ಮಂಗಳೂರು: ವಿಧಾನ ಪರಿಷತ್ತಿನ ಸರಕಾರಿ ಭರವಸೆಗಳ ಸಮಿತಿ ಪದಾಧಿಕಾರಿಗಳು ಸೆ. 6ರಿಂದ 8ರ ವರೆಗೆ ದ.ಕ. ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಸಮಿತಿಯ ಅಧ್ಯಕ್ಷ ಬಿ.ಎಂ. ಫಾರೂಕ್, ಸದಸ್ಯರಾದ ಡಾ| ವೈ.ಎ. ನಾರಾಯಣ ಸ್ವಾಮಿ, ಪ್ರಕಾಶ್ ಕೆ. ರಾಥೋಡ್, ಡಾ| ತೇಜಸ್ವಿನಿ ಗೌಡ, ಪಿ.ಎಚ್. ಪೂಜಾರ್, ಎಸ್. ರುದ್ರೇಗೌಡ, ಯು.ಬಿ. ವೆಂಕಟೇಶ್, ಡಾ| ತಳವಾರ್ ಸಾಬಣ್ಣ ಹಾಗೂ ತಿಪ್ಪಣ್ಣಪ್ಪ ಅವರು ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ನಗರಾಭಿವೃದ್ಧಿ ಇಲಾಖೆಗಳಿಗೆ ಸಂಬಂಧಿಸಿದ ಬಾಕಿ ಭರವಸೆಗಳನ್ನು ಪರಿಶೀಲಿಸಲಿದ್ದಾರೆ.
ಸೆ. 6ರ ಬುಧವಾರ ಸಂಜೆ 5.30ಕ್ಕೆ ಮಂಗಳೂರಿಗೆ ಆಗಮಿಸಿ ಸಕೀìಟ್ ಹೌಸ್‌ನಲ್ಲಿ ವಾಸ್ತವ್ಯ ಮಾಡುವರು. ಸೆ. 7ರ ಬೆಳಗ್ಗೆ 10ಕ್ಕೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಸಂಬಂಧಿಸಿದ ಬಾಕಿ ಭರವಸೆ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಬಾಕಿ ಭರವಸೆ ಕುರಿತು ಇಲಾಖಾಧಿಕಾರಿಗಳೊಂದಿಗೆ ಎಂಆರ್‌ಪಿಎಲ್, ಎಂಎಸ್‌ಇಝಡ್, ಐಎಸ್‌ಪಿಆರ್‌ಎಲ್, ಎನ್‌ಎಂಪಿಟಿ ಹಾಗೂ ಓಡಿಸಿ ರಸ್ತೆ ಮತ್ತು ಪೈಪ್‌ಲೈನ್ ಕಾರಿಡಾರ್‌ಗಳಿಗೆ ಮತ್ತು ಸುರತ್ಕಲ್ ಹಾಗೂ ಉಳ್ಳಾಲ ವೆಟ್‌ವೆಲ್ ಗಳಿಗೆ ಹಾಗೂ ಉಳ್ಳಾಲ ಮೀನುಗಾರಿಕಾ ಘಟಕಗಳಿಗೆ ಭೇಟಿ ಮತ್ತು ಸ್ಥಳ ಪರಿಶೀಲನೆ ನಡೆಸುವರು.
ಸೆ. 8ರಂದು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಬಾಕಿ ಭರವಸೆ ಕುರಿತು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ನಗರಾಭಿವೃದ್ಧಿ, ಪರಿಸರ ಮಾಲಿನ್ಯ ಮಂಡಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಮತ್ತು ಅಗ್ನಿಶಾಮಕ ದಳ ಇಲಾಖಾಧಿಕಾರಿಗಳೊಂದಿಗೆ ಸುರತ್ಕಲ್ ಹಾಗೂ ಉಳ್ಳಾಲ ಮ್ಯಾನ್‌ಹೋಲ್ ಸಿವರ್ ಲೈನ್ ಮತ್ತು ಮಲಿನ ನೀರು ಶುದ್ಧೀಕರಣ ಘಟಕದ ಕುರಿತು ಚರ್ಚೆ ನಡೆಸುವರು. ಸಂಜೆ 5ಕ್ಕೆ ಬೆಂಗಳೂರಿಗೆ ತೆರಳುವರು ಎಂದು ಪ್ರಕಟನೆ ತಿಳಿಸಿದೆ.