Advertisement

ಕವಿ ಮುದ್ದಣನಿಗೆ ಕೇಂದ್ರ ಸರಕಾರದ ಗೌರವ: 150 ರೂ. ಮುಖಬೆಲೆಯ ನಾಣ್ಯ ಬಿಡುಗಡೆ

01:44 AM Jan 25, 2022 | Team Udayavani |

ಮಂಗಳೂರು: ಕವಿ ಮುದ್ದಣ ಅವರ ಗೌರವಾರ್ಥ ಭಾರತ ಸರಕಾರದ ವಿತ್ತ ಸಚಿವಾಲಯ ಹೊರತಂದಿರುವ 150 ರೂ. ಮುಖಬೆಲೆಯ ನಾಣ್ಯವನ್ನು ಭಾರತ ಸರಕಾರದ ಸಂಸದೀಯ ವ್ಯವಹಾರ ಹಾಗೂ ಸಂಸ್ಕೃತಿ ಖಾತೆ ರಾಜ್ಯ ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಸೋಮವಾರ ಹೊಸದಿಲ್ಲಿಯಲ್ಲಿ ವೆಬಿನಾರ್‌ ಮೂಲಕ ಬಿಡುಗಡೆಗೊಳಿಸಿದರು.

Advertisement

ದೇವರು ಕವಿಗಳನ್ನು ಸೃಷ್ಟಿಸುತ್ತಾರೆ. 30 ವರ್ಷದ ಅಲ್ಪಾವಧಿಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅಮರ ಕಾಣಿಕೆ ನೀಡಿದ ಕವಿ ಮುದ್ದಣ ಅವರ ನೆನಪಿನಲ್ಲಿ ನಾಣ್ಯವನ್ನು ಬಿಡುಗಡೆ ಮಾಡಿ ಭಾರತ ಸರಕಾರ ಅವರನ್ನು ಗೌರವಿಸಿದೆ ಎಂದರು.

ಕೋಲ್ಕತಾ ಟಂಕಸಾಲೆಯ ಮಹಾ ಪ್ರಬಂಧಕ ರಜತ್‌ ಪಾಲ್‌, ಹೆಚ್ಚುವರಿ ಮಹಾಪ್ರಬಂಧಕ ಗೋರಖ್‌ನಾಥ್‌ ಯಾದವ್‌, ಉದ್ಯಮಿ ಸುಧೀರ್‌ ಲೂನವತ್‌ ಬಿಕ್‌ನೇರ್‌ ಉಪಸ್ಥಿತರಿದ್ದರು. ಮುದ್ದಣ ಪ್ರಕಾಶನದ ಸ್ಥಾಪಕ ಗೌರವಾಧ್ಯಕ್ಷ ನಂದಳಿಕೆ ಬಾಲಚಂದ್ರ ರಾವ್‌, ಅಧ್ಯಕ್ಷೆ ಎನ್‌. ವಿಜಯಲಕ್ಷ್ಮೀ ಬಿ. ರಾವ್‌, ಸಂಚಾಲಕಿ ಎನ್‌. ಸೌಜನ್ಯ ಬಿ. ರಾವ್‌ ಭಾಗವಹಿಸಿದ್ದರು.

ಮಂಗಳೂರಿನಲ್ಲಿ ಬಿಡುಗಡೆ
ಮುದ್ದಣ ಅವರ ಗೌರವಾರ್ಥ ನಾಣ್ಯವನ್ನು ಮಂಗಳೂರಿನ ಸಕೀìಟ್‌ ಹೌಸ್‌ನಲ್ಲಿ ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಸ್ಥಳೀಯವಾಗಿ ಬಿಡುಗಡೆಗೊಳಿಸಿದರು. ಅವಿಭಜಿತ ದ.ಕ. ಜಿಲ್ಲೆಯ ಶ್ರೇಷ್ಠ ಕವಿಗಳ ಪರಂಪರೆಯಲ್ಲಿ ಮುದ್ದಣ ಅನನ್ಯ ಕೊಡುಗೆ ನೀಡಿದ್ದಾರೆ. ಅವರ ಹೆಸರಿನಲ್ಲಿ ಗೌರವ ನಾಣ್ಯ ತಂದಿರುವುದು ಉಭಯ ಜಿಲ್ಲೆಗೆ ಸಂದ ಗೌರವ. ಹಲವು ದಶಕಗಳಿಂದ ಕವಿ ಮುದ್ದಣ ಅವರ ಹೆಸರಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವ ನಂದಳಿಕೆ ಬಾಲಚಂದ್ರ ರಾವ್‌ ಹಾಗೂ ಅವರ ತಂಡವನ್ನು ಅಭಿನಂದಿಸುತ್ತೇನೆ ಎಂದರು.

ಕಾರ್ಪೊರೇಟರ್‌ಗಳಾದ ಸುಧೀರ್‌ ಶೆಟ್ಟಿ ಕಣ್ಣೂರು, ಮನೋಹರ ಶೆಟ್ಟಿ ಹಾಗೂ ಮುಖಂಡರಾದ ಜಗದೀಶ ಶೇಣವ, ವಿಜಯ ಕುಮಾರ್‌, ಮಾಧವ ಸುವರ್ಣ ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ:ರೀಬಾಕ್‌ನಿಂದ ಹೊಸ ಸ್ಮಾರ್ಟ್‌ವಾಚ್‌ ; “ರೀಬಾಕ್‌ ಆ್ಯಕ್ಟಿವ್‌ ಫಿಟ್‌ 1.0′ ಬಿಡುಗಡೆ

ಪ್ರಧಾನಿ ಮೋದಿ ಸಂದೇಶ
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಸಂದೇಶದ ಮೂಲಕ ಗೌರವ ಸಲ್ಲಿಸಿದ್ದಾರೆ. ಕವಿ ಮುದ್ದಣ ಅವರ 152ನೇ ಜಯಂತಿ ಸಂದರ್ಭ 150 ರೂ. ನಾಣ್ಯ ಬಿಡುಗಡೆಯ ಬಗ್ಗೆ ಕೇಳಿ ಸಂತೋಷವಾಯಿತು. ತಮ್ಮ ಸಂಕ್ಷಿಪ್ತ ಜೀವಿತಾವಧಿಯಲ್ಲಿ ಕವಿ ಮುದ್ದಣ ಭಾರತದ ಸಾಹಿತ್ಯ- ಸಾಂಸ್ಕೃತಿಕ ಪರಂಪರೆಯನ್ನು ಸಮೃದ್ಧಗೊಳಿಸಿದ್ದಾರೆ. “ಶ್ರೀ ರಾಮಾಶ್ವಮೇಧ’ “ಶ್ರೀ ರಾಮ ಪಟ್ಟಾಭಿಷೇಕಮ್‌’ ಮತ್ತು “ಅದ್ಭುತ ರಾಮಾಯಣ’ಗಳಂಥ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ಆಯಾಮ ತಂದುಕೊಟ್ಟಿವೆ ಎಂಬುದಾಗಿ ಮುದ್ದಣ ಪ್ರಕಾಶನದ ಸ್ಥಾಪಕ ಗೌರವಾಧ್ಯಕ್ಷ ನಂದಳಿಕೆ ಬಾಲಚಂದ್ರ ರಾವ್‌ ಅವರಿಗೆ ಕಳುಹಿಸಿರುವ ಸಂದೇಶದಲ್ಲಿ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next