Advertisement

ಮಂಗಳೂರು ದಕ್ಷಿಣ: ಜೆ.ಆರ್. ಲೋಬೋ ನಾಮಪತ್ರ ಸಲ್ಲಿಕೆ, ಕಾರ್ಯಕರ್ತರ ಭರ್ಜರಿ ಬೆಂಬಲ

12:03 PM Apr 21, 2023 | Team Udayavani |

ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜೆ. ಆರ್‌. ಲೋಬೋ ಅವರು ಭಾರೀ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು.

Advertisement

ನಾಮಪತ್ರ ಸಲ್ಲಿಕೆಗೆ ಮುನ್ನ ಮಂಗಳಾದೇವಿಯ ಶ್ರೀ ಮಹತೋಭಾರ ಕ್ಷೇತ್ರ, ಕದ್ರಿಯ ಶ್ರೀ ಮಂಜುನಾಥ ಕ್ಷೇತ್ರ, ಬಿಕರ್ನಕಟ್ಟೆಯ ಇನ್‌ಫೆಂಟ್‌ ಜೀಸಸ್‌ ದೇವಾಲಯ, ಮಂಗಳೂರಿನ ಬಿಷಪ್‌ ಹೌಸ್‌, ರಥಬೀದಿಯ ವೆಂಕಟರಮಣ ದೇವಸ್ಥಾನ, ಬಂದರಿನ ಝೀನತ್‌ ಭಕ್ಷ್ ಜುಮ್ಮಾ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಆಗಮಿಸಿ ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರ ಜತೆ ವಿಶೇಷ ಪೂಜೆ ಸಲ್ಲಿಸಿದರು.

ಮತದಾರರ ಒಲವು ಕಾಂಗ್ರೆಸ್‌ ಕಡೆಗಿದೆ

ಮಂಗಳೂರು ಐಟಿ ಬಿಟಿ ಉದ್ಯಮವನ್ನು ಆಕರ್ಷಿಸಬೇಕು. ಇಲ್ಲಿ ಅಂತರಾಷ್ಟ್ರೀಯ ಕ್ರೀಡಾ ಗ್ರಾಮ ನಿರ್ಮಾಣವಾಗಬೇಕು. ತನ್ನೂಲಕ ಪ್ರವಾಸೋದ್ಯಮ ಸೃಷ್ಟಿಯಾಗಬೇಕು. ಇದಕ್ಕಾಗಿ ಕಾನೂನು ವ್ಯವಸ್ಥೆ ಕಟ್ಟುನಿಟ್ಟಾಗಿರುವಂತೆ ಮಾಡಬೇಕು. ಶಾಂತಿ ಮತ್ತು ಅಭಿವೃದ್ಧಿ ನಮ್ಮ ಗುರಿಯಾಗಬೇಕು. ರಾಜ್ಯ ಸರಕಾರದ ಆಡಳಿತ ವೈಫಲ್ಯ, ಬೆಲೆ ಏರಿಕೆ, ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದು, ಈ ಬಾರಿ ಚುನಾವಣೆಯಲ್ಲಿ ಮತದಾರರ ಒಲವು ಕಾಂಗ್ರೆಸ್‌ ಕಡೆಗಿದೆ ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದ ಜೆ.ಆರ್. ಲೋಬೋ ಅವರು ಹೇಳಿದರು.

ರಾಜ್ಯ ಕಾಂಗ್ರೆಸ್‌ ವಕ್ತಾರ ಸುಧೀರ್‌ ಕುಮಾರ್‌ ಮುರೋಳಿ ಮಾತನಾಡಿದರು.

Advertisement

ಗೋಕರ್ಣನಾಥ ದೇವಸ್ಥಾನದಲ್ಲಿ ನಡೆದ ಪೂಜೆ ವೇಳೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ವಿಧಾನಪರಿಷತ್‌ ಸದಸ್ಯ ಕೆ. ಹರೀಶ್‌ ಕುಮಾರ್‌, ವಿಧಾನಪರಿಷತ್‌ ಸದಸ್ಯ ಮಂಜುನಾಥ್‌ ಭಂಡಾರಿ, ದೇವಸ್ಥಾನದ ಅಧ್ಯಕ್ಷ ಸಾಯಿರಾಂ, ಎಐಸಿಸಿ ಕಾರ್ಯದರ್ಶಿ ರೋಝಿ ಜಾನ್‌, ಅಖೀಲ ಭಾರತ ಮಹಿಳಾ ಕಾಂಗ್ರೆಸ್‌ ಪದಾ ಕಾರಿಗಳಾದ ಜಾನೆಟ್‌ ಡಿಸೋಜಾ, ಶೀಬಾ ರಾಮಚಂದ್ರನ್‌, ಡಾ. ಬಿ.ಜಿ.ಸುವರ್ಣ, ಮಾಧವ್‌ ಸುವರ್ಣ, ಉಪಸ್ಥಿತರಿದ್ದರು.

