Advertisement

ಮಂಗಳೂರು-ಮೂಡುಬಿದಿರೆ “ಕುಡಿಯುವ ನೀರಿನ ಯೋಜನೆಗೆ” ಬೇಕು ವೇಗ

03:17 PM Jan 29, 2024 | Team Udayavani |

ಮಹಾನಗರ: ಮಳೆ ಕೊರತೆ ಕಾರಣದಿಂದ ದ.ಕ. ಜಿಲ್ಲೆಯ ಮಂಗಳೂರು ಹಾಗೂ ಮೂಡುಬಿದಿರೆ ತಾಲೂಕು “ಬರಪೀಡಿತ’ ಎಂದು ಸರಕಾರ ಘೋಷಿಸಿದ್ದರೂ ಕುಡಿಯುವ ನೀರಿನ ಬಹುಮುಖ್ಯ ಯೋಜನೆಯಾದ “ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ ಮಾತ್ರ ಇಲ್ಲಿ ವೇಗ ಪಡೆಯುವಲ್ಲಿ ಹಿಂದೆ ಬಿದ್ದಿದೆ.

Advertisement

ಮತ್ತೊಂದೆಡೆ, ಜಲಜೀವನ್‌ ಮಿಷನ್‌ ಯೋಜನೆಯ ನೀರು ಸರಬರಾಜು ಯೋಜನೆಯೂ ಪೂರ್ಣ ಪ್ರಮಾಣದಲ್ಲಿ ಈ ವ್ಯಾಪ್ತಿಯಲ್ಲಿ ಅನುಷ್ಠಾನಕ್ಕೆ ಬಂದಿಲ್ಲ. ಮೂಡುಬಿದಿರೆ ಕುಡಿಯುವ ನೀರಿನ ಯೋಜನೆ ಮಂಗಳೂರು ಹಾಗೂ ಬಂಟ್ವಾಳ ತಾಲೂಕಿಗೆ ಸಂಬಂಧಿಸಿ ಮೂಡುಬಿದಿರೆ ಹಾಗೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಒಳಗೊಂಡ ಮೂಡುಬಿದಿರೆ
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಒಟ್ಟು 21 ಗ್ರಾಮ ಪಂಚಾಯತ್‌ ಹಾಗೂ 39 ಗ್ರಾಮಗಳನ್ನು ಒಳಗೊಂಡಿದೆ.

583 ಜನ ವಸತಿ ಪ್ರದೇಶ ಹಾಗೂ 1,54,033 ಜನರಿಗೆ ಈ ಯೋಜನೆಯಿಂದ ಲಾಭವಾಗಲಿದೆ. 183.16 ಕೋ.ರೂ ಅನುದಾನ ಮಂಜೂರಾಗಿದ್ದು, ಸದ್ಯ ಇಲಾಖೆಯ ಪ್ರಕಾರ ಶೇ.70ರಷ್ಟು ಕಾಮಗಾರಿ ಪ್ರಗತಿಯಲ್ಲಿದೆ. 2 ವರ್ಷದ ಹಿಂದೆ ಶುರುವಾದ ಈ ಯೋಜನೆ ಎಪ್ರಿಲ್‌ ವೇಳೆಗೆ ಪೂರ್ಣವಾಗಬೇಕಿದ್ದರೂ ಸದ್ಯಕ್ಕೆ ಪೂರ್ಣವಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಉಳಾಯಿಬೆಟ್ಟು-ಕುಡಿಯುವ ನೀರಿನ ಯೋಜನೆ ಮಂಗಳೂರು ಹಾಗೂ ಬಂಟ್ವಾಳ ತಾಲೂಕಿಗೆ ಸಂಬಂಧಿಸಿ ಬಂಟ್ವಾಳ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಒಳಗೊಂಡ ಉಳಾಯಿಬೆಟ್ಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆ 11
ಗ್ರಾ.ಪಂ. ಹಾಗೂ 15 ಗ್ರಾಮಗಳನ್ನು ಒಳಗೊಂಡಿದೆ. 132 ಜನವಸತಿ ಪ್ರದೇಶ ಹಾಗೂ 82,606 ಜನರಿಗೆ ಈ ಯೋಜನೆಯಿಂದ ಲಾಭವಾಗಲಿದೆ. 91.42 ಕೋ.ರೂ ಅನುದಾನ ಮಂಜೂರಾಗಿದ್ದು, ಶೇ.60ರಷ್ಟು ಪ್ರಗತಿಯನ್ನು ಇದು ಕಂಡಿದೆ.ಇದೂ ಕೂಡ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ.

ಈ ಮಧ್ಯೆ ಮಂಗಳೂರಿಗೆ ಹೊಂದಿ ಕೊಂಡಿರುವ ಉಳ್ಳಾಲ, ಕೋಟೆಕಾರ್‌ನ 26 ಗ್ರಾಮಗಳ 1.60 ಲಕ್ಷ ಜನರಿಗೆ ನೀರಿನ ಸಂಪರ್ಕ ನೀಡುವ ಬಹು ಮಹತ್ವದ ಯೋಜನೆಗೆ ಇತ್ತೀಚೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. 245 ಕೋ.ರೂ. ಇದಕ್ಕೆ ಅನುದಾನ ಮೀಸಲಿಡಲಾಗಿದೆ. ಇದು ಪೂರ್ಣವಾಗಲು ಇನ್ನೆಷ್ಟು ಸಮಯ ಬೇಕಾಗಬಹುದು ಎಂಬ ಪ್ರಶ್ನೆ ಎದುರಾಗಿದೆ.

