Advertisement

Mangaluru: ಸಮುದ್ರದ ಮೀನುಗಳನ್ನೂ ಬಿಡದ ಪ್ಲಾಸ್ಟಿಕ್‌!

02:39 PM Oct 24, 2024 | Team Udayavani |

ಮಹಾನಗರ: ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ಸಿಎಂಎಫ್‌ಆರ್‌ಐ)ಯ 2022ರ ವಾರ್ಷಿಕ ವರದಿಯಲ್ಲಿ ಉಲ್ಲೇಖೀಸಿದಂತೆ, ಕೊಚ್ಚಿಯಲ್ಲಿ ಮುಂಗಾರು ಪೂರ್ವದಲ್ಲಿ ಸಮುದ್ರದ ತಳದಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಸಮುದ್ರದಲ್ಲಿ 30 ಮೀ. ಆಳದಲ್ಲಿ ಮೀನು ಹಿಡಿಯುವಾಗ ಶೇ.4.2ರಷ್ಟು ಪ್ಲಾಸ್ಟಿಕ್‌ ತ್ಯಾಜ್ಯಗಳು ಬಲೆಯಲ್ಲಿ ಸಿಗುತ್ತದೆ. 20 ಮೀ. ಆಳದಲ್ಲಿ ಶೇ.1.1ರಷ್ಟು ಪ್ಲಾಸ್ಟಿಕ್‌ ಬಲೆಗೆ ಬೀಳುತ್ತಿದೆ!

Advertisement

ಇದರ ಹಿನ್ನೆಲೆ ಏನು ಗೊತ್ತೇ? ಜನರೆಲ್ಲಾ ಎಸೆಯುವ ಪ್ಲಾಸ್ಟಿಕ್‌ ತ್ಯಾಜ್ಯಗಳು ಕರಗದೆ ಭರ್ಜರಿ ಮಳೆಗೆ ಕೊಚ್ಚಿಕೊಂಡು ಹೋಗಿ ಅಂತಿಮವಾಗಿ ಸೇರುವುದು ಸಮುದ್ರಕ್ಕೆ. ಅಷ್ಟೇ ಅಲ್ಲ ಸಮುದ್ರಯಾನಿಗಳು ಸಮುದ್ರ ಎಸೆಯುವ ತ್ಯಾಜ್ಯಗಳೂ ಅಲ್ಲೇ ಇರುತ್ತವೆ.

ಮಾನವನ ಈ ನಿರ್ಲಕ್ಷ್ಯದ ಪರಿಣಾಮ ಅನುಭವಿಸುವುದು ಮಾತ್ರ ಕಡಲಿನಲ್ಲಿ ಸ್ವತ್ಛಂದವಾಗಿ ವಿಹರಿಸುವ ಜಲಚರಗಳು.

ಕಡಲು ಸಾಧ್ಯವಾದಷ್ಟು ಮಟ್ಟಿಗೆ ಇಂತಹ ಪ್ಲಾಸ್ಟಿಕ್‌ ವಸ್ತುಗಳನ್ನು ದಡಕ್ಕೆ ಹಾಕುತ್ತದೆ. ಆದರೂ ಬಹಳಷ್ಟು ಪ್ರಮಾಣದ ಪ್ಲಾಸ್ಟಿಕ್‌ ವಸ್ತುಗಳು ನೀರಿನಡಿ ಹೋಗಿ ಅಲ್ಲಿಯೇ ಬಾಕಿಯಾಗುತ್ತದೆ. ಇವುಗಳೇ ಮುಂದಕ್ಕೆ ಜಲಚರಗಳಿಗೆ ಕಂಟಕವಾಗುತ್ತವೆ.

ನಮ್ಮ ಕರಾವಳಿಯಲ್ಲಿಯೂ ಮೀನುಗಾರರು ವಿವಿಧ ಮಾದರಿಯ ಬಲೆಗಳನ್ನು ಹಾಕಿ ಮೀನು ಹಿಡಿಯುವ ವೇಳೆ ಅದರಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಪ್ಲಾಸ್ಟಿಕ್‌ ವಸ್ತುಗಳು ಬಲೆಗೆ ಬೀಳುತ್ತದೆ ಎನ್ನುತ್ತಾರೆ ಮೀನುಗಾರರು.

