Advertisement

ಮಂಗಳೂರು-ಸುಬ್ರಹ್ಮಣ್ಯ ನಿತ್ಯ ಪ್ಯಾಸೆಂಜರ್‌ ರೈಲು ಬೇಡಿಕೆ

12:53 AM Feb 27, 2023 | Team Udayavani |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಮತ್ತು ಪರಿಸರದಿಂದ ನಿತ್ಯ ಮಂಗಳೂರಿಗೆ ಹೋಗಿ ಬರುವ ಜನರಿಗಾಗಿ ಈ ಹಿಂದೆ ಮೀಟರ್‌ ಗೇಜ್‌ ಕಾಲದಲ್ಲಿ ಸುಬ್ರಹ್ಮಣ್ಯದಿಂದ ಬೆಳಗ್ಗೆ ಮಂಗಳೂರಿಗೆ ಹೋಗಿ ಸಂಜೆ ಮರಳುತ್ತಿದ್ದ ರೈಲನ್ನು ಪುನಃ ಆರಂಭಿಸಬೇಕೆಂದು ಈ ಭಾಗದ ಜನತೆ 18 ವರ್ಷಗಳಿಂದ ಆಗ್ರಹಿಸುತ್ತಿದ್ದರೂ ಈಡೇರದ ಹಿನ್ನೆಲೆಯಲ್ಲಿ ಹೋರಾಟಗಾರರು ಟ್ವಿಟರ್‌ ಅಭಿಯಾನದ ಮೊರೆ ಹೋಗಿದ್ದಾರೆ.

Advertisement

ಬೇಡಿಕೆಗಳನ್ನು ಅನುಷ್ಠಾನಿಸುವಂತೆ ದಿನಂಪ್ರತಿ ಟ್ವೀಟ್‌ ಮಾಡಿ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಟ್ಯಾಗ್‌ ಮಾಡಿ ಆಗ್ರಹಿಸುತ್ತಿದ್ದಾರೆ. ಈಗಾಗಲೇ ಹಲವು ಪ್ರಮುಖರು ಬೆಂಬಲ ಸೂಚಿಸುವ ಮೂಲಕ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.

