Advertisement

ರಂಗದಿಂದ ಇಳಿಸಿ ಅವಮಾನ ಮಾಡಿದರು; ಮುಂದಿನ ಕ್ರಮ ಪ್ರಕಟಿಸಿದ ಪಟ್ಲ ಸತೀಶ್ ಶೆಟ್ಟಿ

09:51 AM Nov 26, 2019 | Naveen |

ಮಂಗಳೂರು: ರಂಗಸ್ಥಳದಿಂದ ಕೆಳಗಿಳಿಸುವ ಮೂಲಕ ಸಾವಿರಾರು ಜನರ ಮುಂದೆ ನನ್ನನ್ನು ಅವಮಾನ ಮಾಡಲಾಗಿದೆ. ಹೀಗಾಗಿ ಮೇಳದ ಯಜಮಾನರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

Advertisement

ಸೋಮವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ನಾನು ಮೊದಲು ಕಲಾವಿದರ ಹಿತ್ತಾಸಕ್ತಿ ಕಾಯ್ದುಕೊಳ್ಳಲು ಶ್ರಮಿಸಿದ್ದು, ಮುಂದೆಯೂ ಕಲಾವಿದರ ಹಿತಾಸಕ್ತಿ ಕಾಯ್ದುಕೊಳ್ಳುವ ಹೋರಾಟದಲ್ಲಿ ಭಾಗಿಯಾಗುತ್ತೇನೆ ಎಂದರು.

ಕಟೀಲು ಮೇಳದಲ್ಲಿ ಪ್ರಸ್ತುತ ಮೇಳದ ಆಡಳಿತ ಮಂಡಳಿಯಿಂದ ಕಲಾವಿದರ ಮೇಲೆ ದೌರ್ಜನ್ಯ ಆಗುತ್ತಿರುವ ಹಿನ್ನಲೆಯಲ್ಲಿ ಮೇಳವನ್ನು ಮುಜರಾಯಿ ಇಲಾಖೆಗೆ ವಹಿಸಿಕೊಡಬೇಕು. ನಾನು ಇನ್ನು ಮುಂದೆಯೂ ಕಟೀಲು ದೇವಿಯ ಸೇವೆ ಮಾಡಲು ಸಿದ್ದನಿದ್ದೇನೆ. ಇತರ ಮೇಳಕ್ಕೆ ಹೋಗುವುದಿಲ್ಲ. ನನ್ನನ್ನು ರಂಗಸ್ಥಳದಿಂದ ಕೆಳಗಿಳಿಸಿರುವುದು ನ್ಯಾಯಾಲಯ ನೀಡಿದ ನಿರ್ದೇಶನದ ಉಲ್ಲಂಘನೆಯಾಗಿದ್ದು, ಬಗ್ಗೆ ನ್ಯಾಯಾಂಗ ನಿಂದನೆ ದೂರನ್ನು ದಾಖಲಿಸಲಾಗುವುದು ಎಂದರು.

ನಾನು ಕಟೀಲು ಮೇಳದ ಯಜಮಾನರು ನೀಡಿದ ನಿರ್ದೇಶನ, ಸೂಚನೆಯನ್ನು ಉಲ್ಲಂಘನೆ ಮಾಡಿಲ್ಲ. ನನಗೆ ಮೇಳದ ಭಾಗವತಿಕೆ ಮಾಡಬಾರದೆಂದು ನಾನು ರಂಗಸ್ಥಳಕ್ಕೆ ಬರುವವರೆಗೂ ನನಗೆ ಯಾರೂ ಸೂಚನೆ ನೀಡಿಲ್ಲ. ನನ್ನನ್ನು ರಂಗಸ್ಥಳದಿಂದ ಕೆಳಗಿಳಿಸಿರುವುದು ಪೂರ್ವ ನಿರ್ಧಾರಿತ ಹಾಗೂ ಷಡ್ಯಂತ್ರವಾಗಿದೆ ಆರೋಪಿಸಿದರು.

ಕಟೀಲು ಯಕ್ಷಗಾನದ ಈ ವರ್ಷದ ತಿರುಗಾಟದ ಮೊದಲ ದಿನದ ಸೇವೆಯಾಟದಲ್ಲಿ ಭಾಗವತಿಕೆ ಅಣಿಯಾಗುತ್ತಿದ್ದ ಪಟ್ಲ ಸತೀಶ್ ಶೆಟ್ಟಿಯವರನ್ನು ರಂಗಸ್ಥಳದಿಂದ ಕೆಳಗಿಳಿಯುವಂತೆ ಸೂಚಿಸಲಾಗಿತ್ತು. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಪಟ್ಲ ಸತೀಶ್ ಶೆಟ್ಟಿ ಅವರನ್ನು ಆಶಿಸ್ತು ಮತ್ತು ಮೇಳದ ಅವಹೇಳನದ ಕಾರಣದಿಂದ ಮೇಳದಿಂದ ಹೊರಗಿಡಲಾಗಿದೆ ಎಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next