ಮಂಗಳೂರು: ಕೇಂದ್ರ ಸಾರಿಗೆ ಇಲಾಖೆ ಆದೇಶದಂತೆ ರಾಜ್ಯದ ಸಾರಿಗೆ ಇಲಾಖೆಯು ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಸಾಧನ ಅಳವಡಿಸಲು ನೀಡಿರುವ ಆದೇಶ ಗೊಂದಲವಾಗಿದ್ದು, ಇದನ್ನು ಕೂಡಲೇ ರದ್ದುಗೊಳಿಸಬೇಕು ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಟ್ಯಾಕ್ಸಿ ಟ್ಯಾಕ್ಸಿಮೆನ್ಸ್ ಆ್ಯಂಡ್ ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ವತಿಯಿಂದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದ ಎಲ್ಲ ವಾಣಿಜ್ಯ ವಾಹನಗಳು ಹಾಗೂ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕ ಮಾಲಕರಿಗೆ ಇದು ಹೆಚ್ಚುವರಿ ಹೊರೆಯಾಗಿದ್ದು, ಇದರಿಂದ ರಾಜ್ಯದ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಸಂಕಷ್ಟದಲ್ಲಿದೆ. ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆದಾಗ ಸಾರಿಗೆ ಸಚಿವರು ತಾತ್ಕಾಲಿಕವಾಗಿ ಸ್ಪಂದಿಸಿ ಒಂದು ತಿಂಗಳವರೆಗೆ ಮುಂದೂಡಿ ಈಗ ಮತ್ತದೇ ಆದೇಶವನ್ನು ಜಾರಿಗೆ ತಂದಿದ್ದಾರೆ.
ಈ ಕಾರಣದಿಂದಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಳೆಯ ವಾಹನಗಳ ನವೀಕರಣ ಸಂದರ್ಭದಲ್ಲಿ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಟ್ಯಾಕ್ಸಿ ಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ರಘಪತಿ ಭಟ್ ಅವರ ನೇತೃತ್ವದಲ್ಲಿ ಹಾಗೂ ಇತರ ಜಿಲ್ಲೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಸಾರಿಗೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವರು, ಸಾರಿಗೆ ಆಯುಕ್ತರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು. ದ.ಕ. ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಆನಂದ ಕೆ. ಕರ್ನಾಟಕ ರಾಜ್ಯ ಟ್ರಾವೆಲ್ಸ್ ಓನರ್ ಅಸೋಸಿಯೇಶನ್ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ, ಬೆಂಗಳೂರು ಟ್ಯಾಕ್ಸಿಮೆನ್ಸ್ ಅಧ್ಯಕ್ಷ ಶಿವಣ್ಣ ಹಾಗೂ ರಾಜ್‌ಕುಮಾರ್, ಉಡುಪಿ ಜಿಲ್ಲಾ ಟ್ಯಾಕ್ಸಿ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ರಮೇಶ್ ಕೆ. ಕೋಟ್ಯಾನ್ ಹಾಗೂ ಇತರ ಪದಾಧಿಕಾರಿಗಳಾದ ಪ್ರಕಾಶ್ ಆಡಿಗ, ಕೃಷ್ಣ ಕೋಟ್ಯಾನ್, ಬಿ. ವಿಕ್ರಮ್ ರಾವ್ ಉಪಸ್ಥಿತರಿದ್ದರು.