Advertisement

ಹೋರ್ಡಿಂಗ್ಸ್‌ ತೆರವುಗೊಳಿಸಿದ ಅಧಿಕಾರಿಯ ಎತ್ತಂಗಡಿ!

03:20 AM Aug 22, 2018 | Team Udayavani |

ಮಂಗಳೂರು: ಹೈಕೋರ್ಟ್‌ ನಿರ್ದೇಶನದಡಿ ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್‌ಗಳ ತೆರವು ಕಾರ್ಯಾಚರಣೆ ಕಟ್ಟುನಿಟ್ಟಾಗಿ ನಡೆಯುತ್ತಿರುವಾಗಲೇ ಮಂಗಳೂರಿನಲ್ಲಿ ಇಂಥದ್ದೇ ಒಳ್ಳೆ ಕೆಲಸ ಮಾಡಿದ್ದಕ್ಕೆ ಪಾಲಿಕೆ ಅಧಿಕಾರಿಯೊಬ್ಬರು ವರ್ಗಾವಣೆ ಶಿಕ್ಷೆ ಅನುಭವಿಸುವಂತಾಗಿದೆ. ಮಂಗಳೂರು ಮನಪಾದ ಕಂದಾಯ ಅಧಿಕಾರಿ ಪ್ರವೀಣ್‌ ಚಂದ್ರ ಕರ್ಕೇರ ಕಲುಬುರ್ಗಿ ಪಾಲಿಕೆಗೆ ಎತ್ತಂಗಡಿಯಾಗಿರುವವರು. ಈ ಮಧ್ಯೆ ಏಕಾಏಕಿ ವರ್ಗಾವಣೆ ವಿರೋಧಿಸಿ ಪಾಲಿಕೆಯ ಕೆಲವು ಅಧಿಕಾರಿಗಳು ಪ್ರತಿಭಟನೆಗೂ ಮುಂದಾಗಿದ್ದಾರೆ. ನಗರಾಭಿವೃದ್ಧಿ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಖಾದರ್‌ ತವರು ಜಿಲ್ಲೆಯಲ್ಲೇ ಈ ಪ್ರಕರಣ ನಡೆದದ್ದು ವಿಶೇಷವೆನಿಸಿದೆ. ಎತ್ತಂಗಡಿಯಾದ ಅಧಿಕಾರಿಯ ನಿವೃತ್ತಿಗೆ 3 ವರ್ಷವಿದ್ದು, ದೂರದ ಊರಿಗೆ ವರ್ಗಾವಣೆ ಟೀಕೆಗೆ ಗುರಿಯಾಗಿದೆ.

Advertisement

ದೂರುಗಳ ಮೇಲೆ ಕ್ರಮ
ನಗರದ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಕೆಲವರು ಅನಧಿಕೃತ ಹೋರ್ಡಿಂಗ್‌ ಅಳವಡಿಸಿ ಪಾಲಿಕೆ ಆದಾಯಕ್ಕೆ ಖೋತಾ ಮಾಡಿರುವ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಸುಮಾರು 45ಕ್ಕೂ ಹೆಚ್ಚು ಕಡೆ ಹೋರ್ಡಿಂಗ್‌ಗಳ ತೆರವಿಗೆ ಅಧಿಕಾರಿಗಳು ತೀರ್ಮಾನಿಸಿದ್ದರು.

ಆ.6ರಂದು ಏರ್‌ಪೋರ್ಟ್‌ ರಸ್ತೆಯಲ್ಲಿ ಕಾವೂರು ಜಂಕ್ಷನ್‌ನಿಂದ ಮರವೂರು ಸೇತುವೆ ತನಕ 15ಕಡೆ ಇದ್ದ ಹೋರ್ಡಿಂಗ್‌ಗಳನ್ನು ಪ್ರವೀಣ್‌ಚಂದ್ರ ತೆರವುಗೊಳಿಸಿದ್ದರು. ಆ ಪೈಕಿ ಹೆಚ್ಚಿನವು ರಾಜಕಾರಣಿಯೊಬ್ಬರ ಸಂಬಂಧಿಕರಿಗೆ ಸೇರಿದ್ದವು. ಕಾರ್ಯಾಚರಣೆ ವಿಸ್ತರಿಸುವಷ್ಟರಲ್ಲೇ ಆ.14ರಂದು ಅವರನ್ನು ಕಲುಬುರ್ಗಿಗೆ ವರ್ಗಾಯಿಸಲಾಗಿದೆ.

ರಜೆ ಮೇಲೆ ತೆರಳಿದ ಅಧಿಕಾರಿ
ಈ ವರ್ಗಾವಣೆಯಿಂದ ಬೇಸತ್ತು ರಜೆ ಮೇಲೆ ತೆರಳಿದ್ದಾರೆ ಎನ್ನಲಾಗಿದೆ. ಆದರೆ ಈ ರೀತಿಯ ವರ್ಗಾವಣೆ ಅವರಿಗೆ ಮೊದಲಲ್ಲ. 2014ರಲ್ಲಿ ಕಾರ್ಪೊರೇಟರ್‌ ಒಬ್ಬರಿಗೆ ಸೇರಿದ್ದ ಅನಧಿಕೃತ ಹೋರ್ಡಿಂಗ್‌ ತೆರವುಗೊಳಿಸಿದ್ದಕ್ಕೆ ಸಹಾಯಕ ಕಂದಾಯ ಅಧಿಕಾರಿಯಾಗಿದ್ದ ಅವರನ್ನು ಬೆಳಗಾವಿಗೆ ವರ್ಗಾಯಿಸಲಾಗಿತ್ತು. ಅದನ್ನು ಪ್ರಶ್ನಿಸಿ ಕೋರ್ಟ್‌ ಮೊರೆ ಹೋಗಿ, ಭಡ್ತಿ ಪಡೆದು ಮಂಗಳೂರಿಗೆ ವಾಪಸಾಗಿದ್ದರು.

ಕಂದಾಯ ಅಧಿಕಾರಿಯೇ ಇಲ್ಲ
ಪಾಲಿಕೆ ವ್ಯಾಪ್ತಿಯಲ್ಲಿ 3 ಕಂದಾಯ ವಲಯವಿದ್ದು, ಪ್ರವೀಣ್‌ಚಂದ್ರ ನಗರ ವಿಭಾಗದಲ್ಲಿದ್ದರು. ಇಲ್ಲಿಯ ಸಹಾಯಕ ಕಂದಾಯ ಅಧಿಕಾರಿಯನ್ನು ಸುರತ್ಕಲ್‌ ವಿಭಾಗದ 2 ಹುದ್ದೆಗಳ ಪೈಕಿ ಒಂದಕ್ಕೆ ಕಂದಾಯ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ಈಗ ಪ್ರವೀಣ್‌ಚಂದ್ರರ ವರ್ಗಾವಣೆಯಿಂದ ನಗರ ವಿಭಾಗದಲ್ಲಿ ಕಂದಾಯ ಅಧಿಕಾರಿ ಇಲ್ಲದಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next