Advertisement
ರಾಜ್ಯದಲ್ಲಿ ಒಂದು ದಶಕಕ್ಕೂ ಹಿಂದೆಯೇ 10, 20 ಮೈಕ್ರೋನ್ ಪ್ಲಾಸ್ಟಿಕ್ ಬಳಕೆಗೆ ನಿರ್ಬಂಧವಿತ್ತು. 2016ರಲ್ಲಿ ಇದನ್ನು ಪರಿಷ್ಕರಿಸಿ ಕೆಲವೊಂದು ಏಕ ಬಳಕೆ ಪ್ಲಾಸ್ಟಿಕ್ ಅನ್ನು ನಿರ್ಬಂಧಿಸಿ ಅಧಿಸೂಚನೆ ಹೊರಡಿಸಿತ್ತು. ಇದರ ಪ್ರಕಾರ ಮಂಗಳೂರು ನಗರದಲ್ಲಿ ಕಾನೂನು ಉಲ್ಲಂಘನೆಗೆ 1,000 ರೂ.ನಿಂದ 10,000 ರೂ.ವರೆಗೆ ದಂಡ ವಿಧಿಸಲು ಅವಕಾಶ ಇತ್ತು. ಆದರೆ, ಜಾರಿಗೆ ಬರಲಿಲ್ಲ. 2022ರ ಜು.1ರಿಂದ ಕೇಂದ್ರ ಸರಕಾರವು ಏಕಬಳಕೆ ಪ್ಲಾಸ್ಟಿಕ್ ನಿಷೇಧ ನಿಯಮ ಜಾರಿಗೆ ತಂದಿದೆ. ಆದರೂ ರಾಜ್ಯ ಅದರಲ್ಲೂ ಮಂಗಳೂರಿನಲ್ಲಿ ಅದ್ಯಾವುದೂ ಅನ್ವಯ ಆಗುತ್ತಿಲ್ಲ!
ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಬ್ಯಾನರ್‌ಗಳು, ಪ್ಲಾಸ್ಟಿಕ್ ಬಂಟಿಂಗ್ಸ್, ಪ್ಲಾಸ್ಟಿಕ್ ಫ್ಲೆಕ್ಸ್, ಪ್ಲಾಸ್ಟಿಕ್ ಪ್ಲೇಟ್‌ಗಳು, ಪ್ಲಾಸ್ಟಿಕ್ ಧ್ವಜಗಳು, ಪ್ಲಾಸ್ಟಿಕ್ ಕಪ್‌ಗ್ಳು, ಪ್ಲಾಸ್ಟಿಕ್ ಚಮಚಗಳು, ಅಂಟಿಕೊಳ್ಳುವ ಫಿಲ್ಮ್ಗಳು, ಡೈನಿಂಗ್ ಟೇಬಲ್‌ಗಳಲ್ಲಿ ಹರಡಲು ಬಳಸುವ ಪ್ಲಾಸ್ಟಿಕ್ ಹಾಳೆಗಳು, ಸ್ಟ್ರಾಗಳಿಗೆ ಮೊದಲೇ ನಿರ್ಬಂಧವಿತ್ತು. 2022ರ ನಿಬಂಧನೆ ಬಳಿಕ ಪ್ಲಾಸ್ಟಿಕ್ ಕಡ್ಡಿ ಇರುವ ಇಯರ್ ಬಡ್‌ಗಳು, ಬಲೂನುಗಳಿಗೆ ಬಳಸುವ ಪ್ಲಾಸ್ಟಿಕ್ ಸ್ಟಿಕ್‌ಗಳು, ಪ್ಲಾಸ್ಟಿಕ್ ಧ್ವಜಗಳು, ಪ್ಲಾಸ್ಟಿಕ್ ಕ್ಯಾಂಡಿ ಸ್ಟಿಕ್‌ಗಳು, ಸ್ವೀಟ್ ಬಾಕ್ಸ್‌ಗಳ ಪ್ಯಾಕಿಂಗ್ ಫಿಲ್ಮ್ಗಳು, ಆಮಂತ್ರಣ ಪತ್ರಗಳು ಮತ್ತು ಸಿಗರೇಟ್ ಪ್ಯಾಕ್‌ಗಳು, 100 ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್‌ಗಳು, ಪ್ಲಾಸ್ಟಿಕ್ ಸ್ಟಿಕರ್‌ಗಳನ್ನು ನಿಷೇಧಿಸಲಾಗಿದೆ.