Advertisement

ಇವುಗಳನ್ನು ಏನು ಮಾಡುವುದು ಎನ್ನುವ ಪ್ರಶ್ನೆಯೂ ಮೀನುಗಾರರಲ್ಲಿದೆ. ತೀರಕ್ಕೆ ತರುವುದು ಕೂಡಾ ಮೀನುಗಾರರಿಗೆ ಸವಾಲಾಗಿದೆ. ತೀರಕ್ಕೆ ತಂದರೆ ವಿಲೇವಾರಿ ಮಾಡುವ ವ್ಯವಸ್ಥೆಯೂ ನಮ್ಮಲ್ಲಿ ಇಲ್ಲ. ಆದ್ದರಿಂದ ಬಹುತೇಕ ಪ್ಲಾಸ್ಟಿಕ್‌ ವಸ್ತುಗಳು ಮತ್ತೆ ಸಮುದ್ರವನ್ನೇ ಸೇರುತ್ತವೆ. ಸರಕಾರಗಳು, ಸಂಬಂಧಪಟ್ಟ ಇಲಾಖೆಗಳು ಈ ನಿಟ್ಟಿನಲ್ಲಿ ಯೋಚನೆ ನಡೆಸಿ, ಇಂತಹ ತ್ಯಾಜ್ಯಗಳನ್ನು ಸಮುದ್ರಕ್ಕೆ ಮತ್ತೆ ಹಾಕುವ ಬದಲು ಅವುಗಳನ್ನು ದಡಕ್ಕೆ ತಂದು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು, ತ್ಯಾಜ್ಯಗಳಿಗೆ ಒಂದಷ್ಟು ದರವನ್ನೂ ನಿಗದಿ ಪಡಿಸುವುದರಿಂದ ಕಾರ್ಮಿಕರು ತ್ಯಾಜ್ಯದ ಬಗ್ಗೆಯೂ ನಿಗಾ ವಹಿಸುವ ಸಾಧ್ಯತೆಯಿದೆ.

ಮೈಕ್ರೋ ಪ್ಲಾಸ್ಟಿಕ್‌ ಮೀನಿಗೆ ಕಂಟಕ
ಸಮುದ್ರದಲ್ಲಿರುವ ಪ್ಲಾಸ್ಟಿಕ್‌ ವಸ್ತುಗಳು ನೀರಿನಲ್ಲಿ ಕರಗಿ ಮೈಕ್ರೋ (ಅತೀ ಸೂಕ್ಷ್ಮ) ಕಣಗಳಾಗಿ ನೀರಿನ ಮೂಲಕ ಸಣ್ಣ ಮೀನುಗಳ ಹೊಟ್ಟೆ ಸೇರುತ್ತವೆ. ಸದ್ಯ ಸಂಶೋಧನೆಯಲ್ಲಿ ಇವುಗಳು ಮೀನಿನ ಹೊಟ್ಟೆಯಲ್ಲಿ ಮಾತ್ರ ಕಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಜೀವಕೋಶಗಳಲ್ಲಿಯೂ ಇವುಗಳು ಸೇರಿಕೊಂಡರೆ ಮೀನುಗಳಿಗೆ ಮಾತ್ರವಲ್ಲದೆ ಮನುಷ್ಯರಿಗೂ ಅಪಾಯವಿದೆ ಎನ್ನುತ್ತಾರೆ ವಿಜ್ಞಾನಿಗಳು.

ಸಮುದ್ರಕ್ಕೆ ಪ್ಲಾಸ್ಟಿಕ್‌ ವಸ್ತುಗಳು ಸೇರ್ಪಡೆಯಾಗುವುದು ಜಾಗತಿಕ ಸಮಸ್ಯೆ. ಆದರೂ ಕೆಲವೊಂದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪ್ಲಾಸ್ಟಿಕ್‌ ವಸ್ತುಗಳು ಸಮುದ್ರಕ್ಕೆ ಸೇರದಂತೆ ತಡೆಯಲಾಗುತ್ತದೆ. ಸಮುದ್ರ ಸೇರಿದ ಪ್ಲಾಸ್ಟಿಕ್‌ ವಸ್ತುಗಳನ್ನು ಜಲಚರಗಳು ಆಹಾರ ಎಂದು ಭಾವಿಸಿ ತಿನ್ನುತ್ತವೆ. ಇದರಿಂದ ಅವು ಸಾವನ್ನಪ್ಪುವ ಸಾಧ್ಯತೆಯೂ ಇದೆ. ಪ್ಲಾಸ್ಟಿಕ್‌ ತ್ಯಾಜ್ಯವನ್ನು ಮೂಲದಲ್ಲೇ ಸೂಕ್ತ ರೀತಿಯಲ್ಲಿ ವಿಂಗಡಿಸಿ ವಿಲೇವಾರಿ ಮಾಡುವುದರಿಂದ ಮಾತ್ರ ಸಮುದ್ರ ಸೇರುವುದನ್ನು ತಡೆಯಬಹುದಾಗಿದೆ.
– ಡಾ| ಸಜಿತಾ ಥೋಮಸ್‌, ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥೆ, ಐಸಿಎಆರ್‌-ಸಿಎಂಎಫ್‌ಆರ್‌ಐ ಮಂಗಳೂರು