ಕುದ್ರೋಳಿ ಕ್ಷೇತ್ರದ ಆವರಣದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಪಕ್ಷದ ಕಾರ್ಯಕರ್ತರು, ಬೆಂಬಲಿಗರ ಜತೆ ಸುಮಾರು ಮೂರು ಕಿ.ಮೀ. ಪಾದಯಾತ್ರೆಯ ಮೂಲಕ ಮೆರವಣಿಗೆ ನಡೆಸಿದ ಜೆ.ಆರ್‌. ಲೋಬೋ, ಬಲ್ಲಾಳ್‌ಬಾಗ್‌ನಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಸುರೇಶ್‌ ಬಲ್ಲಾಳ್‌ ಅವರ ಮನೆಗೆ ತೆರಳಿ ಆಶೀರ್ವಾದ ಪಡೆದರು. ಅಲ್ಲಿಂದ ಮಂಗಳೂರು ಮಹಾನಗರ ಪಾಲಿಕೆಯ ಮಂಗಳೂರು ದಕ್ಷಿಣ ಚುನಾವಣಾ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಮೆರುಗು ನೀಡಿದ ಕೀಲುಗೊಂಬೆ- ಪಿಲಿನಲಿಕೆ!

ಕುದ್ರೋಳಿ ಕ್ಷೇತ್ರದ ಹೊರ ಆವರಣದಲ್ಲಿ ಸೇರಿದ್ದ ಜನಸ್ತೋಮದ ಎದುರಲ್ಲಿ ಹುಲಿವೇಷಧಾರಿಗಳು ಕಸರಸತ್ತು ಪ್ರದರ್ಶಿಸುವ ಮೂಲಕ ಮೆರವಣಿಗೆಗೆ ಮೆರುಗು ನೀಡಿದರು. ಮೆರವಣಿಗೆಯಲ್ಲಿ ಕೀಲುಗೊಂಬೆ, ಚೆಂಡೆವಾದನ, ನಾಸಿಕ್‌ ಬ್ಯಾಂಡ್‌ ಜತೆಗೆ ಹುಲಿವೇಷಧಾರಿಗಳು ಸಾಥ್‌ ನೀಡಿದರು. ಮೆರವಣಿಗೆಯಲ್ಲಿ ಧ್ವನಿವರ್ಧಕದ ಮೂಲಕ ಪಕ್ಷ, ಅಭ್ಯರ್ಥಿ ಪರ ಘೋಷಣೆಗಳು ಮೊಳಗಿದವು.

“ಸಭ್ಯರ ಊರಿಗೆ ಸಜ್ಜನ ನಾಯಕ’ ಘೋಷಣೆ

ಪಕ್ಷದ ಪತಾಕೆಗಳನ್ನು ಹಿಡಿದ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿ ಬಲ್ಲಾಳ್‌ಬಾಗ್‌ ಎದುರು ಜಮಾಯಿಸಿದರು. ಸಾವಿರಾರು ಜನ ಕಾರ್ಯಕರ್ತರು ಮತ್ತು ಅಭಿಮಾನಿಗಳು “ಸಭ್ಯರ ಊರಿಗೆ ಸಜ್ಜನ ನಾಯಕ’ ಎಂದು ಜೆ.ಆರ್‌ ಲೋಬೊ ಪರ ಘೋಷಣೆ ಕೂಗುತ್ತಾ ಬೃಹತ್‌ ಮೆರಣಿಗೆಯಲ್ಲಿ ಪಾಲ್ಗೊಂಡಿದ್ದರು. ನಾಮಪತ್ರ ಸಲ್ಲಿಸಿದ ನಂತರ ಲೋಬೋ ಅವರು, ಚಿಲಿಂಬಿಯ ಶಿರಡಿ ಸಾಯಿಬಾಬಾ ಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಅಭಿವೃದ್ಧಿಗೆ ವೇಗ- ನಿರುದ್ಯೋಗ ನಿವಾರಣೆಯೇ ಅಜೆಂಡಾ