Related Articles
ಏಕ ಬಳಕೆ ಪ್ಲಾಸ್ಟಿಕ್ ನಿಯಂತ್ರಣಕ್ಕಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನದಂತೆ ‘ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ’ ಪ್ರಾಯೋಗಿಕ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಗೆ ರಾಜ್ಯದ ಬೀದರ್, ಕಲಬುರ್ಗಿ, ಮೈಸೂರು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ಮಂಗಳೂರು ನಗರವನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಸದ್ಯ ಧರ್ಮಸ್ಥಳವು ತ್ಯಾಜ್ಯ ಮುಕ್ತ ನಗರ ಎಂದು ಘೋಷಣೆಯಾಗಿದೆ. ಈ ಕುರಿತು ಅರಣ್ಯ ಸಚಿವರು ಇತ್ತೀಚೆಗೆಯಷ್ಟೇ ಅಧಿಕೃತ ನಾಮಫಲಕ ಉದ್ಘಾಟಿಸಿದ್ದರು. ಆದರೆ, ಧರ್ಮಸ್ಥಳದಲ್ಲಿ ಆದ ಬದಲಾವಣೆ ಮಂಗಳೂರು ನಗರದಲ್ಲಿ ಇನ್ನೂ ಆರಂಭವಾಗಿಲ್ಲ.
Advertisement
ಸಾರ್ವಜನಿಕರ ಅಭಿಪ್ರಾಯನಿಯಂತ್ರಣ ನಮ್ಮ ಕೈಯಲ್ಲೇ
ಪ್ಲಾಸ್ಟಿಕ್ ನಮ್ಮ ಬದುಕಿಗೆ ಅನಿವಾರ್ಯ ಭಾಗವಾಗಿದೆ ನಿಜ. ಆದರೆ, ಸ್ವ ಇಚ್ಛೆ ಮತ್ತು ಸ್ವ ನಿಯಂತ್ರಣದಿಂದ ಕಡಿಮೆ ಸಾಕಷ್ಟು ಅವಕಾಶಗಳಿವೆ. ದಿನನಿತ್ಯದ ಸಾಮಗ್ರಿ ತರಲು ಅಂಗಡಿಗೆ ಹೋಗುವಾಗ ಕೈ ಚೀಲ ತಪ್ಪದೆ ಒಯ್ಯುವುದು. ಪರಿಸರಸ್ನೇಹಿ ಬ್ಯಾಗ್ ಬಳಕೆ, ಕಸ, ತ್ಯಾಜ್ಯ ಸಂಗ್ರಹಣೆಯ ಕಾರ್ಮಿಕರು ತರುವ ಚೀಲಕ್ಕೆ ತ್ಯಾಜ್ಯವನ್ನು ಸುರಿಯುವುದು. ಮನೆಯಲ್ಲಿರುವ ಪ್ಲಾಸ್ಟಿಕ್ ಚೀಲಗಳ ಮರುಬಳಕೆ, ಆಹಾರದ ಪೊಟ್ಟಣಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವುದು ಮೊದಲಾದ ಕ್ರಮಗಳನ್ನು ಕೈಗೊಳ್ಳಬಹುದು.
-ರವಿರಾಜ್ ಎಸ್. ಮಂಗಳೂರು ಅಕ್ಕಿ ಚೀಲಗಳನ್ನು ಬಳಸೋಣ
ಪ್ರತೀ ಮನೆಯಲ್ಲೂ 5, 10 ಅಥವಾ 25 ಕೆ.ಜಿ.ಯ ಅಕ್ಕಿಯ ಚೀಲಗಳನ್ನು ಖರೀದಿಸುತ್ತಾರೆ. ಅದರ ಖಾಲಿ ಚೀಲಗಳನ್ನೇ ನಾವು ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಕೈ ಚೀಲಗಳಾಗಿ ಬಳಸಬಹುದು. ಇದನ್ನು ಮಡಚಿ ತೆಗೆದುಕೊಂಡು ಹೋಗುವುದೂ ಸುಲಭ. ಸರಕಾರ, ಸ್ಥಳೀಯಾಡಳಿತಗಳನ್ನು ದೂರುವ ಬದಲು ನಾವೇ ಸ್ವತ್ಛ ಭಾರತ ಅಭಿಯಾನಕ್ಕೆ ಕೈ ಜೋಡಿಸಬೇಕು.
