Advertisement

Mangaluru: ಪ್ಲಾಸ್ಟಿಕ್‌ ಸದ್ಬಳಕೆಯಿಂದ ದುಡ್ಡೂ ಮಾಡಬಹುದು!

04:48 PM Oct 23, 2024 | Team Udayavani |

ಮಹಾನಗರ: ಪ್ಲಾಸ್ಟಿಕ್‌ನ ಅತಿಯಾದ ಬಳಕೆ ಒಂದು ಸಮಸ್ಯೆಯಾದರೆ, ಪ್ಲಾಸ್ಟಿಕ್‌ ಮತ್ತು ತ್ಯಾಜ್ಯವನ್ನು ಮಿಶ್ರಣ ಮಾಡುವುದು ಅತಿ ದೊಡ್ಡ ಸಮಸ್ಯೆ. ಈ ಸಮಸ್ಯೆ ಗ್ರಾಮಗಳಿಂದ ಹಿಡಿದು ನಗರದವರೆಗೆ ಎಲ್ಲ ಕಡೆಯೂ ಇದೆ. ಮಹಾನಗರಗಳಲ್ಲಂತೂ ತ್ಯಾಜ್ಯ ಪರ್ವತ ಸೃಷ್ಟಿಯಾಗಲು ಈ ಅವೈಜ್ಞಾನಿಕ ಮಿಶ್ರಣವೇ ಕಾರಣ. ಈಗ ನಗರಗಳಲ್ಲಿ ಮನೆ ಮನೆಗಳಿಂದ ಕಸ ಸಂಗ್ರಹಿಸುವ ವ್ಯವಸ್ಥೆ ಜಾರಿಯಲ್ಲಿದೆ. ಆದರೆ, ಹಸಿ ಕಸ ಮತ್ತು ಪ್ಲಾಸ್ಟಿಕ್‌ ಸಹಿತ ಒಣ ಕಸಗಳನ್ನು ಪ್ರತ್ಯೇಕಿಸದೆ ಮಿಶ್ರಣ ಮಾಡಿ ನೀಡುತ್ತಿರುವುದು ಸಮಸ್ಯೆಯ ಮೂಲಗಳಲ್ಲಿ ಒಂದು.

Advertisement

ಮನೆಯಲ್ಲಿರುವ ಹಸಿ ಮತ್ತು ಒಣ ಕಸಗಳನ್ನು ಪ್ರತ್ಯೇಕಿಸಿ ನೀಡಲು ಒಂದು ಪೈಸೆಯೂ ಖರ್ಚು ಮಾಡಬೇಕಾಗಿಲ್ಲ. ಅದಕ್ಕೆ ಸಮಯವೂ ಬೇಕಾಗಿಲ್ಲ. ನಿಜವೆಂದರೆ, ಹೀಗೆ ಪ್ರತ್ಯೇಕಿಸುವುದರಿಂದ ನಾವೇ ಹಣ ಸಂಪಾದನೆ ಮಾಡಬಹುದು!

ಎಲ್ಲರಿಗೂ ತಿಳಿದಿರುವ ಹಾಗೆ, ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಸಿ ಕಸ ಮತ್ತು ಒಣ ಕಸವಾಗಿ ಪ್ರತ್ಯೇಕಿಸಬೇಕು. ಮುಖ್ಯವಾಗಿ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್‌ನಲ್ಲಿ ತುಂಬಿಸಿ ಎಸೆಯಬಾರದು. ಹಸಿ ಕಸವನ್ನು ಸಾಧ್ಯವಿದ್ದವರು ಮನೆಯಲ್ಲೇ ಕಾಂಪೋಸ್ಟ್‌ ಮಾಡಬಹುದು. ಅಸಾಧ್ಯವಾದರೆ ಪಾಲಿಕೆಯ ಕಸ ಸಂಗ್ರಾಹಕರಿಗೆ ನೀಡಬಹುದು.

ನಾನಾ ರೂಪದಲ್ಲಿ ಮನೆಯಲ್ಲಿ ಪ್ಲಾಸ್ಟಿಕ್‌ ಕಸ ಸೇರುತ್ತದೆ. ಅದನ್ನು ಎಲ್ಲೆಲ್ಲೋ ಎಸೆಯದೆ ಒಂದು ಕಡೆ ಸಂಗ್ರಹವಾಗಿಟ್ಟರೆ ಅದರಿಂದಲೂ ಹಣ ಸಿಗುತ್ತದೆ. ಪ್ಲಾಸ್ಟಿಕ್‌, ಕಾಗದಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿಟ್ಟರೆ ಅವುಗಳನ್ನು ಮರುಬಳಕೆ ಮಾಡಲು ಅವಕಾಶವಿದೆ. ಜತೆಗೆ ಗುಜಿರಿ ವ್ಯಾಪಾರಿಗಳು ಕೂಡಾ ಅದನ್ನು ಹಣ ಕೊಟ್ಟು ಸಂಗ್ರಹಿಸುತ್ತಾರೆ. ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಕೆ.ಜಿಗೆ 8ರಿಂದ 12 ರೂ. ಸಿಗುತ್ತದೆ. ಪ್ರತಿ ನಿತ್ಯವೂ ಬಳಸುವ ಹಾಲಿನ ಪ್ಯಾಕೇಟ್‌ಗಳನ್ನು ನೀರು ಆರಿಸಿ ತೆಗೆದಿಟ್ಟರೆ ಅದರಿಂದಲೇ ವರ್ಷಕ್ಕೆ ಒಂದಿಷ್ಟು ಮೊತ್ತವನ್ನು ಸಂಪಾದಿಸಲು ಸಾಧ್ಯವಿದೆ.

