Advertisement

Mangaluru: ಕಿರಿದಾಗುತ್ತಿದೆ‌ ಪಣಂಬೂರು ಬೀಚ್‌! ಇನ್ನೂ ಖಚಿತವಾಗದ ಕಾರಣ

01:28 AM Sep 18, 2024 | Team Udayavani |

ಮಂಗಳೂರು: ಪಣಂಬೂರು ಕಡಲತೀರ ಚಿಕ್ಕದಾಗುತ್ತಿದೆಯೇ? ಕೆಲವು ವರ್ಷಗಳಲ್ಲಿ ಪಣಂಬೂರು ಕಡಲತೀರದವರು ನೋಡುತ್ತಿರುವ ಪ್ರಕಾರ ಕಡಲ ಕಿನಾರೆ ಹಿಂದಿನಂತಿಲ್ಲ. ಹಿಂದೆ ಸಹಸ್ರಾರು ಮಂದಿ ಓಡಾಡಿಕೊಂಡಿದ್ದ ಬೀಚ್‌ನಲ್ಲಿ ಈಗ ನೂರು ಮಂದಿಗೂ ನಿಲ್ಲಲಾಗುತ್ತಿಲ್ಲ.

Advertisement

ಬಹುತೇಕ ಭೂಭಾಗವನ್ನು ಸಮುದ್ರ ಕಬಳಿಸಿಕೊಂಡಿದೆ. ಮಳೆಗಾಲದಲ್ಲಿ ಸಮುದ್ರ ಮಟ್ಟ ಮೇಲೆ ಬರುವುದು ಸಾಮಾನ್ಯವಾದರೂ ಆಗಸ್ಟ್‌ ವೇಳೆ ಮತ್ತೆ ಮಟ್ಟ ಕೆಳಗೆ ಹೋಗುತ್ತದೆ. ಆದರೆ 2-3 ವರ್ಷಗಳಿಂದ ಸೆಪ್ಟಂಬರ್‌ – ಅಕ್ಟೋಬರ್‌ನಲ್ಲೂ ನೀರಿನ ಮಟ್ಟ ಕೆಳಗಿಳಿಯುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.
ಹಿಂದೆ ಬೀಚ್‌ ಉತ್ಸವ, ಗಾಳಿಪಟ ಉತ್ಸವ ಸಹಿತ ಹಲವು ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿದ್ದ ಈ ಬೀಚ್‌ ರಾಜ್ಯದಲ್ಲೇ ಖ್ಯಾತಿ ಗಳಿಸಿತ್ತು. ಈಗ ಪ್ರವಾಸಿಗರು ಬಂದರೆ ಓಡಾಡುವುದಕ್ಕೆ ಕಷ್ಟವಾಗುತ್ತಿದೆ.

ಈಗ ಸುರಕ್ಷೆಯ ದೃಷ್ಟಿಯಿಂದ ಸಮುದ್ರ ತೀರದಲ್ಲಿ ಹಗ್ಗ ಕಟ್ಟಲಾಗಿದ್ದು, ಅದನ್ನು ದಾಟಿ ಮುಂದೆ ಹೋಗದಂತೆ ಎಚ್ಚರಿಕೆ ಫಲಕ ಹಾಕಲಾಗಿದೆ. ಹಾಗಾಗಿ ಪ್ರವಾಸಿಗರು ನಿರಾಟವಾಡುವುದೂ ಕಷ್ಟ, ಮರಳಿನಲ್ಲಿ ನಡೆದಾಡುವುದೂ ಕಷ್ಟ ಎಂಬಂತಾಗಿದೆ. ಸಾಮಾನ್ಯವಾಗಿ ಸಮತಟ್ಟಾಗಿರುವ ವಿಶಾಲ ಬೀಚ್‌ ಪಣಂಬೂರು. ಸದ್ಯ ಅಲೆಗಳ ಅಬ್ಬರದಿಂದ ಅಲ್ಲಲ್ಲಿ ನೀರು ಒಳಬರುತ್ತಿದೆ. ಅಲೆಗಳ ಅಬ್ಬರದಿಂ ದಾಗಿ ಬೀಚ್‌ ಏರುತಗ್ಗುಗಳಿಂದ ಕೂಡಿದೆ.