-ನೇವಿಲ್ ಫೆರ್ನಾಂಡಿಸ್ ಮಂಗಳೂರು ಉದಯವಾಣಿ ಕಾಳಜಿಗೆ ವಂದನೆ
‘ಉದಯವಾಣಿ’ ಪತ್ರಿಕೆಯ ಈ ಕಾಳಜಿಗೆ ವಂದನೆ. ಇದು ದೊಡ್ಡ ಪ್ರಮಾಣದ ಹೋರಾಟವಾಗಿ ಮುಂದಿನ ದಿನಗಳಲ್ಲಿ ರೂಪುಗೊಳ್ಳಲಿ. ಕಳೆದ ಏಳೆಂಟು ವರ್ಷಗಳಿಂದ ತೀರಾ ಕಡಿಮೆ ಪ್ಲಾಸ್ಟಿಕ್ ಬಳಸುತ್ತಿದ್ದೇನೆ. ಚೀಲದಲ್ಲಿಯೇ ತರಕಾರಿ, ಇತರ ವಸ್ತುಗಳನ್ನು ಮನೆಗೆ ತರುತ್ತೇನೆ. ಹೆಚ್ಚಿನ ಅಂಗಡಿಗಳಲ್ಲಿ ಸಣ್ಣ ಪುಟ್ಟ ವಸ್ತುಗಳನ್ನು ಅವರೇ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕೊಡುತ್ತಾರೆ. ಕೈಚೀಲ ಕೊಡದಿದ್ದರೆ ಗ್ರಾಹಕರು ಕೈ ತಪ್ಪುವ ಹೆದರಿಕೆ ಅವರಿಗೆ. ಕೆಲವು ವಿದ್ಯಾವಂತ ನಾಗರಿಕರು ಮನೆಯ ತ್ಯಾಜ್ಯದೊಂದಿಗೆ ಪ್ಲಾಸ್ಟಿಕನ್ನು ರಸ್ತೆ ಬದಿಗಳಲ್ಲಿ ಎಸೆಯುವುದು ಬೇಸರ ಮೂಡಿಸುತ್ತದೆ.
– ಹರೀಶ ಆಚಾರ್ಯ ಮೂಡುಬಿದಿರೆ ದುಬಾರಿ ದಂಡನೆಯೂ ಇದೆ
- ನಿಯಮ ಮೀರಿ ಪ್ಲಾಸ್ಟಿಕ್ ಉತ್ಪಾದಿ ಸಿದರೆ ಒಂದು ಟನ್ ಪ್ಲಾಸ್ಟಿಕ್ ಬ್ಯಾಗ್‌ಗೆ ಮೊದಲ ಬಾರಿ 5,000 ರೂ ದಂಡ, 2ನೇ ಬಾರಿ 10,000 ರೂ. ಮತ್ತು ಮೂರನೇ ಬಾರಿಗೆ 20,000 ರೂ. ದಂಡ.
- ಚಿಲ್ಲರೆ ವ್ಯಾಪಾರಸ್ಥರು ನಿಯಮ ಉಲ್ಲಂಘಿಸಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದರೆ, ಹಂತ ಹಂತವಾಗಿ 2,000 ರೂ., 5,000 ರೂ. ಮತ್ತು 10,000 ರೂ. ದಂಡ.
- ಬೀದಿ ಬದಿ ವ್ಯಾಪಾರಸ್ಥರು ನಿಷೇಧಿತ ಪ್ಲಾಸ್ಟಿಕ್ ಮಾರುತ್ತಿದ್ದರೆ ಹಂತ ಹಂತವಾಗಿ 200 ರೂ., 500 ರೂ. ಮತ್ತು 1,000 ರೂ. ನಿಗದಿ ಮಾಡಲಾಗಿದೆ.
- ಮೂರೂ ವಿಭಾಗದಲ್ಲಿ ಮೂರು ಬಾರಿ ನಿಯಮ ಮುರಿದರೆ ಆ ಅಂಗಡಿಯನ್ನು ಮುಟ್ಟುಗೋಲು ಹಾಕಬಹುದು.
ಪ್ಲಾಸ್ಟಿಕ್ ನಿಯಂತ್ರಣದ ಬಗ್ಗೆ ಅನೇಕ ಸಂಘಟನೆಗಳು, ವಿದ್ಯಾಸಂಸ್ಥೆಗಳು ಧನಾತ್ಮಕ ಕಾರ್ಯತಂತ್ರ ರೂಪಿಸಿವೆ. ಅಂತಹ ಕಾರ್ಯಗಳಿದ್ದಲ್ಲಿ ಹಂಚಿಕೊಳ್ಳಬಹುದು. ವಾಟ್ಸಪ್: 9900567000 -ನವೀನ್ ಭಟ್ ಇಳಂತಿಲ