Advertisement

Mangaluru University: ಕ್ರೀಡಾಕೂಟ ಆಯೋಜನೆಗೆ ಕಾಲೇಜುಗಳು ಹಿಂದೇಟು

01:40 AM Jul 23, 2024 | Team Udayavani |

ಉಡುಪಿ: ಕಾಲೇಜು ದಾಖಲಾತಿ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಕ್ರೀಡಾ ಶುಲ್ಕ ಸಂಗ್ರಹಿಸುವ ಮಂಗಳೂರು ವಿಶ್ವವಿದ್ಯಾ ನಿಲಯವು, ಕಾಲೇಜುಗಳು ಕ್ರೀಡಾಕೂಟ ಆಯೋಜನೆ ಮಾಡಿದರೂ ಮೂರು ವರ್ಷ ಗಳಿಂದ ಶುಲ್ಕ ಪಾವತಿಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಕಾರಣ ಕ್ರೀಡಾಕೂಟ ಆಯೋಜನೆಗೆ ಕಾಲೇಜುಗಳು ಹಿಂದೇಟು ಹಾಕುವ ಸ್ಥಿತಿ ಬಂದಿದೆ.

Advertisement

ಸರಕಾರಿ ಕಾಲೇಜುಗಳಲ್ಲಿ 2023-24ನೇ ಸಾಲಿನಲ್ಲಿ ಕ್ರೀಡಾ ಶುಲ್ಕವಾಗಿ 700 ರೂಪಾಯಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯಿಂದಲೂ ಪಡೆಯಲಾಗುತ್ತಿತ್ತು. ಇದರಲ್ಲಿ 200 ರೂ.ಗಳನ್ನು ಕಾಲೇಜಿನ ಕ್ರೀಡಾ ಚಟುವಟಿಕೆಗಳಿಗೆ ವಿನಿಯೋಗಿಸಿ 500 ರೂ.ಗಳನ್ನು ಮಂಗಳೂರು ವಿವಿಯ ಕ್ರೀಡಾ ಖಾತೆಗೆ ಕಳುಹಿಸಲಾಗುತ್ತದೆ. 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 700 ರೂ.ಸಂಗ್ರಹಿಸಿದ್ದು, ಅದರಲ್ಲಿ 100 ರೂ.ಗಳನ್ನು ಕಾಲೇಜುಗಳು ಇರಿಸಿಕೊಂಡು ಉಳಿದ ಮೊತ್ತವನ್ನು ವಿವಿಗೆ ನೀಡಬೇಕು. ಅನುದಾನಿತ ಕಾಲೇಜುಗಳು 500 ರೂ.ಗಳನ್ನು ವಿವಿಗೆ ನೀಡಬೇಕು.

ವಿನಿಯೋಗ ಹೇಗೆ?
ಕಾಲೇಜುಗಳು ಸಂಗ್ರಹಿಸುವ 200 ರೂ.ಗಳನ್ನು ಕಾಲೇಜು ಕ್ರೀಡಾಕೂಟ, ಕ್ರೀಡಾ ಸಲಕರಣೆ, ಕಾಲೇಜು ಟಿ ಶರ್ಟ್‌ ಖರೀದಿ ಇತ್ಯಾದಿಗಳಿಗೆ ಬಳಸಲಾಗುತ್ತದೆ. ಅಂತರ್‌ಕಾಲೇಜು ಹಾಗೂ ಅಂತರ್‌ವಿವಿ ಕ್ರೀಡಾಕೂಟಗಳನ್ನು ಆಯೋಜಿಸುವ ಕಾಲೇಜುಗಳಿಗೆ ಹಾಗೂ ಆ ಕ್ರೀಡಾ ಕೂಟಗಳಲ್ಲಿ ಭಾಗವಹಿಸು ವವರ ಭತ್ತೆಗಳನ್ನು ವಿವಿ ನೀಡಬೇಕು. ಅಂತರ್‌ಕಾಲೇಜು ಮಟ್ಟದ ಕ್ರಿಕೆಟ್‌, ವಾಲಿ ಬಾಲ್‌ನಂತಹ ಕ್ರೀಡೆಗಳನ್ನು ಆಯೋಜಿಸುವ ಕಾಲೇಜುಗಳಿಗೆ 30 ರಿಂದ 35 ಸಾವಿರ ರೂ., ಫ‌ುಟ್ಬಾಲ್‌ಗೆ
50 ಸಾವಿರ ರೂ.ಗಳನ್ನು ವಿವಿ ನೀಡುತ್ತದೆ. ಆ್ಯತ್ಲೆಟಿಕ್ಸ್‌ ಆಯೋಜನೆ ಮಾಡಿದರೆ 2 ಲ.ರೂ.ಗಳನ್ನು ಮೊತ್ತವನ್ನು ವಿವಿ ನೀಡುತ್ತದೆ.