ಓದುಗರ ಅಭಿಪ್ರಾಯ

ಪ್ಲಾಸ್ಟಿಕ್‌ ಉತ್ಪಾದನೆ, ಬಳಕೆ ನಿಷೇಧಿಸಿ
ಎಲ್ಲ ಕಡೆ ಪ್ಲಾಸ್ಟಿಕ್‌ ಉತ್ಪಾದನೆ ನಿಲ್ಲಿಸಬೇಕು. ಅಂಗಡಿಗಳಲ್ಲಿ, ಹೊಟೇಲ್‌ಗ‌ಳಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧಿಸಬೇಕು. ಎಲ್ಲ ಕಂಪೆನಿಗಳಿಂದ ತಯಾರಾಗುವ ಉತ್ಪನ್ನಗಳು, ದಿನಬಳಕೆಯ ವಸ್ತುಗಳು, ಪಾತ್ರೆ ಇತ್ಯಾದಿಗಳಿಗೆ ಬಳಸುವ ಪ್ಲಾಸ್ಟಿಕ್‌ ನಿಲ್ಲಿಸಬೇಕು. ಪ್ಲಾಸ್ಟಿಕ್‌ ಬರುವ ಮುಂಚೆ ಕೂಡ ಜನ ಜೀವನ ನಡೆಯುತ್ತಿತ್ತು ಎಂಬುವುದನ್ನು ಸಮುದಾಯ ಅರ್ಥೈಸಿಕೊಳ್ಳಬೇಕು. ಪ್ಲಾಸ್ಟಿಕ್‌ ಮುಕ್ತ ಸಮಾಜ ನಿರ್ಮಾಣ ಬರೀ ಸಾಮಾನ್ಯ ನಾಗರಿಕರಿಂದ ಅಸಾಧ್ಯ. ಅಧಿಕಾರದಲ್ಲಿರುವವರು, ಕಂಪೆನಿಗಳು ಕೂಡ ಕೈಜೋಡಿಸಬೇಕು. ಪ್ಲಾಸ್ಟಿಕ್‌ಗೆ ಬದಲಿ ವಸ್ತು ಬಳಕೆಗೆ ಕ್ರಮವಹಿಸಬೇಕು.
-ರಂಜಿತಾ ರಾವ್‌, ಮಂಗಳೂರು

ಮೀನುಗಾರಿಕಾ ಬಲೆಗಳೂ ಅಪಾಯಕಾರಿ
ಉಪಯೋಗಿಸಲು ಸಾಧ್ಯವಿಲ್ಲದೆ ಸಮುದ್ರದಲ್ಲೇ ಎಸೆದ ಮೀನುಗಾರಿಕಾ ಬಲೆಗಳು ಕೂಡಜಲಚರಗಳಿಗೆ ಅಪಾಯಕಾರಿಯಾಗಿವೆ. ಆಮೆ, ಏಡಿ ಮೊದಲಾದವುಗಳು ಅವುಗಳಲ್ಲಿ ಸಿಲುಕಿ ಸಾವನ್ನಪ್ಪುತ್ತವೆ. ತುಂಡಾದ ಬಲೆಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ವ್ಯವಸ್ಥೆಯಾಗಬೇಕು. ಸಮುದ್ರದಲ್ಲಿ ಬಿಸಾಡುವ ಬದಲು ಅದನ್ನು ದಡಕ್ಕೆ ತಂದು ನೀಡಿದರೆ ಇಂತಿಷ್ಟು ಮೊತ್ತ ಎಂದು ನೀಡಿದರೆ ಅನುಕೂಲವಾದೀತು.

