Advertisement

Mangaluru: ವ್ಯಾಪಾರ ವಲಯ ಸಿದ್ಧವಾದರೂ ವ್ಯಾಪಾರಿಗಳಿಲ್ಲ!

02:43 PM Jan 15, 2025 | Team Udayavani |

ಮಹಾನಗರ: ನಗರದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸ್ಟೇಟ್‌ಬ್ಯಾಂಕ್‌ ಬಳಿ ಪ್ರತ್ಯೇಕ ವ್ಯಾಪಾರಿ ವಲಯ ನಿರ್ಮಾಣ ಮಾಡಿ ಉದ್ಘಾಟನೆ ನೆರವೇರಿಸಿದರೂ ವ್ಯಾಪಾರ ಆರಂಭಗೊಂಡಿಲ್ಲ. ವ್ಯಾಪಾರಿಗಳಿಗೆ ಬೀದಿಯಲ್ಲೇ ಉತ್ತಮ ವ್ಯಾಪಾರ ವಾಗುತ್ತಿರುವ ಕಾರಣದಿಂದಾಗಿ ಬೀದಿ ಬದಿ ವ್ಯಾಪಾರಸ್ಥರು ವಲಯಕ್ಕೆ ಸ್ಥಳಾಂತರಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

Advertisement

ಕಳೆದ ವರ್ಷ ಅಕ್ಟೋಬರ್‌ ತಿಂಗಳಿಗಿಂತಲೂ ಮೊದಲೇ ಸ್ಟಾಲ್‌ ಹಂಚಿಕೆ ನಡೆದಿದೆ. ಡಿಸೆಂಬರ್‌ ಅಂತ್ಯದಲ್ಲಿ ಉದ್ಘಾಟನೆಯಾಗಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ವಲಯ ಕಾರ್ಯಾಚರಿಸುತ್ತಿಲ್ಲ. ಕೆಲವೇ ಕೆಲವು ಮಂದಿ ವಲಯಕ್ಕೆ ಆಗಮಿಸಿದ್ದು, ಉಳಿದವರು ಬೀದಿಯಲ್ಲೇ ವ್ಯಾಪಾರ ಮುಂದುವರಿಸಿದ್ದಾರೆ.

ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿ
ಪ್ರಸ್ತುತ ವಲಯಕ್ಕೆ ಆಗಮಿಸುವ ಗ್ರಾಹಕರಿಗೆ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಇಲ್ಲ. ಮುಂಭಾಗದ ರಸ್ತೆ ಹಾಗೂ ಹಿಂಭಾಗದ ನೀರಿನ ಟ್ಯಾಂಕ್‌ ಸಮೀಪದ ಖಾಲಿ ಜಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡುವಂತೆ ವ್ಯಾಪಾರಿಗಳು ಆಗ್ರಹಿಸಿದ್ದಾರೆ.

ಸ್ಥಳಾಂತರಕ್ಕೆ ಹಿಂದೇಟು
ಸ್ಟೇಟ್‌ಬ್ಯಾಂಕ್‌ ಸುತ್ತಮುತ್ತಲ ರಸ್ತೆಗಳಲ್ಲಿ ಸಾರ್ವಜನಿಕರು ಅತ್ಯಧಿಕ ಸಂಖ್ಯೆಯಲ್ಲಿ ಓಡಾಡುವ ಕಾರಣದಿಂದಾಗಿ ರಸ್ತೆ ಬದಿಯಲ್ಲೇ ಅನೇಕ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರವಾಗುತ್ತಿದೆ. ಆ ಕಾರಣದಿಂದಾಗಿ ವಲಯದತ್ತ ಮುಖ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

143 ಸ್ಟಾಲ್‌ಗ‌ಳು 93 ಮಂದಿಗೆ ಹಂಚಿಕೆ
ಪಾಲಿಕೆಯು ಸಮಿತಿ ಈ ಹಿಂದೆ 667 ಬೀದಿಬದಿ ವ್ಯಾಪಾರಸ್ಥರನ್ನು ಗುರುತಿಸಿತ್ತು. ವಲಯದಲ್ಲಿ 143 ಸ್ಟಾಲ್‌ಗ‌ಳನ್ನು ನಿರ್ಮಿಸಲಾಗಿದೆ. 93 ಮಂದಿಗಷ್ಟೇ ಗುರುತಿನ ಚೀಟಿ ನೀಡಲಾಗಿದೆ. ಉಳಿದ ಸ್ಟಾಲ್‌ಗ‌ಳನ್ನು ಸೂಕ್ತ ವ್ಯಾಪಾರಿಗಳನ್ನು ಗುರುತಿಸಿ ಹಂಚಿಕೆ ಮಾಡುವಂತೆ ವ್ಯಾಪಾರಿಗಳು ಆಗ್ರಹಿಸಿದ್ದಾರೆ.