200ಕ್ಕೂ ಅಧಿಕ ಕಾಲೇಜು
ಮಂಗಳೂರು ವಿವಿ ವ್ಯಾಪ್ತಿಯಲ್ಲಿ 200ಕ್ಕೂ ಅಧಿಕ ಕಾಲೇಜುಗಳಿದ್ದು, ಈ ಕಾಲೇಜುಗಳಿಂದ ವಾರ್ಷಿಕ ಸುಮಾರು 5ರಿಂದ 7 ಕೋಟಿ ರೂ.ಗಳಷ್ಟು ಸಂಗ್ರಹವಾಗುತ್ತಿದೆ. 3 ವರ್ಷಗಳಿಗೂ ಹಿಂದೆ ಅಂತರ್‌ ವಿವಿ ಕ್ರೀಡಾಕೂಟಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಸಿಬಂದಿಗೆ ಮುಂಗಡ ಹಣವನ್ನು ವಿವಿ ಪಾವತಿಸುತ್ತಿತ್ತು. ಪ್ರಸ್ತುತ ಕಾಲೇಜಿನ ಹಣಕಾಸು ನೆರವಿನಿಂದಲೇ ವಿದ್ಯಾರ್ಥಿಗಳು ತೆರಳುವಂತಾಗಿದೆ. ಇದರ ಖರ್ಚುವೆಚ್ಚಗಳ ಬಗೆಗಿನ ಮಾಹಿತಿಯನ್ನು ಕಾಲೇಜುಗಳು ವಿವಿಗೆ ಸಲ್ಲಿಸಿದರೂ ಅದು ಸಿಗಲು ಕನಿಷ್ಠ 1 ವರ್ಷಗಳಷ್ಟು ಕಾಲ ಕಾಯಬೇಕು ಎಂಬುದು ದೈಹಿಕ ಶಿಕ್ಷಣ ಶಿಕ್ಷಕರೊಬ್ಬರ ಅನಿಸಿಕೆ.

ಸೂಕ್ತ ವ್ಯವಸ್ಥೆ
” ಹಣಕಾಸು ಕೊರತೆ ಇರುವ ಕಾರಣ ಕೆಲವು ಸಮಯಗಳಿಂದ ಕ್ರೀಡಾನಿಧಿ ನೀಡುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಈಗಾಗಲೇ ಬಂದಿರುವ ಬಿಲ್‌ಗ‌ಳು ಹಾಗೂ ಒಟ್ಟು ಮೊತ್ತವನ್ನು ಪರಿಶೀಲಿಸಿ ಅದನ್ನು ನೀಡುವ ವ್ಯವಸ್ಥೆ ಮಾಡಲಾಗುವುದು.”  -ಪ್ರೊ| ಪಿ.ಎಲ್‌.ಧರ್ಮ, ಉಪಕುಲಪತಿ, ಮಂಗಳೂರು ವಿವಿ

Advertisement

 

– ಪುನೀತ್‌ ಸಸಿಹಿತ್ಲು

Advertisement

Udayavani is now on Telegram. Click here to join our channel and stay updated with the latest news.

Next