Advertisement

ಸದ್ಯಕ್ಕಿರುವುದು 2 ಯೋಜನೆ
ಮಂಗಳೂರು ಹಾಗೂ ಮೂಡುಬಿದಿರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಈಗಾಗಲೇ ಅನುಷ್ಠಾನವಾಗಿದ್ದು, 583 ಜನವಸತಿ ಪ್ರದೇಶಗಳಿಗೆ ಮಳವೂರು ಡ್ಯಾಂನಿಂದ 13 ಎಂಎಲ್‌ಡಿ ನೀರು ಸರಬರಾಜಾಗುತ್ತಿದೆ. ಮತ್ತೊಂದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಯಡಿ 131 ಜನ ವಸತಿ ಪ್ರದೇಶಗಳಿಗೆ ತುಂಬೆ ವೆಂಟೆಡ್‌ ಡ್ಯಾಂನಿಂದ 6.34 ಎಂಎಲ್‌ಡಿ ನೀರು ಸರಬರಾಜಾಗುತ್ತಿದೆ.

ತುರ್ತಾಗಿ ಆಗಬೇಕಿತ್ತು!
ನಗರಕ್ಕೆ ಹೊಂದಿಕೊಂಡಿರುವ ನೇತ್ರಾವತಿ, ಫಲ್ಗುಣಿಯ ತೆಕ್ಕೆಯಲ್ಲಿರುವ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗಲೇ ಎದುರಾಗಿದೆ. ಅದರಲ್ಲಿಯೂ, ಈ ಬಾರಿ ಮಳೆ ಕೊರತೆ ಕಾರಣದಿಂದ ಮಂಗಳೂರು ಹಾಗೂ ಮೂಡುಬಿದಿರೆ
ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಸರಕಾರ ಪ್ರಕಟಿಸಿದೆ.

ಹೀಗಾಗಿ ನೀರಿನ ಹಾಹಾಕಾರ ಈ ಬಾರಿ ಎದುರಾಗುವ ಸಾಧ್ಯತೆ ಇದೆ. ಇಂತಹ ಕಾಲದಲ್ಲಿ ಕುಡಿಯುವ ನೀರಿನ ಯೋಜನೆಗಳು ಎಲ್ಲ ಕಾಮಗಾರಿಗಳಿಗಿಂತ ತುರ್ತಾಗಿ ನಡೆಯಬೇಕಿದೆ. ಅದು ಮೊದಲ ಆದ್ಯತೆಯಲ್ಲೇ ನಡೆಯಬೇಕಿದೆ. ಆದರೆ ಬಹುಗ್ರಾಮ
ಕುಡಿಯುವ ನೀರಿನ ಯೋಜನೆ ಮಾತ್ರ ಕುಂಟುತ್ತಾ ಸಾಗುತ್ತಿದೆ. ಅನುಷ್ಠಾನ ಹಂತದಲ್ಲಿ ಯಾವುದೇ ತೊಂದರೆ ಆಗದಂತೆ ನಿಗಾ ವಹಿಸಬೇಕಾದದ್ದು, ಜನಪ್ರತಿನಿಧಿಗಳ, ಅಧಿಕಾರಿಗಳ ಜವಾಬ್ದಾರಿ ಎಂಬುದು ಸಾರ್ವಜನಿಕರ ಅಭಿಪ್ರಾಯ.

ತುರ್ತಾಗಿ ಪೂರ್ಣಗೊಳಿಸಲು ಸೂಚನೆ
ಮೂಡುಬಿದಿರೆ ಹಾಗೂ ಉಳಾಯಿಬೆಟ್ಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಸಿವಿಲ್‌ ಕಾಮಗಾರಿ ಕೊಂಚ ಬಾಕಿ ಇದೆ. ಜತೆಗೆ ಪಂಪ್‌ ಸೆಟ್‌ಗಳ ಜೋಡಣೆ ಬಾಕಿ ಇದೆ. ಇದೆರಡನ್ನೂ ಆದ್ಯತೆಯ ನೆಲೆಯಲ್ಲಿ ತುರ್ತಾಗಿ ಪೂರ್ಣಗೊಳಿಸಿ
ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
*ಡಾ| ಆನಂದ್‌, ಸಿಇಒ, ದ.ಕ. ಜಿಲ್ಲಾ ಪಂಚಾಯತ್‌

ಶೀಘ್ರ ಪೂರ್ಣ
ಮೂಡುಬಿದಿರೆ ಹಾಗೂ ಉಳಾಯಿಬೆಟ್ಟು ಯೋಜನೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ವಿಶೇಷವಾಗಿ ಎರಡೂ ಕೇಂದ್ರಗಳಿಗೆ ಪಂಪ್‌ಗಳನ್ನು ಜೋಡಿಸುವ ಮುಖ್ಯ ಕಾರ್ಯ ಚಾಲ್ತಿಯಲ್ಲಿದೆ. ಇದು ಪೂರ್ಣವಾದ ಬಳಿಕ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು.
*ಎನ್‌.ಡಿ. ರಘುನಾಥ್‌,
ಕಾರ್ಯನಿರ್ವಾಹಕ ಎಂಜಿನಿಯರ್‌,
ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗ

*ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next