Advertisement

ಕುಡುಕರು, ಭಿಕ್ಷುಕರ, ಇಲಿ, ಹೆಗ್ಗಣಗಳ ಆವಾಸ ತಾಣ
ಗುರುತಿನ ಚೀಟಿ ವಿತರಿಸಿ ಸ್ಟಾಲ್‌ ಹಂಚಿಕೆಯಾಗಿ ಹಲವು ತಿಂಗಳು ಕಳೆದರೂ ವ್ಯಾಪಾರ ಆರಂಭಗೊಂಡಿಲ್ಲ. ನಿರ್ಮಾಣಗೊಂಡ ವಲಯ ಕುಡುಕರ, ಭಿಕ್ಷುಕರ ಆವಾಸ ತಾಣವಾಗಿ ಮಾರ್ಪಾಡಾಗುತ್ತಿದೆ. ಮದ್ಯಪಾನ, ಧೂಮಪಾನ ಮಾಡುತ್ತಿರುವ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಲ್ಲದೆ ವಲಯದ ಹಿಂಭಾಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಆಹಾರ ಮಳಿಗೆಯವರಿಗೆ ನೀರು ಹರಿದುಹೋಗಲು ವ್ಯವಸ್ಥೆ ಇಲ್ಲ. ಆ ಭಾಗ ಅವ್ಯವಸ್ಥೆಯಲ್ಲಿದ್ದು, ಇಲಿ, ಹೆಗ್ಗಣಗಳ ತಾಣವಾಗಿದೆ. ಆ ಭಾಗದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

ಅಕ್ರಮ ವ್ಯಾಪಾರಿಗಳಿಗೆ ಕಡಿವಾಣ ಹಾಕಿ
ವಲಯ ನಿರ್ಮಾಣದ ಬಳಿಕವೂ ಸ್ಟೇಟ್‌ಬ್ಯಾಂಕ್‌ ಸುತ್ತಮುತ್ತ ಬೀದಿ ವ್ಯಾಪಾರ ಮುಂದುವರೆದಿದೆ. ಪಾಲಿಕೆ ಅಧಿಕಾರಿಗಳು ಅವರ ವಿರುದ್ಧ ಯಾವುದೇ ಕ್ರಮವಹಿಸುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಮತ್ತೂಂದೆಡೆ ಬಸ್‌ ನಿಲ್ದಾಣದೊಳಗೆ ಕೆಲವರು ಹೊಸದಾಗಿ ಸ್ಟಾಲ್‌ಗ‌ಳನ್ನು ಇರಿಸಿದ್ದು, ಅಕ್ರಮವಾಗಿ ವ್ಯಾಪಾರ ನಡೆಸುತ್ತಿದ್ದಾರೆ. ಅಕ್ರಮ ವ್ಯಾಪಾರಸ್ಥರ ವಿರುದ್ಧ ಪಾಲಿಕೆ ಕ್ರಮವಹಿಸಬೇಕಿದೆ.

ದಾರಿ ಬಂದ್‌ ತೆರವು ಮಾಡಿ
ವಲಯದ ಮುಂಭಾಗದಲ್ಲಿ ಕೆಲವು ಅನಧಿಕೃತ ಗೂಡಂಗಡಿಗಳು ಕಾರ್ಯಾಚರಿಸುತ್ತಿದ್ದು, ಅವುಗಳನ್ನು ತೆರವುಗೊಳಿಸಲು ಆಗ್ರಹಗಳು ಕೇಳಿಬಂದಿವೆ. ಅಲ್ಲದೆ ನಂದಿನಿ ಸ್ಟಾಲ್‌ ಸೀಮಿತ ವ್ಯಾಪ್ತಿಯ ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿದೆ ಎನ್ನಲಾಗಿದೆ. ಮುಖ್ಯ ರಸ್ತೆಯಿಂದ ವಲಯದೊಳಗೆ ಪ್ರವೇಶ ಮಾಡಲು ಈ ಹಿಂದೆ ದಾರಿ ಬಿಡಲಾಗಿತ್ತು. ಅವುಗಳನ್ನು ಬಂದ್‌ ಮಾಡಲಾಗಿದ್ದು, ಮತ್ತೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಗಳಿವೆ.

ಬೀದಿಬದಿ ವ್ಯಾಪಾರಕ್ಕೆ ನಿಯಂತ್ರಣ ಹೇರಲಿ
ಪಾಲಿಕೆ ಇತಿಹಾಸದಲ್ಲೇ ಬೀದಿಬದಿ ವ್ಯಾಪಾರಕ್ಕೆ ಅತ್ಯುತ್ತಮ ವ್ಯವಸ್ಥೆ ಕಲ್ಪಿಸಿದೆ. ಪ್ರಸ್ತುತ ಸ್ಟೇಟ್‌ಬ್ಯಾಂಕ್‌ ಸುತ್ತಮುತ್ತ ವ್ಯಾಪಾರ ನಡೆಸುತ್ತಿದ್ದಾರೆ. ಅವರನ್ನು ಪಾಲಿಕೆ ಸ್ಥಳಾಂತರ ಮಾಡಿ ವಲಯಕ್ಕೆ ಕರೆ ತರಬೇಕು. ಅನೇಕ ಕಡೆಗಳಲ್ಲಿ ಬೀದಿ ವ್ಯಾಪಾರ ನಡೆಯುತ್ತಿದ್ದು, ಅವುಗಳನ್ನು ಪಾಲಿಕೆ ನಿಯಂತ್ರಿಸಬೇಕು. ಹೊಸ ವಲಯದಲ್ಲಿ ಬಾಕಿ ಉಳಿದ ಕೆಲಸಗಳನ್ನು ಪೂರ್ಣಗೊಳಿಸಬೇಕು.
-ಮಹಮ್ಮದ್‌ ಮುಸ್ತಾಫಾ, ಬೀದಿ ಬದಿ ವ್ಯಾಪಾರಿಗಳ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.