Advertisement

ತ್ಯಾಜ್ಯ ನಿರ್ವಹಣೆ ಅರಿವಿನ ಕೊರತೆ ನಮಗಿದೆ: ಏಕಗಮ್ಯಾನಂದಜೀ

12:10 PM Apr 06, 2019 | Naveen |

ಮಹಾನಗರ : ನಮಗೆ ಸ್ವಚ್ಛತೆಯ ಅರಿವಿದೆ. ಆದರೆ ತ್ಯಾಜ್ಯ ನಿರ್ವಹಣೆಯ ಅರಿವಿನ ಕೊರತೆ ಕಂಡುಬರುತ್ತಿದೆ. ನಾವು ಸ್ವಚ್ಛತೆಯ ಹೆಸರಿನಲ್ಲಿ ಕಸವನ್ನು ಸಂಗ್ರಹಿಸಿ ಕೊಡುತ್ತೇವೆ. ಕಸವು ಕೇಂದ್ರೀಕೃತವಾಗಿ ಊರ ಹೊರಗಿನ ನೂರಾರು ಎಕ್ರೆ ಪ್ರದೇಶದಲ್ಲಿ ಸುರಿಯಲ್ಪಟ್ಟು ನೆಲ-ಜಲವನ್ನು ಕಲುಷಿತಗೊಳಿಸಿ ವ್ಯಾಪಕವಾಗಿ ಪರಿಸರ ಹಾನಿಗೆ ಕಾರಣವಾಗುತ್ತಿದೆ ಎಂದು ಮಂಗಳೂರು ರಾಮಕೃಷ್ಣ ಮಿಷನ್‌ನ ಏಕಗಮ್ಯಾನಂದಜೀ ಹೇಳಿದರು.

Advertisement

ಕ್ಯಾಂಪ್ಕೋ ಕೇಂದ್ರ ಕಚೇರಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ 100ನೇ ಸ್ವಚ್ಛತಾ ಸಂಪರ್ಕ ಅಭಿಯಾನ, ಮಡಕೆ ಗೊಬ್ಬರ ತಯಾರಿ ಪ್ರಾತ್ಯಕ್ಷಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಚ್ಛ ಮಂಗಳೂರು ಕಾರ್ಯಕ್ರಮವನ್ನು ಸುಮಾರು ನಾಲ್ಕೂವರೆ ವರ್ಷಗಳಿಂದ ಹಲವಾರು ಸಂಸ್ಥೆಗಳನ್ನು ಸೇರಿಸಿಕೊಂಡು ಮಾಡುತ್ತಿದ್ದೇವೆ. ಪ್ರಧಾನಿಗಳ ಆಶಯದಂತೆ ಈ ವರ್ಷದ ಅ. 2ರಂದು ಗಾಂಧೀ ಜಯಂತಿಯಂದು ಈ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿವೆ ಎಂದರು.

ಗ್ರಾಮಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ
ರಾಮಕೃಷ್ಣ ಮಿಷನ್‌ ಸ್ವಚ್ಚತಾ ಸಂಪರ್ಕ ಅಭಿಯಾನದ ಮೂಲಕ ಜನಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದು, ಶ್ರಮದಾನದ ಮೂಲಕ ಪರಿಸರವನ್ನು ಸ್ವಚ್ಛತೆ ಮಾಡುವ ಕೆಲಸವನ್ನು ಮಾಡಿರುತ್ತೇವೆ; ಈ ಕಾರ್ಯದಲ್ಲಿ ನಮ್ಮ ಅನೇಕ ಸಂಘ
– ಸಂಸ್ಥೆಗಳು ಕೈ ಜೋಡಿಸಿವೆ. ಸ್ವಚ್ಛ  ಮನಸ್ಸು ಯೋಜನೆಯಲ್ಲಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಗುವುದು. ಸ್ವಚ್ಛ ಸೋಚ್‌ ಎಂಬ ಪರಿಕಲ್ಪನೆಯೊಂದಿಗೆ ಕಾಲೇಜುಗಳಿಗೆ ತೆರಳಿ ಅಲ್ಲಿ ಸ್ವಚ್ಛತೆಯ ಬಗ್ಗೆ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗುವುದು. ಇದೀಗ ಸ್ವಚ್ಛ ಗ್ರಾಮ ಅಭಿಯಾನದ ಮೂಲಕ ಸುಮಾರು 200 ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಜಿಲ್ಲಾ ಪಂಚಾಯತ್‌ ಮೂಲಕ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಹಸಿಕಸ ನಿರ್ವಹಣೆಗೆ ಮೂರು ಮಡಕೆಯ ವಿಧಾನ -ಮಡಕೆ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು
ಅಭಿಯಾನದ ಕಾರ್ಯಕರ್ತ ಸಚಿನ್‌ ನಡೆಸಿಕೊಟ್ಟರು.

ಕ್ಯಾಂಪ್ಕೊ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುರೇಶ್‌ ಭಂಡಾರಿ ಎಂ., ರಾಮಕೃಷ್ಣ ಮಿಷನ್‌ ಸ್ವತ್ಛ ಮಂಗಳೂರು ಅಭಿಯಾನದ ಪ್ರಧಾನ ಸಂಚಾಲಕ ಉಮಾನಾಥ್‌ ಕೋಟೆಕಾರ್‌, ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌, ವಿಶ್ವಕರ್ಮ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಹರೀಶ್‌ ಆಚಾರ್‌ ಉಪಸ್ಥಿತರಿದ್ದರು. ಪಿ. ಶಿವರಾಮ್‌ ಪ್ರಾರ್ಥಿಸಿ, ಅರುಣಾ ಆರ್‌. ಶೆಟ್ಟಿ ವಂದಿಸಿದರು. ಟಿ.ಎಸ್‌. ಭಟ್‌ ನಿರೂಪಿಸಿದರು.

Advertisement

ಅರಿವು ಮೂಡಿಸಿ ಕ್ಯಾಂಪ್ಕೊ ಅಧ್ಯಕ್ಷ ಎಸ್‌.
ಆರ್‌. ಸತೀಶ್ಚಂದ್ರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ,
ಸ್ವಚ್ಛತೆ ಎಂಬುದು ನಮ್ಮ ಮನ, ಮನೆಗಳಲ್ಲಿ ಆಗಬೇಕಾಗಿದೆ; ನಮ್ಮ ಸುತ್ತಮುತ್ತಲಿನ ಪರಿಸರವನ್ನು ನಾವೇ ಶುಚಿಗೊಳಿಸಿಕೊಳ್ಳುವುದರ ಜತೆಗೆ ಸ್ವಚ್ಛತೆಯ ಬಗ್ಗೆ
ನಾವು ಸಮಾಜದಲ್ಲಿ ಅರಿವು ಮೂಡಿಸಬೇಕೆಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next