ರಾಜ್ಯದ ಎರಡನೇ ದೊಡ್ಡ ನಗರವಾದ ಮಂಗಳೂರಿನ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವುದು ಹಾಗೂ ಇಲ್ಲಿನ ಯುವಜನತೆಯನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವುದೇ ನನ್ನ ಚುನಾವಣೆಯ ಪ್ರಮುಖ ಅಜೆಂಡಾ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜೆ.ಆರ್‌.ಲೋಬೋ ಹೇಳಿದರು.

ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾಮಪತ್ರ ಸಲ್ಲಿಕೆಗೆ ಆಗಮಿಸಿದ ಕಾರ್ಯಕರ್ತರು, ಅಭಿಮಾನಿಗಳ ಸಂಖ್ಯೆ ನೋಡಿ ತುಂಬಾ ಖುಷಿಯಾಗಿದೆ. ಮಾಜಿ ಶಾಸಕನಾಗಿ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳು ಇನ್ನೂ ಜನಮಾನಸದಲ್ಲಿದ್ದು ಆ ಕಾರಣದಿಂದ ನನ್ನನ್ನು ಗೆಲ್ಲಿಸುತ್ತಾರೆಂಬ ನಂಬಿಕೆ ಜನರು ಹಾಗೂ ಭಗವಂತನ ಮೇಲಿದೆ ಎಂದರು.

ಪಾದಯಾತ್ರೆಯಲ್ಲಿ ಕೆಪಿಸಿಸಿ ಪ್ರ.ಕಾರ್ಯದರ್ಶಿ ಐವನ್‌ ಡಿಸೋಜಾ, ಮನಪಾ ವಿಪಕ್ಷ ನಾಯಕ ನವೀನ್‌ ಡಿಸೋಜಾ, ಶಶಿಧರ್‌ ಹೆಗ್ಡೆ, ವಿಶ್ವಾಸ್‌ ದಾಸ್‌, ಅಬ್ದುಲ್‌ ಸಲಿಂ, ಪ್ರಕಾಶ್‌ ಸಾಲ್ಯಾನ್‌, ಪ್ರವೀಣ್‌ ಆಳ್ವ, ಕೇಶವ ಮರೋಲಿ, ಶಾಲೆಟ್‌ ಪಿಂಟೋ, ಸುರೇಶ ಬಲ್ಲಾಳ್‌, ಶಂಸುದ್ದೀನ್‌, ಅಬ್ದುಲ್‌ ರವೂಫ್‌, ಭಾಸ್ಕರ್‌ ಕೆ., ಜಾಸಿಂತ ಅಲ್ಫೆಡ್‌, ಬಾಲಕೃಷ್ಣ ಶೆಟ್ಟಿ, ನಾಗೇಂದ್ರ ಕುಮಾರ್‌, ದಿನೇಶ್‌ ಆಳ್ವ, ಟಿ. ಕೆ. ಸುಧೀರ್‌, ಮನೋರಾಜ್‌ ರಾಜೀವ, ಶುಭೋದಯ ಆಳ್ವ, ನಮಿತಾ ರಾವ್‌, ಮೋಹನ್‌ ಶೆಟ್ಟಿ, ಕರುಣಾಕರ ಶೆಟ್ಟಿ, ಗಣೇಶ್‌ ಪೂಜಾರಿ, ಶಾಂತಲಾ ಗಟ್ಟಿ, ಚಂದ್ರಕಲಾ ಜೋಗಿ, ವಾಹಾಬ್‌ ಕುದ್ರೋಳಿ, ತೇಜಸ್ವಿ ರಾಜ್‌, ಗಿರೀಶ್‌ ಶೆಟ್ಟಿ, ಸುನಿಲ್‌ ಪೂಜಾರಿ, ರಾಕೇಶ್‌ ದೇವಾಡಿಗ, ರಮಾನಂದ ಪೂಜಾರಿ, ಪದ್ಮನಾಭ ಅಮೀನ್‌, ಪ್ರೇಮ್‌ ನಾಥ್‌, ಸಂತೋಷ ಶೆಟ್ಟಿ, ಸದಾಶಿವ ಅಮೀನ್‌, ಹೊನ್ನಯ್ಯ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next