Advertisement

Mangaluru: ತ್ಯಾಜ್ಯ ಸಾಗಾಟ ವಾಹನಕ್ಕೆ ಏಳೇ ವರ್ಷ ಬಾಳಿಕೆ!

02:57 PM Nov 27, 2024 | Team Udayavani |

ಮಹಾನಗರ: ನಗರದ ತ್ಯಾಜ್ಯ ಸಾಗಾಟ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿರುವ ವಾಹನಗಳ ಗರಿಷ್ಠ ಬಾಳಿಕೆ ಅವಧಿ ಏಳು ವರ್ಷ. ಈ ವಾಹನಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದಿದ್ದರೆ, ನಿಗದಿತ ಅವಧಿಗೆ ಮೊದಲೇ ಅವುಗಳು ಗುಜರಿಗೆ ಸೇರುವ ಸಾಧ್ಯತೆಯಿದೆ. ನಗರದಲ್ಲಿ ಈಗಾಗಲೇ ಕೆಲವು ವಾಹನಗಳಲ್ಲಿ ಬಿಡಿ ಭಾಗಗಳು ತುಕ್ಕು ಹಿಡಿಯುವ ಹಂತಕ್ಕೆ ಬಂದಿದ್ದು, ನಜ್ಜುಗುಜ್ಜಾಗಿರುವುದೂ ಕಂಡು ಬಂದಿದೆ.

Advertisement

ನಗರದಲ್ಲಿ 60 ವಾರ್ಡ್‌ಗಳ ತ್ಯಾಜ್ಯ ವಿಲೇವಾರಿಯ ಹೊಣೆಯನ್ನು ಮಹಾ ನಗರ ಪಾಲಿಕೆಯೇ ಹೊತ್ತುಕೊಂಡಿದ್ದು, ಸ್ವತ್ಛ ಭಾರತ್‌ ಮಿಷನ್‌ ಯೋಜನೆಯಡಿ ಸುಮಾರು 30 ಕೋ.ರೂ. ವೆಚ್ಚದಲ್ಲಿ 107 ಸಣ್ಣ ವಾಹನ, 30 ಟಿಪ್ಪರ್‌, 16 ಕಾಂಪ್ಯಾಕ್ಟರ್‌ ಸೇರಿದಂತೆ 153 ವಾಹನಗಳನ್ನು ಖರೀದಿಸಲಾಗಿದೆ. ಖರೀದಿಯ ಬಳಿಕವೂ ಈ ವಾಹನಗಳು ಸುಮಾರು 6 ತಿಂಗಳು ಯಾರ್ಡ್‌ನಲ್ಲೇ ನಿಲ್ಲಿಸಿ ಒಂದಷ್ಟು ಭಾಗಗಳು ಗಾಳಿ, ಮಳೆ, ಬಿಸಿಲಿಗೆ ತುಕ್ಕು ಹಿಡಿದಿತ್ತು. ಒಂದು ವರ್ಷದಿಂದ ಇವುಗಳನ್ನು ತ್ಯಾಜ್ಯ ಸಂಗ್ರಹ ಕಾರ್ಯದಲ್ಲಿ ಬಳಕೆ ಮಾಡಲಾಗುತ್ತಿದೆ.

ತ್ಯಾಜ್ಯ ಸಾಗಿಸುವ ವೇಳೆ ಸುರಿಯುವ ಕೊಳಚೆ ನೀರು ವಾಹನದ ವಿವಿಧ ಭಾಗಗಳಿಗೆ ಸೇರಿ ತುಕ್ಕು ಹಿಡಿಯುವುದು ಸಾಮಾನ್ಯವಾಗಿದೆ. ನಿರ್ಲಕ್ಷéದ ಚಾಲನೆಯಿಂದ ವಾಹನದ ವಿವಿಧೆಡೆ ಹಾನಿಯಾಗುತ್ತಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ತ್ಯಾಜ್ಯವನ್ನು ಸಾಗಿಸುವುದೂ ಅಲ್ಲಲ್ಲಿ ಕಂಡು ಬರುತ್ತದೆ. ವಾಹನ ಸುಸಜ್ಜಿತವಾಗಿ ಇಟ್ಟುಕೊಂಡರೆ ಮಾತ್ರ ನಿಗದಿತ ಅವಧಿಯ ವರೆಗೆ ಬಳಸಬಹುದಾಗಿದೆ.

