ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 2024 -25ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ಪೈಕಿ 9ಕ್ಕೂ ಹೆಚ್ಚು ಕೋರ್ಸ್‌ಗಳಿಗೆ ಈವರೆಗೆ ಒಬ್ಬರೂ ಪ್ರವೇಶ ಪಡೆದಿಲ್ಲ!
ವಿ.ವಿ.ಯಲ್ಲಿ 28 ವಿಭಾಗಗಳು ಇದ್ದು, ಒಟ್ಟು 42 ವಿವಿಧ ಕೋರ್ಸ್‌ಗಳು ಲಭ್ಯವಿವೆ. ಆದರೆ, ಲೆಕ್ಕಶಾಸ್ತ್ರ (ಸ್ಟ್ಯಾಟಿಸ್ಟಿಕ್ಸ್), ಎಲೆಕ್ಟ್ರಾನಿಕ್ಸ್, ಎಂ.ಇಡಿ, ಎಂಎಸ್‌ಡಬ್ಲ್ಯು, ಜಿಯೊ ಇನ್ಫೊಮ್ಯಾಟಿಕ್ಸ್, ಮೆಟೀರಿಯಲ್ ಸೈನ್ಸ್ ಸಹಿತ 9ಕ್ಕೂ ಹೆಚ್ಚು ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಲಭ್ಯವಿಲ್ಲ ಎಂಬುದು ಸದ್ಯದ ಮಾಹಿತಿ.
ಪ್ರವೇಶ ಹೆಚ್ಚಿಸಲು ಅರ್ಜಿ ಸಲ್ಲಿಕೆಯ ದಿನಾಂಕವನ್ನು ಎರಡು ಬಾರಿ ವಿಸ್ತರಣೆ ಮಾಡಲಾಗಿತ್ತು. ಮೊದಲ ಬಾರಿ ಇದ್ದ ದಿನಾಂಕವನ್ನು ಸೆ. 25ರ ವರೆಗೆ ವಿಸ್ತರಿಸಿ, ಅನಂತರ ಮತ್ತೂಮ್ಮೆ ಅ.10ರ ವರೆಗೆ ವಿಸ್ತರಿಸಲಾಗಿತ್ತು. ಆದರೂ, ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿಲ್ಲ. ಪ್ರವೇಶಾತಿಗೆ ಇನ್ನು 2 ದಿನವಷ್ಟೇ ಬಾಕಿ.
ಪ್ರತಿ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 15ಕ್ಕಿಂತ ಕಡಿಮೆ ಇದ್ದರೆ, ಅಂತಹ ವಿಭಾಗವನ್ನು ತಾತ್ಕಾಲಿಕವಾಗಿ ಬಂದ್ ಮಾಡಿ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಾಗ ಪುನಃ ತೆರೆಯುವ ನಿರ್ಧಾರವನ್ನು ವಿ.ವಿ. ಕೈಗೊಂಡಿತ್ತು.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಪ್ರಸ್ತುತ ಈ ಸಂಖ್ಯೆಯನ್ನು ಇಳಿಕೆ ಮಾಡಿ, ಪ್ರತಿ ವಿಭಾಗದಲ್ಲಿ 10 ಜನರು ಪ್ರವೇಶ ಪಡೆದರೆ ವಿಭಾಗವನ್ನು ಮುಂದುವರಿಸಲು ವಿಶ್ವವಿದ್ಯಾನಿಲಯ ನಿರ್ಧರಿಸಿದೆ.
1,800ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದರೂ, ಈವರೆಗೆ ಪ್ರವೇಶ ಪಡೆದವರು 680ರಷ್ಟು ಮಾತ್ರ !
ಈ ಮಧ್ಯೆ ಎಂ.ಕಾಂ., ರಸಾಯನ ವಿಜ್ಞಾನ, ಬಯೊಟೆಕ್ನಾಲಜಿ ಕಲಿಕೆಗೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರಿದ್ದಾರೆ. ಈ ಕೋರ್ಸ್‌ಗಳಿಗೆ ಗರಿಷ್ಠ ಮಂದಿ ಪ್ರವೇಶ ಪಡೆದಿದ್ದು ಎಂ.ಕಾಂ.ಗೆ ಹೆಚ್ಚು ದಾಖಲಾತಿ ಆಗಿದೆ.