬ್ದುಲ್ಲ ಕುಂಞಿ, ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್. ಯಡಪಡಿತ್ತಾಯ, ಎ.ಜೆ. ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಡಾ| ಎ.ಜೆ. ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ| ಹರಿಕೃಷ್ಣ ಪುನರೂರು, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ| ಮೋಹನ ಆಳ್ವ, ವಿಹಿಂಪ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ ಕೇಶವ ಹೆಗ್ಡೆ, ಶಾಸಕರಾದ ವೇದವ್ಯಾಸ ಕಾಮತ್, ಯು.ಟಿ. ಖಾದರ್, ಟ್ರಸ್ಟಿ ಮತ್ತು ಆಡಳಿತ ನಿರ್ದೇಶಕ ಸಮೀರ್ ಪುರಾಣಿಕ್, ಟ್ರಸ್ಟಿ ಸುಧಾಕರ ರಾವ್ ಪೇಜಾವರ, ಪ್ರಮುಖರಾದ ಸೀತಾ ರಾಮ ಆಚಾರ್ಯ ದಂಡತೀರ್ಥ ಉಪಸ್ಥಿತರಿದ್ದರು.
ಡಾ| ಎಂ.ಬಿ. ಪುರಾಣಿಕ್ ಹಾಗೂ ಸುನಂದಾ ಪುರಾಣಿಕ್ ದಂಪತಿಯನ್ನು ಸಮ್ಮಾನಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿ, ಪ್ರಸಾವಿಸಿದರು. ಪ್ರಾಂಶುಪಾಲ ದಯಾನಂದ ಕಟೀಲು ನಿರೂಪಿಸಿದರು.