Advertisement
ಮಹಾನಗರ: ಸಾಮಾನ್ಯವಾಗಿ ನಗರದ ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ಹೆಚ್ಚು, ಅದರಲ್ಲೂ ಪೀಕ್ ಅವರ್‌ಗಳಲ್ಲಿ ವಾಹನ ಗಳುಸಾಲುಗಟ್ಟಲೆ ಬರುವಾಗ ಸಂಚಾರ ನಿಧಾನಗೊಳ್ಳುತ್ತದೆ, ಇದು ಹಾರ್ನ್ ಶಬ್ದವೂ ತಾರಕಕ್ಕೇರುವ ಸಮಯ. ಬೆಳಗ್ಗೆ-ಸಂಜೆಯ ಹೊತ್ತು ಅತೀ ಹೆಚ್ಚು ವಾಹನ ದಟ್ಟಣೆ ಇರುವಾಗಲಂತೂ ಹಾರ್ನ್ ಕಿರಿಕಿರಿ ಅಸಾಧ್ಯ. ಸಿಗ್ನಲ್‌ಗಳಲ್ಲಿ ಹಸುರು ದೀಪ ಬರಲು 10 ಸೆಕೆಂಡ್ ಬಾಕಿ ಇರುವಾಗಲೇ ಹಿಂದೆ ಇರುವ ವಾಹನಗಳ ಚಾಲಕ/ಸವಾರರು ಹಾರ್ನ್ ಹಾಕಲು ಶುರು ಮಾಡುತ್ತಾರೆ. ತಾಂತ್ರಿಕ
ಅಡಚಣೆಯಿಂದ ಯಾವುದಾದರೂ ವಾಹನ ಕೆಟ್ಟು ನಿಂತರಂತೂ ಮುಗಿಯಿತು. ಹಿಂದಿನ ವಾಹನ ಗಳ ಹಾರ್ನ್ ಶಬ್ಧಕ್ಕೆ ಕೆಟ್ಟು ನಿಂತ ವಾಹನದ ಚಾಲಕ ಹೈರಾಣಾಗಬೇಕು. ಸಮಸ್ಯೆಯಾಗಿದೆ, ಒಂದೆರಡು ಸೆಕೆಂಡ್ ಕಾಯುವ ಎನ್ನುವ ಪರಿಪಾಠವೇ ಚಾಲಕರು, ಸವಾರರಲ್ಲಿ ಇಲ್ಲ. ಹಾರ್ನ್ ಬಳಸಿದರೂ ಪ್ರಶ್ನಿಸುವವರೂ ಇಲ್ಲ!
ಅಂಬೇಡ್ಕರ್ ವೃತ್ತ (ಜ್ಯೋತಿ) ಮಂಗಳೂರಿನಲ್ಲಿ ಅತೀ ಹೆಚ್ಚು ವಾಹನ ಓಡಾಟದ ಜಂಕ್ಷನ್ ಆಗಿದ್ದು, ಇಲ್ಲಿ ಹಾರ್ನ್ ಶಬ್ದವೂ ಕಮ್ಮಿಯೇನಿಲ್ಲ. ಇಲ್ಲಿ ಮುಖ್ಯವಾಗಿ ಬಸ್‌ಗಳ ಹಾರ್ನ್ ಹೆಚ್ಚಾಗಿ ಕಿವಿಗೆ ಬಡಿಯುತ್ತಿದೆ. ಸಿಗ್ನಲ್ ವ್ಯವಸ್ಥೆ ಇಲ್ಲದ ಕಾರಣ ಪೊಲೀಸರೇ ಸಂಚಾರ ನಿಯಂತ್ರಣ ಮಾಡುತ್ತಾರೆ. ಒಂದು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆನೀಡಿದರೆ, ಹಿಂದುಗಡೆಯಿಂದ ಬರುವ ವಾಹನಗಳು ಹಾರ್ನ್ ಹಾಕುತ್ತಲೇ ನಿಲ್ಲುತ್ತವೆ.
Related Articles
ಸ್ಟೇಟ್‌ಬ್ಯಾಂಕ್ ಬಸ್‌ನಿಲ್ದಾಣದಿಂದ ಹೊರ ಬರುವ ವಾಹನಗಳು ಲೇಡಿಗೋಶನ್ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಪ್ರಯಾಣಿಕರನ್ನು ಹತ್ತಿಸಲು ಸಾಲಾಗಿ ನಿಲ್ಲುತ್ತವೆ. ರಸ್ತೆ ಅಗಲವಾಗಿದ್ದರೂ ಎರಡು ಸಾಲು ಬಸ್‌ಗಳೇ ಇಲ್ಲಿ ನಿಲ್ಲುವುದರಿಂದ, ಆಟೋ, ಕಾರು, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತದೆ. ಸಂಜೆ ವೇಳೆಯಂತೂ ಇಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ಹಾರ್ನ್ ಗಳ ಬಳಕೆ ಕೆಲವೊಮ್ಮೆ ಮಿತಿ ಮೀರುತ್ತದೆ. ಕ್ಲಾಕ್ ಟವರ್ – ಎ.ಬಿ. ಶೆಟ್ಟಿ ವೃತ್ತ, ಹ್ಯಾಮಿಲ್ಟನ್ ವೃತ್ತ
ರಸ್ತೆಯಲ್ಲೂ ಹಾರ್ನ್ ಬಳಕೆ ಅತಿಯಾಗಿದೆ.
Advertisement
ಪಿವಿಎಸ್ ಜಂಕ್ಷನ್ಪಿವಿಎಸ್ ವೃತ್ತದಲ್ಲಿಯೂ ಹಾರ್ನ್ ಹಾಕದೆ ವಾಹನಗಳು ಸಾಗುವುದೇ ಇಲ್ಲ ಎನ್ನಬಹುದು. ಬಸ್ ಸೇರಿದಂತೆ ಎಲ್ಲ ಮಾದರಿಯ ವಾಹನಗಳು ಎಂಜಿ ರಸ್ತೆಯಿಂದ ನವಭಾರತ ವೃತ್ತ – ಬಂಟ್ಸ್ ಹಾಸ್ಟೆಲ್ ಕಡೆಗೆ ಮತ್ತು ಬಂಟ್ಸ್‌ಹಾಸ್ಟಲ್- ನವಭಾರತ ವೃತ್ತದಿಂದ ಎಂಜಿ ರಸ್ತೆಯನ್ನು ಪ್ರವೇಶಿಸುವಾಗ ಹಾರ್ನ್ ಹಾಕಿಯೇ ಮುಂದುವರಿಯುತ್ತವೆ. ಟ್ರಾಫಿಕ್ ಹಸುರು ಬಣ್ಣ ಬಂದಾಗ ವಾಹನ ಚಲಾಯಿಸಲು ಒಂದೆರಡು ಸೆಕೆಂಡ್ ತಡವಾದರೂ ಸಾಕು ಹಿಂದಿನಿಂದ ಹಾರ್ನ್ ಶಬ್ದ ಕಿವಿಗೆ ಬಡಿಯುತ್ತದೆ. ಘನ ವಾಹನಗಳಿಂದ ಅಧಿಕ ತೀವ್ರತೆಯ ಹಾರ್ನ್ ಬಳಿಕೆಯೂ ಮಿತಿಮೀರಿದೆ. ಕಂಕನಾಡಿ ಜಂಕ್ಷನ್
ನಗರ ಪ್ರಮುಖ ಸ್ಥಳಗಳಲ್ಲಿ ಒಂದು ಕಂಕನಾಡಿ. ಬಸ್ ನಿಲ್ದಾಣವೂ ಇಲ್ಲಿರುವುದರಿಂದ ಕೆಲವು ಸಿಟಿ-ಸರ್ವಿಸ್ ಬಸ್‌ಗಳು ಇಲ್ಲಿಂದಲೇ ಪ್ರಯಾಣ ಆರಂಭಿಸುತ್ತವೆ. ಅತೀ ಹೆಚ್ಚು ವಾಹನ ದಟ್ಟಣೆ ಇರುವ ಪ್ರದೇಶವಾಗಿದ್ದು, ಕರಾವಳಿ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಕೂಡ ಇದೆ. ಇದರಿಂದಾಗಿ ದಟ್ಟಣೆ ಕಂಡುಬರುವುದರಿಂದ ಹಾರ್ನ್ ಬಳಕೆ ಅತಿಯಾಗಿದೆ. ಘನವಾಹನಗಳು ಮಾತ್ರವಲ್ಲದೆ, ದ್ವಿಚಕ್ರ, ಆಟೋಗಳು ಅಬ್ಬರದ ಹಾರ್ನ್ ಬಳಸುವುದು ಕಂಡು ಬಂದಿದೆ. ಬಿಜೈ-ಕೆಎಸ್‌ಆರ್‌ಟಿಸಿ
ಬಿಜೈ -ಕೆಎಸ್‌ಆರ್‌ಟಿಸಿ ಜಂಕ್ಷನ್ ದಟ್ಟಣೆ ಹೆಚ್ಚಿರುವ ನಗರದ ಇನ್ನೊಂದು ಜಂಕ್ಷನ್. ಕೆಎಸ್ ಆರ್‌ಟಿಸಿ ಬಸ್ ತಂಗುದಾಣ ಕಾವೂರು, ಕೆಪಿಟಿ ರಸ್ತೆ ಹಾಗೂ ಲಾಲ್‌ಬಾಗ್ ರಸ್ತೆ ಸಂದಿಸುವ ಸ್ಥಳ ವಾಗಿದ್ದು, ರಸ್ತೆಯೂ ಇಕ್ಕಟ್ಟಾಗಿರುವುದರಿಂದ ಇಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸುತ್ತವೆ. ