Advertisement

ಮಂಗಳೂರು ವಿಶ್ವವಿದ್ಯಾನಿಲಯ : ತುರ್ತಾಗಿ ಫಲಿತಾಂಶ ನೀಡಲು “ಆದ್ಯತೆ ಪರೀಕ್ಷೆ’ಸೂತ್ರ!

11:52 AM Aug 06, 2022 | Team Udayavani |

ಮಂಗಳೂರು : ಪದವಿ ವಿದ್ಯಾರ್ಥಿಗಳ ಕೊನೆಯ ಪರೀಕ್ಷಾ ಫಲಿತಾಂಶ ಈ ಬಾರಿ ತಡವಾಗದಂತೆ ಮಂಗಳೂರು ವಿಶ್ವವಿದ್ಯಾನಿಲಯ ಮುನ್ನೆಚ್ಚರಿಕೆ ವಹಿಸಿದೆ. ಅದಕ್ಕಾಗಿ 6ನೇ ಸೆಮಿಸ್ಟರ್‌ ವಿದ್ಯಾರ್ಥಿಗಳ ಪರೀಕ್ಷೆಯನ್ನು ಮೊದಲು ನಡೆಸಿ, ತುರ್ತಾಗಿ ಫಲಿತಾಂಶ ನೀಡಲು ನಿರ್ಧರಿಸಿದೆ.

Advertisement

2, 4, 6ನೇ ಸೆಮಿಸ್ಟರ್‌ ಪರೀಕ್ಷೆ ಸೆ. 2ಕ್ಕೆ ಆರಂಭವಾಗಲಿದೆ. ಇದರಲ್ಲಿ 2 ಹಾಗೂ 4ನೇ ಸೆಮಿಸ್ಟರ್‌ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ಸಾಲಿಗೂ ಇರಲಿದ್ದಾರೆ. ಆದರೆ 6ನೇ ಸೆಮಿಸ್ಟರ್‌ನವರು ನಿರ್ಗಮಿಸಲಿದ್ದಾರೆ. ಆದ್ದರಿಂದ ಅವರಿಗೆ ಆದ್ಯತೆ ಮೇರೆಗೆ ಮೊದಲು ಪರೀಕ್ಷೆ ನಡೆಸಲಾಗುವುದು.

ತಡವಾದರೆ ವಿದ್ಯಾರ್ಥಿಗಳಿಗೆ ನಷ್ಟ
ಉಪನ್ಯಾಸಕರೊಬ್ಬರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, ಆ. 17ಕ್ಕೆ ಈ ವರ್ಷದ ಎನ್‌ಇಪಿ ಮೊದಲ ಬ್ಯಾಚ್‌ಗೆ ತರಗತಿ ಆರಂಭವಾಗಲಿದೆ. 2, 4, 6ನೇ ಸೆಮಿಸ್ಟರ್‌ ಪರೀಕ್ಷೆ ಸೆ. 2ರಿಂದ ಆರಂಭವಾಗುವ ಬಗ್ಗೆ ಮಾಹಿತಿಯಿದೆ. ಅದರ ಫಲಿತಾಂಶಕ್ಕೆ ಮತ್ತೆ 1 ತಿಂಗಳು ಅಧಿಕ ಬೇಕು. ಹೀಗಾಗಿ 6ನೇ ಸೆಮಿಸ್ಟರ್‌ ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವುದೇ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಿ.ವಿ. ತೆಗೆದುಕೊಳ್ಳಬೇಕು’ ಎಂದರು.

ಸ್ವಾಯತ್ತ ಸಂಸ್ಥೆಗಳ ಪರೀಕ್ಷೆ ಪೂರ್ಣ!
ವಿ.ವಿ. ವ್ಯಾಪ್ತಿಯ ಕೆಲವು ಸ್ವಾಯತ್ತ ಶಿಕ್ಷಣ ಸಂಸ್ಥೆಗಳಲ್ಲಿ 6ನೇ ಸೆಮಿಸ್ಟರ್‌ ಪರೀಕ್ಷೆ ಈಗಾಗಲೇ ಪೂರ್ಣವಾಗಿದೆ. ಸದ್ಯ ಮೌಲ್ಯಮಾಪನ ನಡೆಯುತ್ತಿದೆ. ಆಗಸ್ಟ್‌ ಕೊನೆಯಲ್ಲಿ ಇಲ್ಲಿ ಫಲಿತಾಂಶ ಬರುವ ನಿರೀಕ್ಷೆಯಿದೆ. ಕಳೆದ ವರ್ಷವೂ ಸ್ವಾಯತ್ತ ಕಾಲೇಜುಗಳು ಪರೀಕ್ಷೆ ನಡೆಸಿ ಎಲ್ಲ ಪ್ರಕ್ರಿಯೆಗಳನ್ನು ನಿಗದಿತವಾಗಿ ಪೂರ್ಣಗೊಳಿಸಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಸೇರಲು ಇತ್ಯಾದಿಗಳಿಗೆ ಅನುಕೂಲವಾಗಿತ್ತು.

ವಿ.ವಿ. ಲೆಕ್ಕಾಚಾರವೇನು?
2, 4, 6ನೇ ಸೆಮಿಸ್ಟರ್‌ಗಳ ಪರೀಕ್ಷೆ ಪೂರ್ಣ ವಾಗಿ ಮುಗಿಯಲು ಒಂದೂವರೆ ತಿಂಗಳು ಬೇಕಾಗುತ್ತದೆ. ಬಳಿಕ ಲಕ್ಷಾಂತರ ಉತ್ತರ ಪತ್ರಿಕೆಯ ಕೋಡಿಂಗ್‌ಗೆ 1 ತಿಂಗಳು ಅಗತ್ಯವಿದ್ದು, ಮೌಲ್ಯಮಾಪನಕ್ಕೂ ಕೆಲವು ದಿನ ಬೇಕಾಗುತ್ತದೆ. ಹೀಗಾಗಿ 6ನೇ ಸೆಮಿಸ್ಟರ್‌ ವಿದ್ಯಾರ್ಥಿಗಳ ಫಲಿತಾಂಶ ತಡವಾಗಲಿದೆ ಎಂಬ ಕಾರಣದಿಂದ ಈ ಬಾರಿ 6ನೇ ಸೆಮಿಸ್ಟರ್‌ಗೆ ಬೇಗ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. 18 ದಿನಗಳಲ್ಲಿ ಪರೀಕ್ಷೆ ಆಗಿ ಬಳಿಕ 1 ತಿಂಗಳೊಳಗೆ ಫಲಿತಾಂಶ ನೀಡುವುದು ವಿ.ವಿ. ಲೆಕ್ಕಾಚಾರ.

Advertisement

6ನೇ ಸೆಮಿಸ್ಟರ್‌ನ ಪರೀಕ್ಷೆಯನ್ನು ಮೊದಲು ನಡೆಸಿ ಕೂಡಲೇ ಉತ್ತರ ಪತ್ರಿಕೆಗಳನ್ನು ತರಿಸಿ ತುರ್ತಾಗಿ ಕೋಡಿಂಗ್‌ ಮಾಡಿ 3 ಜಿಲ್ಲೆಗಳಿಗೆ ಕಳುಹಿಸಿ ಮೌಲ್ಯಮಾಪನ ನಡೆಸಿ ತುರ್ತಾಗಿ ಫಲಿತಾಂಶ ನೀಡಲು ವಿ.ವಿ. ಸಿಂಡಿಕೇಟ್‌ ಸಭೆ ನಿರ್ಧರಿಸಿದೆ. ಈ ಸಂಬಂಧ ಕಾಲೇಜು ಪ್ರಾಂಶುಪಾಲರು ಹಾಗೂ ಪರೀಕ್ಷಾ ಮುಖ್ಯಸ್ಥರ ಜತೆಗೆ ವಾರದೊಳಗೆ ಸಭೆ ನಡೆಸಿ ಯೋಜನೆ ರೂಪಿಸಲಾಗುವುದು.
– ಪ್ರೊ| ಪಿ.ಎಲ್‌. ಧರ್ಮ, ಕುಲಸಚಿವರು (ಪರೀಕ್ಷಾಂಗ) ಮಂಗಳೂರು ವಿ.ವಿ.

– ದಿನೇಶ್ ಇರಾ

Advertisement

Udayavani is now on Telegram. Click here to join our channel and stay updated with the latest news.

Next