ಈ ಹಿಂದಿನ ಆ್ಯಂಟನಿ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯವರು ನಗರದಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದ ಸಂದರ್ಭದಲ್ಲಿ ಬಹುತೇಕ ವಾಹನಗಳು ಆಗಾಗ ಕೈ ಕೊಡುತ್ತಿತ್ತು. ಅಲ್ಲಲ್ಲಿ ಕೆಟ್ಟು ನಿಂತು ತ್ಯಾಜ್ಯ ಸಾಗಾಟಕ್ಕೆ ಅಡ್ಡಿಯಾಗುವ ಘಟನೆಗಳೂ ನಡೆಯುತಿತ್ತು. ಹೆಡ್‌ಲೈಟ್‌, ಬ್ರೇಕ್‌ ಲೈಟ್‌, ಇಂಡಿಕೇಟರ್‌ಗಳು, ಹೈಡ್ರಾಲಿಕ್‌ ವ್ಯವಸ್ಥೆಗಳು ಕೆಲಸ ಮಾಡದೆ ಸಮಸ್ಯೆಗಳೂ ಉಂಟಾಗುತ್ತಿತ್ತು.

ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ನಿರ್ವಹಣೆ?
ಸರ್ವಿಸ್‌ ಸೆಂಟರ್‌ನಲ್ಲಿ ವಾಹನವನ್ನು ಸರ್ವಿಸ್‌ ಮಾಡಿಸಿದರೆ ಸಮಯ ವ್ಯಯವಾಗುತ್ತದೆ. ತ್ಯಾಜ್ಯ ಸಂಗ್ರಹಕ್ಕೂ ತೊಂದರೆ. ಆದ್ದರಿಂದ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಸರ್ವಿಸ್‌ ಮಾಡಿಸುವ ನಿಟ್ಟಿನಲ್ಲಿ ಚಿಂತನೆಯಿದ್ದು, ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆಗಳೂ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

Advertisement

ಎಲೆಕ್ಟ್ರಿಕ್‌ ವಾಹನದಲ್ಲಿಲ್ಲ ಮಹಿಳಾ ಚಾಲಕಿಯರು
ಇಕ್ಕಟ್ಟಾದ ರಸ್ತೆಗಳಲ್ಲಿ ತ್ಯಾಜ್ಯ ಸಂಗ್ರಹಕ್ಕೆ 24 ಎಲೆಕ್ಟ್ರಿಕಲ್‌ ತ್ರಿಚಕ್ರ ವಾಹನಗಳನ್ನು ಖರೀದಿಸಲಾಗಿತ್ತು. ಇದನ್ನು ಚಲಾಯಿಸಲು ಮಹಿಳಾ ಚಾಲಕಿಯರಿಗೆ ತರಬೇತಿಯನ್ನೂ ನೀಡಲಾಗಿತ್ತು. ಆದರೆ ಪ್ರಸ್ತುತ ಈ ವಾಹನಗಳಲ್ಲಿ ಕೆಲವು ವಾಹನಗಳಿಗೆ ಮಾತ್ರ ಮಹಿಳಾ ಚಾಲಕಿಯರಿದ್ದು, ಉಳಿದೆಲ್ಲ ವಾಹನಗಳನ್ನು ಪುರುಷರೇ ನಿರ್ವಹಿಸುತ್ತಿದ್ದಾರೆ. ಈ ವಾಹನಗಳಲ್ಲೂ ಬ್ಯಾಟರಿ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳು ಕಂಡು ಬರುತ್ತಿವೆ.

ವಾಹನಗಳ ನಿರ್ವಹಣೆ
ಕೂಳೂರು ಬಳಿಯ ಅಧಿಕೃತ ಸರ್ವಿಸ್‌ ಸೆಂಟರ್‌ನಲ್ಲಿ ವಾಹನಗಳ ನಿರ್ವಹಣೆ ಮಾಡಲಾಗುತ್ತಿದೆ. ಕೂಳೂರು ಮತ್ತು ಪಂಪ್‌ವೆಲ್‌ನಲ್ಲಿರುವ ಯಾರ್ಡ್‌ನಲ್ಲಿಯೂ ಸಣ್ಣಪುಟ್ಟ ರಿಪೇರಿ ಮಾಡಲಾಗುತ್ತಿದೆ. ವಾಹನಗಳ ಬಾಳಿಕೆ ಇತರ ವಾಹನಗಳಿಗಿಂತ ಅವಧಿ ಕಡಿಮೆ ಇರುವುದರಿಂದ ಅವುಗಳನ್ನು ಉತ್ತಮವಾಗಿ ಇಟ್ಟುಕೊಳ್ಳುವಂತೆ ಚಾಲಕರಿಗೆ ಸೂಚನೆಗಳನ್ನು ನೀಡಲಾಗಿದೆ.
– ಮನೋಜ್‌ ಕುಮಾರ್‌ ಕೋಡಿಕಲ್‌, ಮೇಯರ್‌

-ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next