Advertisement

ಮಂಗಳೂರು: ಶಾರ್ಟ್‌ ಸರ್ಕ್ಯೂಟ್ ನಿಂದಾಗಿ ಕುಕ್ಕರ್‌ ಬಾಂಬ್‌ ಸ್ಫೋಟ?

10:00 AM Nov 23, 2022 | Team Udayavani |

ಮಂಗಳೂರು: ವೈದ್ಯರು ಆರೋಪಿ ಶಾರೀಕ್‌ ಆರೋಗ್ಯ ಸುಧಾರಣೆ ಬಗ್ಗೆ ದೃಢಪಡಿಸಿದ ಅನಂತರವಷ್ಟೇ ಆತನ ವಿಚಾರಣೆ ನಡೆಸಲಾಗುವುದು. ಆಟೋಚಾಲಕ ಪುರುಷೋತ್ತಮ ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ.

Advertisement

ಸ್ಫೋಟದಲ್ಲಿ ಗಾಯಗೊಂಡಿರುವ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಸರಕಾರದಿಂದ ಸೂಕ್ತ ಪರಿಹಾರ ಬಿಡುಗಡೆ ಮಾಡಲು ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ರವಿ ಕುಮಾರ್‌ ಎಂ.ಆರ್‌. ತಿಳಿಸಿದ್ದಾರೆ.

ಸ್ಫೋಟಕ ರಾಸಾಯನಿಕಗಳು, ಡಿಟೋ ನೇಟರ್‌ ಮೊದಲಾದವುಗಳನ್ನು ಹೊಂದಿದ್ದ ಕುಕ್ಕರ್‌ 3 ಲೀಟರ್‌ ಸಾಮರ್ಥ್ಯ ದ್ದಾಗಿತ್ತು. ಶಾರ್ಟ್‌ ಸರ್ಕ್ನೂಟ್‌ನಿಂದಾಗಿ ಆಟೋ ರಿಕ್ಷಾದಲ್ಲೇ ಆಕಸ್ಮಿಕವಾಗಿ ಸ್ಫೋಟ ಗೊಂಡಿದೆ. ಇದು ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಸ್ಫೋಟಗೊಂಡಿದ್ದರೆ ಭಾರೀ ಅನಾಹುತದ ಸಾಧ್ಯತೆ ಇತ್ತು ಎಂದು ವಿಧಿವಿಜ್ಞಾನ ಪ್ರಯೋಗಾಲಯದ ಪ್ರಾಥಮಿಕ ವರದಿಗಳು ತಿಳಿಸಿವೆ.

ಗುಪ್ತಚರ ದಳ, ಸಿಸಿ ಕೆಮರಾ ನಿರ್ಲಕ್ಷ್ಯ
ನಗರದ ಹಲವೆಡೆ ಸಿಸಿ ಕೆಮರಾಗಳನ್ನು ಅಳವಡಿಸಿದ್ದರೂ ಅವುಗಳಲ್ಲಿ ಬಹುತೇಕ ಕೆಟ್ಟು ಹೋಗಿವೆ. ಇನ್ನೊಂದೆಡೆ ಗುಪ್ತಚರ ಇಲಾಖೆ ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬಂದಿವೆ. ಈ ಹಿಂದೆ ನಗರದಲ್ಲಿ ಉಗ್ರರ ಪರ ಗೋಡೆ ಬರಹ ಪ್ರಕರಣಗಳು ನಡೆದಿದ್ದರೂ ಸಂಭಾವ್ಯ ಭಯೋತ್ಪಾದಕ ಕೃತ್ಯಗಳ ತಡೆಗೆ ವಿಶೇಷ ಪ್ರಯತ್ನಗಳು ನಡೆದಿರಲಿಲ್ಲ. ಈಗ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಆಲೋಕ್‌ ಕುಮಾರ್‌ ಅವರು ಸಿಸಿ ಕೆಮರಾಗಳ ಅಳವಡಿಕೆಗೆ ಒತ್ತು ನೀಡುವಂತೆ ಸ್ಥಳೀಯ ಪೊಲೀಸರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಎನ್‌ಐಎ ಘಟಕ ಸ್ಥಾಪನೆಗೆ ಹೆಚ್ಚಿದ ಒತ್ತಡ
ಮಂಗಳೂರಿನಲ್ಲಿ ಎನ್‌ಐಎ ಘಟಕ ಸ್ಥಾಪಿಸಬೇಕೆಂಬ ಬೇಡಿಕೆ ಹಲವು ವರ್ಷಗಳದ್ದು. ಈಗ ಕುಕ್ಕರ್‌ ಬಾಂಬ್‌ ಸ್ಫೋಟ ಘಟನೆಯ ಬಳಿಕ ಈ ಕುರಿತಾದ ಒತ್ತಾಯಗಳು ಮತ್ತೆ ಕೇಳಿಬಂದಿವೆ.