ಹಿಂದೆ ಹೀಗಿರಲಿಲ್ಲ. ಪ್ರವಾಸಿಗರು ರಸ್ತೆಯಲ್ಲಿ ಬಂದು ಬೀಚ್‌ ಸೇರುವ ಜಾಗವೇ ಅಗಲವಾಗಿತ್ತು. ಅಲ್ಲಿಂದ ಕಡಲ ಬದಿಯಲ್ಲೇ ನಡೆದು ಎಡಬದಿಯಲ್ಲಿರುವ ಬ್ರೇಕ್‌ವಾಟರ್‌ ವರೆಗೂ ಹೋಗಬಹುದಿತ್ತು. ಪಣಂಬೂರು ಕಡಲತೀರ ಅಭಿವೃದ್ಧಿಗೆ ಕದಳೀ ಟೂರಿಸಂ ಸಂಸ್ಥೆಗೆ ಗುತ್ತಿಗೆ ಕೊಡಲಾಗಿದ್ದು, ಅವರಿಗೆ 10 ಎಕ್ರೆ ಜಾಗ ಬಿಟ್ಟು ಕೊಡಲಾಯಿತ್ತು ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ. ಆದರೆ ಈಗ ಅಷ್ಟು ಜಾಗ ಕಾಣುತ್ತಿಲ್ಲ, ಎಲ್ಲವೂ ನೀರಿನೊಳಗೆ ಇದೆ ಎನ್ನುತ್ತಾರೆ ಗುತ್ತಿಗೆದಾರರು. ಈ ಬಾರಿಯ ಕರಾವಳಿ ಉತ್ಸವ ಸಂದರ್ಭದಲ್ಲಿ ಬೀಚ್‌ ಉತ್ಸವ ನಡೆಸಬೇಕಿದೆ. ಆದರೆ ಈಗಿನ ಸ್ಥಿತಿಯಲ್ಲಿ ಸಾಧ್ಯವೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಇನ್ನೆರಡು ತಿಂಗಳಲ್ಲಿ ಸಮುದ್ರ ಕೆಳಗೆ ಹೋಗುವುದೇ ಅನುಮಾನ ಎನ್ನಲಾಗುತ್ತಿದೆ.

Advertisement

ವಾಟರ್‌ಸ್ಪೋರ್ಟ್ಸ್ ಕೂಡ ಇಲ್ಲ
ಪಣಂಬೂರು ಬೀಚ್‌ನಲ್ಲಿ ವಾಟರ್‌ಸ್ಪೋರ್ಟ್ಸ್ ಜನಪ್ರಿಯಗೊಂಡಿತ್ತು. ಮಳೆಗಾಲದ ಕಾರಣದಿಂದ ಸದ್ಯ ಸ್ಥಗಿತಗೊಳಿಸಲಾಗಿದೆ. ಈಗ ಮತ್ತೆ ಆರಂಭಿಸಬೇಕಾದರೆ ಸ್ಥಳಾವಕಾಶ ಬೇಕಾಗುತ್ತದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ವಾಟರ್‌ನ್ಪೋರ್ಟ್ಸ್ ಆರಂಭಿಸಲಾಗುತ್ತಿಲ್ಲ.

ಕುಳಾಯಿ ಬ್ರೇಕ್‌ವಾಟರ್‌ ಕಾರಣ?
ಪಣಂಬೂರಿನಿಂದ ಎರಡು ಕಿ.ಮೀ. ಉತ್ತರಕ್ಕೆ ಕುಳಾಯಿಯಲ್ಲಿ ಮೀನುಗಾರಿಕೆ ಜೆಟ್ಟಿ ಹಾಗೂ ಅದರ ಪೂರಕ ಬ್ರೇಕ್‌ವಾಟರ್‌ ನಿರ್ಮಾಣ ನಡೆದಿದೆ. ಹಾಗಾಗಿಯೇ ಇಲ್ಲಿ ಸಮುದ್ರ ಒಳ ಬಂದಿರುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು. ಈ ಕುರಿತು ಕರ್ನಾಟಕದ ಕಡಲತೀರಗಳ ಶೋರ್‌ಲೈನ್‌ ಮ್ಯಾನೇಜ್‌ಮೆಂಟ್‌ ಪ್ಲಾನ್‌ ಅನ್ನು ಚೆನ್ನೈಯ ನ್ಯಾಷನಲ್‌ ಸೆಂಟರ್‌ ಫಾರ್‌ ಸಸ್ಟೆನೆಬಲ್‌ ಕೋಸ್ಟಲ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ ಸಿದ್ಧಪಡಿಸುತ್ತಿದೆ. ಅವರು ಪಣಂಬೂರು ಸಹಿತ ರಾಜ್ಯದ ಕಡಲತೀರದಲ್ಲಿ ಸಮುದ್ರದ ಚಲನೆ ಕುರಿತು ಅಧ್ಯಯನ ನಡೆಸಿದ್ದು, ಅದರಲ್ಲಿ ಕಳೆದ ಒಂದು ದಶಕದ ವಿವರಗಳು ಬರಲಿವೆ ಎಂದು ಬಂದರು ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

“ಬ್ರೇಕ್‌ವಾಟರ್‌ ಹಾಗೂ ಸಮುದ್ರದ ಅಲೆಗಳ ಚಲನೆ ಆಧರಿಸಿಕೊಂಡು ಸಮುದ್ರದಲ್ಲಿ ಒಂದೆಡೆ ಮರಳು ಶೇಖರಣೆಯಾದರೆ ಇನ್ನೊಂದೆಡೆ ಕಡಲ್ಕೊರೆತ ಉಂಟಾಗುವುದು ಇದೆ.” –ಪ್ರೊ| ಮನು, ಎನ್‌ಐಟಿಕೆ ಸುರತ್ಕಲ್‌ ಜಲಸಂಪನ್ಮೂಲ ಹಾಗೂ ಸಾಗರ ಎಂಜಿನಿಯರಿಂಗ್‌ ವಿಭಾಗದ ಉಪನ್ಯಾಸಕರು

– ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.