ನಿರ್ಲಕ್ಷಕ್ಕೆ ಆಕ್ರೋಶ
ಈ ರೈಲು ಆರಂಭಗೊಂಡು ಸುಬ್ರಹ್ಮಣ್ಯದಲ್ಲಿ ರಾತ್ರಿ ತಂಗಿದರೆ ಇತರ ರೈಲುಗಳು ಹಾಗೂ ಗೂಡ್ಸ್‌ ರೈಲುಗಳ ಓಡಾಟಕ್ಕೆ ತೊಂದರೆ ಆಗುತ್ತದೆ ಎಂಬ ನೆಪ ಒಡ್ಡಿ ಮೈಸೂರು ರೈಲ್ವೇ ವಿಭಾಗ ಬೇಡಿಕೆಯನ್ನು ನಿರ್ಲಕ್ಷಿಸಿತ್ತು. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಪ್ಪಿಗೆಯಾಗದ ಪರಿಷ್ಕೃತ ಪ್ರಸ್ತಾವನೆ
ದಕ್ಷಿಣ ರೈಲ್ವೇಯು ಈ ಭಾಗದ ಜನತೆಯ ತೀವ್ರ ಆಗ್ರಹವನ್ನು ಇನ್ನೊಮ್ಮೆ ಪರಿಗಣಿಸಿ, ಇನ್ನೊಂದು ಸಲಹೆಯನ್ನು ನೈಋತ್ಯ ರೈಲ್ವೇಗೆ ಕಳುಹಿಸಿದೆ. ಆ ಪ್ರಕಾರ ಬೆಳಗ್ಗೆ 3.30ರ ಸುಮಾರಿಗೆ ಈ ರೈಲು ಮಂಗಳೂರು ಸೆಂಟ್ರಲಿನಿಂದ ಹೊರಟು ಸುಬ್ರಹ್ಮಣ್ಯಕ್ಕೆ ಬೆಳಗ್ಗೆ 6.10ಕ್ಕೆ ತಲುಪಿ ಪುನಃ 6.40ಕ್ಕೆ ಹೊರಟು ಮಂಗಳೂರು ಸೆಂಟ್ರಲಿಗೆ ಬೆಳಗ್ಗೆ 9.20ಕ್ಕೆ ತಲುಪುವುದು. ಇದರಿಂದ ಬೆಂಗಳೂರು ಹಾಗೂ ಮಂಗಳೂರು ನಡುವೆ ಸಂಚರಿಸುವ ರೈಲುಗಳ ಸುಗಮ ಸಂಚಾರಕ್ಕೆ ಅಡ್ಡಿ ಆಗುವುದಿಲ್ಲ. ಅದೇ ರೀತಿಯಲ್ಲಿ ಸಂಜೆ ಮಂಗಳೂರು ಸೆಂಟ್ರಲ್‌ನಿಂದ ಕಬಕ ಪುತ್ತೂರು ವರೆಗೆ ಸಂಚರಿಸುವ ರೈಲನ್ನು ಸಹ ಸುಬ್ರಹ್ಮಣ್ಯ ತನಕ ವಿಸ್ತರಿಸುವಂತೆ ಕೋರಲಾಗಿದೆ. ಅದರೆ ಈ ಸಲಹೆಯನ್ನು ಪರಿಗಣಿಸಿದರೆ ಈಗ ರಾತ್ರಿ ಹೊತ್ತು ನಡೆಯುವ ಈ ರೈಲಿನ ಬೋಗಿಗಳ ನಿರ್ವಹಣೆ ಹಾಗೂ ಸ್ವತ್ಛತೆಯನ್ನು ಹಗಲಲ್ಲಿ ಮಾಡಬೇಕಾಗುತ್ತದೆ. ಒಂದು ವೇಳೆ ಹಗಲು ಹೊತ್ತು ನಿರ್ವಹಣೆ ಮಾಡುವುದಿದ್ದರೆ ಈ ರೈಲಿನ ಬೋಗಿಗಳನ್ನು ಉಪಯೋಗಿಸಿ ಬೆಳಗ್ಗೆ 10ಕ್ಕೆ ಈಗ ಮಂಗಳೂರು ಸೆಂಟ್ರಲಿನಿಂದ ಸುಬ್ರಹ್ಮಣ್ಯ ರೋಡ್‌ ತನಕ ಹೋಗಿ ಬರುವ ಲೋಕಲ್‌ ರೈಲಿಗೆ ಬೇರೆ ರೈಲಿನ ಬೋಗಿಗಳನ್ನು ಬಳಸಿ ಓಡಿಸುವ ಅನಿವಾರ್ಯ ಕೂಡ ಇದೆ. ಇದಕ್ಕೆ ಪರಿಹಾರವಾಗಿ ಮಂಗಳೂರಿಗೆ ಬೆಳಗ್ಗೆ ಬಂದು ತಂಗಿ ಸಂಜೆ ಹಿಂದಿರುಗುವ ಒಂದು ರೈಲನ್ನೇ ಈಗ ಮಂಗಳೂರು ಸೆಂಟ್ರಲ್‌ನಿಂದ ಬೆಳಗ್ಗೆ 10 ಗಂಟೆಗೆ ಹೊರಡುವ ರೈಲು ಸಂಖ್ಯೆ 06488/89 ಮಂಗಳೂರು ಸೆಂಟ್ರಲ್‌ – ಸುಬ್ರಹ್ಮಣ್ಯ ರೋಡ್‌ ಪ್ಯಾಸೆಂಜರ್‌ ರೈಲು ಆಗಿ ಓಡಿಸುವಂತೆ ಸಲಹೆ ನೀಡಲಾಗಿದೆ. ಈ ಪ್ರಸ್ತಾವನೆಯನ್ನು ನೈಋತ್ಯ ರೈಲ್ವೇ ತಿರಸ್ಕರಿಸಿದ್ದು, ಜನತೆಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸಮಸ್ಯೆಯ ಪರಿಹಾರಕ್ಕೆ ಸ್ಥಳೀಯ ಸಂಸದರು ಮಧ್ಯಪ್ರವೇಶಿಸಬೇಕೆಂದು ಜನ ಆಗ್ರಹಿಸಿದ್ದಾರೆ.

ಸಮನ್ವಯಕ್ಕೆ ಆಗ್ರಹ
ನೈಋತ್ಯ ರೈಲ್ವೇ (ಹುಬ್ಬಳ್ಳಿ) ಮತ್ತು ದಕ್ಷಿಣ ರೈಲ್ವೇ (ಚೆನ್ನೈ) ಅಧಿಕಾರಿಗಳಲ್ಲಿ ಸಮನ್ವಯ ಇಲ್ಲದಿರುವುದೇ ಈ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದ್ದು, ಎರಡೂ ಕಡೆಯ ಅಧಿಕಾರಿಗಳು ಚರ್ಚಿಸಿ ಬೇಡಿಕೆ ಅನುಷ್ಠಾನಕ್ಕೆ ಮುಂದಾಗಲಿ ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.