ಹೀಗೆ ಪ್ರತ್ಯೇಕವಾಗಿ ಇಡುವುದರಿಂದ ಪ್ಲಾಸ್ಟಿಕ್‌ ಮರು ಬಳಕೆಯ ಜತೆ ನಿರ್ವಹಣೆ ಮಾಡಿದಂತೆಯೂ ಆಗುತ್ತದೆ.

Advertisement

ಮನೆಯಲ್ಲಿ ಏನು ಮಾಡಬಹುದು?
ನಗರ ಪಾಲಿಕೆಯ ಈ ಹಿಂದಿನ ನಿರ್ದೇಶನದಂತೆ ಒಣಕಸ, ಹಸಿ ಕಸ ವಿಂಗಡಣೆ ಶೇ. 100ರಷ್ಟು ಜಾರಿಗೊಳಿಸಲು ಸಾರ್ವಜನಿಕರು ಸಹಕರಿಸಬೇಕು. ಪ್ರತೀ ಮನೆಯಲ್ಲೂ ಒಣ ಹಾಗೂ ಹಸಿ ಕಸಗಳಿಗೆ ಪ್ರತ್ಯೇಕ ಬುಟ್ಟಿಗಳನ್ನು ಇರಿಸಬೇಕು. ಹಸಿ ಕಸ ಸಾಧ್ಯವಿದ್ದರೆ ಕಾಂಪೋಸ್ಟ್‌ ಮಾಡಿ ಮನೆಯ ಕೈತೋಟಕ್ಕೆ ಬಳಸಬಹುದು. ಇಲ್ಲವೇ ನಿತ್ಯ ಬುಟ್ಟಿಯಿಂದಲೇ ನೇರವಾಗಿ ವಾಹನಗಳಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಹಸಿಕಸವನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿಸಬಾರದು.

ರಸ್ತೆ ಬದಿಯಲ್ಲಿ ಎಸೆಯಬೇಡಿ..
ಈಗ ಮಂಗಳೂರು ನಗರದಲ್ಲಿ ಪ್ರತೀ ಓಣಿಗೂ ಕಸದ ವಾಹನ ಬರುತ್ತದೆ. ಆದರೂ ಕೆಲವರು ಕಸವನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ಕಟ್ಟಿ ಎಸೆಯುತ್ತಾರೆ. ನಗರಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುವ ಮಂದಿಗೆ ಕಸದ ವಾಹನ ಬರುವ ಹೊತ್ತಿಗೆ ಕಸ ನೀಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಎಲ್ಲೆಂದೆರಲ್ಲಿ ಎಸೆಯುವ ಪ್ರವೃತ್ತಿ ಕಂಡುಬರುತ್ತಿದೆ. ಆದರೆ, ಹಾಗೆ ಮಾಡುವ ಬದಲು ಕಸವನ್ನು ಬಕೆಟ್‌ಗಳಲ್ಲಿ ತುಂಬಿಸಿ ವಾಹನ ಬರುವ ಜಾಗದಲ್ಲಿ ಇಟ್ಟರೆ ಬೀದಿ ಪಾಲಾಗುವುದನ್ನು ತಪ್ಪಿಸಬಹುದು. ಇದರಿಂದ ಪೌರ ಕಾರ್ಮಿಕರಿಗೂ ಅನುಕೂಲವಿದೆ.