Advertisement

ಬ್ಯಾಂಕ್‌ ಖಾತೆ ಪರಿಶೀಲನೆ
ಘಟನೆ ನಡೆದ ದಿನ ನಕಲಿ ಆಧಾರ್‌ ಕಾರ್ಡ್‌, ನಕಲಿ ಸಿಮ್‌ ಕಾರ್ಡ್‌ ಬಳಸಿ ತಲೆಮರೆಸಿಕೊಂಡಿದ್ದ ಶಾರೀಕ್‌ ಬ್ಯಾಂಕ್‌ ಖಾತೆಗಳನ್ನು ಕೂಡ ಹೊಂದಿದ್ದು, ಈ ಖಾತೆಗಳ ಅಸಲಿತನದ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಆತನ ಮನೆಯವರು, ಸಂಬಂಧಿಕರು ಮತ್ತು ಇತರ ಕೆಲವು ಮಂದಿಯ ಬ್ಯಾಂಕ್‌ ಖಾತೆಗಳ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ.

ಸಂಶಯಕ್ಕೆ ಕಾರಣವಾದ ನಕಲಿ ಆಧಾರ್‌ ಕಾರ್ಡ್‌
ಸ್ಥಳದಲ್ಲಿ ಸಿಕ್ಕಿದ ಆಧಾರ್‌ ಕಾರ್ಡ್‌ ನಕಲಿ ಎಂಬುದು ಮನದಟ್ಟಾದಾಗ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಆರಂಭಿಸಿದರು. ಆತನ ಬಳಿ ಇದ್ದ ಮೊಬೈಲ್‌ನತ್ತ ಗಮನ ಕೇಂದ್ರೀಕರಿಸಿದರು. ಬಳಿಕ ಆತ ಶಾರೀಕ್‌ ಎಂಬ ಸಂದೇಹ ಬಲಗೊಂಡಿತು. ಆತನ ಕುಟುಂಬಸ್ಥರು ದೃಢಪಡಿಸಿದ ಬಳಿಕ ಪೊಲೀಸರು ಅಧಿಕೃತವಾಗಿ ಆತ ಶಾರೀಕ್‌ ಎಂಬ ಮಾಹಿತಿ ಬಹಿರಂಗಪಡಿಸಿದ್ದರು.

ಕೊಯಮತ್ತೂರು-ಮಂಗಳೂರು ಸ್ಫೋಟಕ್ಕೂ ಲಿಂಕ್‌?
ಕಳೆದ ತಿಂಗಳು ಕೊಯಮತ್ತೂರಿನಲ್ಲಿ ನಡೆದ ಸ್ಫೋಟಕ್ಕೂ ನಗರದ ನಾಗುರಿಯಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟಕ್ಕೂ ಸಂಬಂಧ ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇವರೆಡೂ ಸ್ಫೋಟಗಳು ಧಾರ್ಮಿಕ ಕ್ಷೇತ್ರಗಳ ಬಳಿಯೇ ನಡೆದಿರುವುದು ಗಮನಾರ್ಹ.

ಕಳೆದ ಅ. 23ರಂದು ಸಂಜೆ ಕೊಯಮತ್ತೂರಿನ ಕೊಟ್ಟಾಯಿ ಈಶ್ವರನ್‌ ದೇವಸ್ಥಾನ ದಾಟಿದ ಅನಂತರ ಕಾರಿನಲ್ಲಿ ಬಾಂಬ್‌ ಸ್ಫೋಟವಾಗಿತ್ತು. ಅದರಲ್ಲಿ ಓರ್ವ ಮೃತಪಟ್ಟಿದ್ದ. ನ. 19ರಂದು ನಾಗುರಿಯಲ್ಲಿ ಕಂಕನಾಡಿ ಗರೋಡಿ ಬ್ರಹ್ಮಬೈದರ್ಕಳ ಕ್ಷೇತ್ರ ದಾಟಿ ಕೂಡಲೇ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡಿದೆ. ಇದರಲ್ಲಿ ಚಾಲಕ ಪುರುಷೋತ್ತಮ ಮತ್ತು ಆರೋಪಿ ಶಾರೀಕ್‌ ಗಾಯಗೊಂಡಿದ್ದಾರೆ. ಉಗ್ರರು ಭಾರೀ ಅನಾಹುತ ನಡೆಸಲು ಉದ್ದೇಶಿಸಿದ್ದರೂ ಅದು ಸ್ವಲ್ಪದರಲ್ಲೇ ತಪ್ಪಿದೆ. ಅಧರ್ಮದ ವಿರುದ್ಧ ಹೋರಾಡಿದ ವೀರಪುರುಷರಾದ ಕೋಟಿ-ಚೆನ್ನಯರ ಕ್ಷೇತ್ರವಾದ ಗರೋಡಿ ದಾಟಿದ ಕೂಡಲೇ ಸ್ಫೋಟ ಸಂಭವಿಸಿದೆ. ಭಾರೀ ಅನಾಹುತ ತಪ್ಪಿ ಹೋಗಿದೆ. ಇದು ಕ್ಷೇತ್ರದ ಮಹಿಮೆ ಎನ್ನುತ್ತಿದ್ದಾರೆ ಕ್ಷೇತ್ರದ ಭಕ್ತರು.

ಇದನ್ನೂ ಓದಿ : ಈಶಾನ್ಯ ನೈಜೀರಿಯಾದಲ್ಲಿ 3 ಬಸ್ಸುಗಳ ನಡುವೆ ಭೀಕರ ಅಪಘಾತ: 37 ಮಂದಿ ಪ್ರಯಾಣಿಕರು ಸಾವು

Advertisement

Udayavani is now on Telegram. Click here to join our channel and stay updated with the latest news.

Next