Advertisement

ಉದಯವಾಣಿ ವರದಿ
ಮಂಗಳೂರು-ಸುಬ್ರಹ್ಮಣ್ಯ ಮಧ್ಯೆ ನಿತ್ಯ ಪ್ರಯಾಣಿಕ ರೈಲು ಇನ್ನೂ ಅನುಷ್ಠಾನ ಆಗದೇ ಇರುವ ಬಗ್ಗೆ ಉದಯವಾಣಿ ಜನವರಿಯಲ್ಲಿ ವರದಿ ಪ್ರಕಟಿಸಿತ್ತು. ಇದೀಗ ಬೇಡಿಕೆ ಬಗೆಗಿನ ಒತ್ತಡಗಳು ತೀವ್ರಗೊಳ್ಳುತ್ತಿವೆ.

ಪ್ರಸ್ತಾವನೆ ತಿರಸ್ಕೃತ
ಮಂಗಳೂರು ಸೆಂಟ್ರಲ್‌ನಿಂದ ಬೆಳಗ್ಗೆ 4.15ಕ್ಕೆ ಹೊರಟು ಸುಬ್ರಹ್ಮಣ್ಯ ರೋಡಿಗೆ 6.30ಕ್ಕೆ ತಲುಪಿ ಅಲ್ಲಿಂದ ಬೆಳಗ್ಗೆ 7ಕ್ಕೆ ವಾಪಸು ಹೊರಟು ಮಂಗಳೂರು ಸೆಂಟ್ರಲಿಗೆ 9.20ಕ್ಕೆ ತಲುಪುವುದು (ಮಂಗಳೂರು ಹಾಗೂ ಪುತ್ತೂರು ನಡುವೆ ಪ್ರಸ್ತುತ ಓಡುತ್ತಿರುವ ರೈಲಿನ ವೇಳಾಪಟ್ಟಿಗೆ ಸರಿ ಹೊಂದುವಂತೆ). ಆದರೆ ಇದನ್ನು ಕಾರ್ಯಗತ ಮಾಡಲು ಮೈಸೂರು ರೈಲ್ವೇ ವಿಭಾಗ ಇದಕ್ಕಾಗಿ ಹಾಲಿ ಸಂಚರಿಸುತ್ತಿರುವ ರೈಲು ಸಂಖ್ಯೆ 16511/12 ಕ್ರಾ.ಸಂ.ರಾ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್‌ ರೈಲನ್ನು ಈಗ ಪಡೀಲು ತಲುಪುವ ಸಮಯವನ್ನು ಬೆಳಗ್ಗೆ 6.45ಕ್ಕೆ ಬದಲಾಗಿ 7.20ಕ್ಕೆ ಬದಲಾಯಿಸಬೇಕೆಂದು ಷರತ್ತು ವಿಧಿಸಿತ್ತು. ಇದು ಕಾರ್ಯಸಾಧ್ಯವಲ್ಲದ ಷರತ್ತು. ಯಾಕೆಂದರೆ ಒಂದು ಲೋಕಲ್‌ ರೈಲಿನ ಸಂಚಾರಕ್ಕೆ ಇನ್ನೊಂದು ಬಹುದೂರದ ಎಕ್ಸ್‌ಪ್ರೆಸ್‌ ರೈಲಿನ ಈಗಿರುವ ಪ್ರಯಾಣಿಕ ಸ್ನೇಹಿ ಸಮಯ ಬದಲಿಸುವುದು ಸರಿಯಲ್ಲ. ಹೀಗಾಗಿ ದಕ್ಷಿಣ ರೈಲ್ವೇಯು ಮೈಸೂರು ವಿಭಾಗದ ಈ ಷರತ್ತನ್ನು ಅಲ್ಲಗಳೆದಿದೆ ಎಂದು ತಿಳಿದುಬಂದಿದೆ.

ಮಂಗಳೂರು – ಸುಬ್ರಹ್ಮಣ್ಯ ನಡುವಿನ ನಿತ್ಯ ಪ್ರಯಾಣಿಕ ರೈಲನ್ನು ಮತ್ತೆ ಆರಂಭಿಸುವಂತೆ ಜನತೆಯ ಬೇಡಿಕೆಯಂತೆ ಈಗಾಗಲೇ ಸಂಬಂಧಿಸಿದವರಿಗೆ ಪತ್ರ ಬರೆದಿದ್ದೇನೆ. ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು.
– ನಳಿನ್‌ ಕುಮಾರ್‌ ಕಟೀಲು, ಸಂಸದ, ದಕ್ಷಿಣ ಕನ್ನಡ

Advertisement

Udayavani is now on Telegram. Click here to join our channel and stay updated with the latest news.

Next