ಸಾರ್ವಜನಿಕರ ಅಭಿಪ್ರಾಯ
ಶೂನ್ಯ ತ್ಯಾಜ್ಯ ಜೀವನಶೈಲಿ
ಏಕ ಬಳಕೆಯ ತ್ಯಾಜ್ಯದ ಉತ್ಪತ್ತಿ ಕಡಿಮೆಯಾಗಬೇಕೆಂದು ನಾನು ಶೂನ್ಯ ತ್ಯಾಜ್ಯ ಜೀವನ ಶೈಲಿ ಅಳವಡಿಸಿಕೊಂಡಿದ್ದೇನೆ. ಏಕ ಬಳಕೆ ಪ್ಲಾಸ್ಟಿಕ್‌ ಬಳಸುವುದಿಲ್ಲ. ಬಿಡುವಿನ ಸಮಯದಲ್ಲಿ ಇತರರಿಗೂ ಪ್ರೇರೇಪಣೆ ಮಾಡುತ್ತಾ ಅವರಲ್ಲಿಯೂ ಬದಲಾವಣೆ ತರುವ ಪ್ರಯತ್ನ ಮಾಡುತ್ತಿದ್ದೇನೆ. ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ.
-ಸಂಧ್ಯಾ ಮೂಡುಬಿದಿರೆ ಉಪನ್ಯಾಸಕಿ, ಜೈನ್‌ ಪಿಯು ಕಾಲೇಜು

ಮೀನಿಗೂ ಪ್ಲಾಸ್ಟಿಕ್‌ ಬಳಸುವುದಿಲ್ಲ
ಪರಿಸರದಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡುವುದೇ ಪ್ಲಾಸ್ಟಿಕ್‌ ನಿರ್ಮೂಲನೆಯ ಅತ್ಯಂತ ಬುದ್ಧಿವಂತಿಕೆಯ ಅಸ್ತ್ರ. ಪ್ರಾಯೋಗಿಕವಾಗಿ ಕಳೆದ ಹದಿನೈದು ವರ್ಷಗಳಿಂದ ನಾನು ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದೇನೆ. ಇತರರಿಗೂ ಈ ಬಗ್ಗೆ ತಿಳಿಸುತ್ತಿದ್ದೇನೆ. ನಮ್ಮ ಮನೆಗೆ ಎರಡು ದಿನಗಳಿಗೊಮ್ಮೆ ಮಾರ್ಕೆಟ್‌ನಿಂದ ಮೀನು ತರುತ್ತೇನೆ. ನಾನು ಇದಕ್ಕಾಗಿ ಅಗಲ ಬಾಯಿಯ ಒಂದು ಪ್ಲಾಸ್ಟಿಕ್‌ ಪೊಟ್ಟಣವನ್ನು ಮಾರುಕಟ್ಟೆಗೆ ಒಯ್ಯುತ್ತೇನೆ. ಕಳೆದ ಹದಿನೈದು ವರ್ಷಗಳಿಂದ ಅದನ್ನೇ ಬಳಸುತ್ತಿದ್ದೇನೆ. ಇನ್ನೂ ಅನೇಕ ವರ್ಷ ಅದನ್ನು ಬಳಸಬಹುದು. ಇದರ ಪ್ರಕಾರ ಕಳೆದ 15 ವರ್ಷಗಳಿಂದ 2,700 ಪ್ಲಾಸ್ಟಿಕ್‌ ಚೀಲಗಳು ಬಳಕೆ ನಿಯಂತ್ರಿಸಿದಂತಾಗಿದೆ. ಪ್ಲಾಸ್ಟಿಕ್‌ ನಿರ್ಮೂಲನೆಗೆ ಈ ಒಂದು ಕಾರ್ಯ ತುಂಬಾ ಸಹಕಾರಿಯಲ್ಲವೇ?
-ಶಶಿಕಲಾ ಟೀಚರ್‌ ಕುಂಬ್ಳೆ

ಬಲವಾದ ಕಾನೂನು ನಿರೂಪಿಸಲಿ
ಪ್ಲಾಸ್ಟಿಕ್‌ ಡ್ರಗ್ಸ್‌ಗಿಂತಲೂ ಅಪಾಯಕಾರಿ ಎನ್ನುವ ನಿಲುವಿನಲ್ಲಿ ಏಕಬಳಕೆ ಪ್ಲಾಸ್ಟಿಕ್‌ನ್ನು ನಿಯಂತ್ರಿಸಬೇಕು. ಇದಕ್ಕೆ ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿಗಳನ್ನು ನಿಯೋಜಿಸಬೇಕು. ಇಂಥ ಪ್ಲಾಸ್ಟಿಕ್‌ ಉತ್ಪಾದಿಸುವ ಘಟಕಗಳ ಮೇಲೆಯೇ ಮೊದಲು ನಿಯಂತ್ರಣ ಹೇರಬೇಕು. ಪ್ಲಾಸ್ಟಿಕ್‌ ಬದಲು ಮಣ್ಣಿನಲ್ಲಿ ಕರಗಬಲ್ಲ ವಸ್ತುಗಳನ್ನು ಪೊಟ್ಟಣವಾಗಿ ಬಳಸಲು ಪ್ರೋತ್ಸಾಹ ನೀಡಬೇಕು.
-ರಜನಿ ಮಂಗಳೂರು

-ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next