Advertisement

Mangaluru ರಸ್ತೆ ಬಳಕೆ ವಿಚಾರವಾಗಿ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ

08:06 PM Dec 06, 2023 | Team Udayavani |

ಮಂಗಳೂರು: ರಸ್ತೆ ಬಳಸುವ ವಿಚಾರವಾಗಿ ನಡೆದ ಕೊಲೆ ಪ್ರಕರಣದ ಅಪರಾಧಿಗೆ ಮಂಗಳೂರಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

Advertisement

2020ರ ಫೆ. 9ರಂದು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಗಾಂಧಿನಗರ ಎಂಬಲ್ಲಿ ಘಟನೆ ನಡೆದಿತ್ತು. ಅಲ್ಲಿನ ನಿವಾಸಿ ಉಮೇಶ ಗೌಡ (58) ಕೊಲೆಯಾದವರು. ನೆರೆಮನೆಯ ಯೋಗೀಶ (55) ಶಿಕ್ಷೆಗೊಳಗಾದವನು.

ಮಣ್ಣುರಸ್ತೆಯ ವಿಚಾರ
ಯೋಗೀಶ ಮತ್ತು ಆತನ ಸಹೋದರಿಗೆ ಸೇರಿದ ಜಮೀನಿನಲ್ಲಿದ್ದ ಮಣ್ಣಿನ ರಸ್ತೆಯನ್ನು ನಾಗೇಶ ಮತ್ತು ಅವರ ಕುಟುಂಬದವರು ಅವರ ಮನೆಗೆ ಹೋಗಲು ಕಾಲುದಾರಿಯಾಗಿ ಬಳಸುತ್ತಿದ್ದರು. ಫೆ. 9ರಂದು ನಾಗೇಶ ಅವರ ತಾಯಿಯ ಶ್ರಾದ್ಧ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಾಗೇಶ ಅವರ ಸಹೋದರ ಉಮೇಶ ಅವರು ಪತ್ನಿಯೊಂದಿಗೆ ಹೋಗಿದ್ದರು. ಅವರ ಕುಟುಂಬದ ಇತರರು ಕೂಡ ಅದೇ ರಸ್ತೆಯಲ್ಲಿ ತೆರಳಿದ್ದರು. ಅಂದು ರಾತ್ರಿ 9.30ಕ್ಕೆ ಆರೋಪಿ ಯೋಗೀಶ ರಸ್ತೆಯನ್ನು ಬಂದ್‌ ಮಾಡುವ ಉದ್ದೇಶದಿಂದ ಹಾಲೋಬ್ಲಾಕ್‌ನ್ನು ಅಡ್ಡ ಇಟ್ಟಿದ್ದ. ಇದನ್ನು ತಿಳಿದ ನಾಗೇಶ, ಅವರ ಸಹೋದರ ಉಮೇಶ, ಅವರ ಪತ್ನಿ ಲೀಲಾವತಿ ಮತ್ತು ಸಹೋದರಿ ವನಜಾ ಅವರು ಆರೋಪಿ ಯೋಗೀಶನ ಬಳಿ ಹೋಗಿ ರಸ್ತೆ ತಡೆ ಮಾಡಿರುವುದನ್ನು ತೆರವುಗೊಳಿಸುವಂತೆ ಹೇಳಿದರು. ಆಗ ಯೋಗೀಶನ ಜತೆಗಿದ್ದ ಆತನ ಪುತ್ರ ಜೀವನ್‌ ಎಂಬಾತ ನಾಗೇಶ ಮತ್ತು ಅವರ ಕುಟುಂಬಸ್ಥರನ್ನು ಅವಾಚ್ಯ ಶಬ್ದದಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ಅಲ್ಲಿದ್ದ ಕಬ್ಬಿಣದ ಸರಳಿನಲ್ಲಿ ಹಲ್ಲೆಗೆ ಮುಂದಾಗಿದ್ದ. ಆಗ ನಾಗೇಶ ಮತ್ತು ಕುಟುಂಬಸ್ಥರು ಹಲ್ಲೆ ಆಗದಂತೆ ಪ್ರತಿರೋಧ ವ್ಯಕ್ತಪಡಿಸಿದ್ದರು.

ನಾಗೇಶ ಅವರ ಸಹೋದರಿ ಆರೋಪಿ ಯೋಗೀಶನ ಕೈಯಲ್ಲಿದ್ದ ಕಬ್ಬಿಣದ ಸರಳನ್ನು ಕಸಿದುಕೊಂಡರು. ಆಗ ಯೋಗೀಶ ಹತ್ತಿರದಲ್ಲಿದ್ದ ಶೆಡ್‌ಗೆ ತೆರಳಿ ಚೂರಿಯನ್ನು ತಂದು ನಾಗೇಶ ಅವರ ಸಹೋದರ ಉಮೇಶ ಅವರ ಎದೆಯ ಭಾಗಕ್ಕೆ ಚುಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದ. ಉಮೇಶ ಸ್ಥಳದಲ್ಲೇ ಕುಸಿದು ಬಿದ್ದಿದ್ದು ಅವರನ್ನು ಉಜಿರೆ ಆಸ್ಪತ್ರೆಗೆ, ಅನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿತ್ತು.ಆದರೆ ಚಿಕಿತ್ಸೆ ಫ‌ಲಕಾರಿಯಾಗದೆ ಅವರು ಮೃತಪಟ್ಟಿದ್ದರು.

ಬೆಳ್ತಂಗಡಿಯ ವೃತ್ತ ನಿರೀಕ್ಷಕರಾಗಿದ್ದ ಸಂದೇಶ್‌ ಪಿ.ಜಿ ಪ್ರಕರಣದ ತನಿಖೆ ನಡೆಸಿದ್ದರು. ಆರೋಪಿ ಯೋಗೀಶ ನ್ಯಾಯಾಂಗ ಬಂಧನದಲ್ಲಿದ್ದ. ಎರಡನೇ ಆರೋಪಿ ಜೀವನ್‌ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಯೋಗೀಶನ ಜಾಮೀನು ಅರ್ಜಿ ಎರಡು ಬಾರಿ ತಿರಸ್ಕೃತಗೊಂಡಿತ್ತು. ಹಾಗಾಗಿ ಕಳೆದ 3 ವರ್ಷ 9 ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿಯೇ ಇದ್ದ.

Advertisement

ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿ ಕೆ.ಪಿ. ಅವರು ಡಿ. 6ರಂದು ಆರೋಪಿ ಯೋಗೀಶನನ್ನು ತಪ್ಪಿತಸ್ಥನೆಂದು ತೀರ್ಮಾನಿಸಿ ತೀರ್ಪು ನೀಡಿದರು. 2ನೇ ಆರೋಪಿಯನ್ನು ಖುಲಾಸೆಗೊಳಿಸಿದ್ದಾರೆ. ಯೋಗೀಶನಿಗೆ ಜೀವಾವಧಿ ಶಿಕ್ಷೆ ಹಾಗೂ 3 ಲ.ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ವಸೂಲಾದ 3 ಲ.ರೂ. ದಂಡವನ್ನು ಉಮೇಶ ಅವರ ಪತ್ನಿ ಲೀಲಾವತಿ ಅವರಿಗೆ ಪರಿಹಾರ ರೂಪದಲ್ಲಿ ಸಂದಾಯ ಮಾಡಲು ಆದೇಶ ನೀಡಿದ್ದಾರೆ. ಅಲ್ಲದೆ ಅವರಿಗೆ ಆರ್ಥಿಕ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದಾರೆ.

ಸ್ಥಳ ಮಹಜರು ಮತ್ತು ಸೊತ್ತು ಮಹಜರು ಸಂದರ್ಭದಲ್ಲಿ ಪಿಡಿಒ ಮತ್ತು ಗ್ರಾಮ ಕರಣಿಕರು ಪಂಚಸಾಕ್ಷಿಯಾಗಿದ್ದರು. ಈ ರೀತಿ ಸರಕಾರಿ ನೌಕರರನ್ನು ಪಂಚ ಸಾಕ್ಷಿಯನ್ನಾಗಿ ಆಯ್ಕೆ ಮಾಡಿ ತನಿಖೆ ಮಾಡಿರುವುದು ಪ್ರಕರಣದ ತನಿಖೆಗೆ ಹೆಚ್ಚಿನ ಮೌಲ್ಯ ಕೊಟ್ಟಿದೆ. ಪಿಡಿಒ ನುಡಿದ ಸಾಕ್ಷ್ಯ ಕೂಡ ಪುಷ್ಠಿ ಕೊಟ್ಟಿದೆ. ಅಭಿಯೋಜನೆಯ ಪರ 16 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು ಎಂದು ಅಭಿಯೋಜನೆಯ ಪರವಾಗಿ ವಾದಿಸಿದ ವಿಶೇಷ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ಅವರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next