ದೊಡ್ಡ ಶಾರ್ಕ್‌ಗಳನ್ನೂ ಕೊಲ್ಲುತ್ತದೆೆ
ಸಣ್ಣ ಮೀನುಗಳನ್ನು ಆಹಾರವಾಗಿ ಸೇವಿಸುವ ದೊಡ್ಡ ಶಾರ್ಕ್‌ ಮೀನುಗಳು ಕೂಡಾ ಪ್ಲಾಸ್ಟಿಕ್‌ ದಾಳಿಗೆ ಒಳಗಾಗಿವೆ. ನೀರಿನೊಂದಿಗೆ ಪ್ಲಾಸ್ಟಿಕ್‌ ವಸ್ತುಗಳು ಕೂಡಾ ನೇರವಾಗಿ ಅವುಗಳ ಹೊಟ್ಟೆ ಸೇರುತ್ತವೆ. ಇವುಗಳು ಜೀರ್ಣವಾಗದೆ, ಕರುಳಿನಲ್ಲಿ ಶೇಖರಣೆಗೊಂಡು ಸಾವನ್ನಪ್ಪುವ ಸಾಧ್ಯತೆಯಿದೆ. ವೇಲ್‌ ಶಾರ್ಕ್‌ನಂತಹ ಅಳಿವಿನಂಚಿನಲ್ಲಿರುವ ಸಾಧು ಸ್ವಭಾವದ ಶಾರ್ಕ್‌ ಗಳೂ ಪ್ಲಾಸ್ಟಿಕ್‌ನ ಹೊಡೆತಕ್ಕೆ ಸಿಕ್ಕಿವೆ.

ಪ್ಲಾಸ್ಟಿಕ್‌ ನಿಯಂತ್ರಣ ನಿಮ್ಮ ತಂತ್ರ ಹಂಚಿಕೊಳ್ಳಿ
ಪ್ಲಾಸ್ಟಿಕ್‌ ನಿಯಂತ್ರಣದ ಬಗ್ಗೆ ಅನೇಕ ಸಂಘಟನೆಗಳು, ವಿದ್ಯಾಸಂಸ್ಥೆಗಳು ಧನಾತ್ಮಕ ಕಾರ್ಯತಂತ್ರ ರೂಪಿಸಿವೆ. ಅಂತಹ ಕಾರ್ಯಗಳಿದ್ದಲ್ಲಿ ಹಂಚಿಕೊಳ್ಳಬಹುದು.
ವಾಟ್ಸಪ್‌: 9900567000

ಬೀಚ್‌ ತ್ಯಾಜ್ಯದಲ್ಲಿ ಪ್ಲಾಸ್ಟಿಕೇ ಹೆಚ್ಚು
2023ರಲ್ಲಿ ಆಂಧ್ರ ಪ್ರದೇಶ, ಕರ್ನಾಟಕ, ಕೇರಳ ಮತ್ತು ಗೋವಾ ಬೀಚ್‌ಗಳಲ್ಲಿ ಕಂಡು ಬರುವ ತ್ಯಾಜ್ಯಗಳ ಬಗ್ಗೆ ರಾಷ್ಟ್ರ ಮಟ್ಟದ ಸರ್ವೇ ಕೈಗೊಳ್ಳಲಾಯಿತು. ಕರ್ನಾಟಕ ಮತ್ತು ಕೇರಳದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಹೆಚ್ಚಿರುವುದು ಕಂಡುಬಂದಿದೆ. ಕರ್ನಾಟಕದಲ್ಲಿ ಪ್ರತಿ ಚ.ಮೀ. 120 ಗ್ರಾಂ. ನಷ್ಟು ತ್ಯಾಜ್ಯ ಸಂಗ್ರಹವಾದರೆ ಕೇರಳದಲ್ಲಿ ಇದು 140 ಗ್ರಾಂ. ನಷ್ಟಿದೆ. ಬೀಚ್‌ನಲ್ಲಿ ಸಂಗ್ರಹವಾಗುವ ತ್ಯಾಜ್ಯದಲ್ಲಿ ಶೇ. 60ರಷ್ಟು ಪ್ಲಾಸ್ಟಿಕ್‌!

-ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next