ಮಂಗಳೂರು : ಆನ್ ಲೈನ್ ನಲ್ಲಿರುವ ಅನಧಿಕೃತ ಸಾಲದ ಅಪ್ಲಿಕೇಶನ್‌ಗಳಿಗೆ ಅನುಮತಿ ನೀಡುವಾಗ ಜನರು ಜಾಗರೂಕರಾಗಿರಬೇಕು, ತಮ್ಮ ಸಂಪರ್ಕಗಳು, ಫೋಟೋಗಳು ಇತ್ಯಾದಿಗಳನ್ನು ನೀಡುವ ವೇಳೆ ಎಚ್ಚರ ವಹಿಸಬೇಕು ಎಂದು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಬುಧವಾರ ಜನರನ್ನು ಒತ್ತಾಯಿಸಿದ್ದಾರೆ. .
ಸುರತ್ಕಲ್ ಠಾಣಾ ವ್ಯಾಪ್ತಿಯ ಕುಳಾಯಿಯಲ್ಲಿ ಆನ್ ಲೈನ್ ಸಾಲದ ಸುಳಿಗೆ ಸಿಲುಕಿ ಆರ್ಥಿಕ ಬಿಕ್ಕಟ್ಟಿನಿಂದ 26 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡ ನಂತರ ತನಿಖೆ ವೇಳೆ ಕಮಿಷನರ್ ಈ ಸಲಹೆ ನೀಡಿದ್ದಾರೆ. ಡೆತ್ ನೋಟ್ ನಲ್ಲಿ ಯುವಕ ಆನ್ ಲೈನ್ ಸಾಲದ ಬಗ್ಗೆ ಬರೆದಿದ್ದ.
ಸಾಲಕ್ಕೆ ಮೊದಲು ಸಣ್ಣ ಪ್ರಮಾಣದ ಸಾಲ ನೀಡಿ, 30 ರಿಂದ 60 % ಬಡ್ಡಿ ಹಾಕುತ್ತಾರೆ, ಈ ಆಪ್ ಚೀನಾದಲ್ಲಿ ಮೊದಲು ಪ್ರಾರಂಭವಾಗಿದ್ದು, ಆಪ್ ಇನ್ಸ್ಟಾಲ್ ಮಾಡುವಾಗ ಬೆತ್ತಲೆ ಫೋಟೋವನ್ನು ಪಡೆಯಲಾಗುತ್ತಿತ್ತು. ಸಾಲ ಕಟ್ಟಲು ವಿಫಲವಾದಾಗ ಫೋಟೋವನ್ನು ವೈರಲ್ ಮಾಡುವುದಾಗಿ ಹೆದರಿಸಲಾಗುತ್ತದೆ. ಸುಳ್ಳು ಕೇಸ್, ನಕಲಿ ಎಫ್ ಐಆರ್ ಪ್ರತಿ ಕಳುಹಿಸಿ ಬೆದರಿಸುವುದು, ವಂಚನೆ ಕೇಸ್ ಬುಕ್ ಮಾಡಿಸುವುದಾಗಿ ಹೆದರಿಸುವುದು ಸೇರಿದಂತೆ ಹಲವು ರೀತಿಯಲ್ಲಿ ಕಿರುಕುಳ ನೀಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ಲೇ ಸ್ಟೋರ್ ನಲ್ಲಿ ಆಪ್ ಇನ್ಸ್ಟಾಲ್ ಮಾಡುವ ವೇಳೆ ಅನೇಕ ಅನುಮತಿಗಳನ್ನು ಕೇಳುತ್ತಾರೆ. ಫೋಟೋ, ಕಾಂಟಾಕ್ಟ್, ಕ್ಯಾಮರಾ, ವಿಡಿಯೋ ಇತ್ಯಾದಿಗಳನ್ನು ಪಡೆಯುತ್ತಾರೆ. ಎಲ್ಲದಕ್ಕೂ ಯಸ್ ಎಂದು ನೀಡಿದಲ್ಲಿ ಸಮಸ್ಯೆಗೆ ಸಿಲುಕುವುದು ಖಚಿತ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಜಿಟಲ್ ಸಾಲ ನೀಡುವ ಅಪ್ಲಿಕೇಶನ್‌ಗಳು, ತ್ವರಿತ ಆನ್‌ಲೈನ್ ಸಾಲಗಳನ್ನು ಭರವಸೆ ನೀಡುತ್ತವೆ ಮತ್ತು ಅತಿಯಾದ ಬಡ್ಡಿ ದರವನ್ನು ವಿಧಿಸುತ್ತವೆ. ಸಾಲದ ಮೊತ್ತವನ್ನು ಮರುಪಾವತಿಸಲು ವಿಫಲವಾದಾಗ ಅವರು ಡೀಫಾಲ್ಟರ್‌ಗೆ ಬೆದರಿಕೆ ಕರೆಗಳು, ವಾಟ್ಸಾಪ್ ಸಂದೇಶಗಳು ಮತ್ತು ಅವನ ಸ್ನೇಹಿತರು ಮತ್ತು ಕುಟುಂಬಕ್ಕೆ ಕರೆಗಳ ರೂಪದಲ್ಲಿ ಆನ್‌ಲೈನ್ ಕಿರುಕುಳ ನೀಡುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವ 600ಕ್ಕೂ ಹೆಚ್ಚು ಸಾಲದ ಅಪ್ಲಿಕೇಶನ್‌ಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನೋಂದಾಯಿಸಲ್ಪಟ್ಟಿಲ್ಲ ಅಥವಾ ಗುರುತಿಸಲ್ಪಟ್ಟಿಲ್ಲ. ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.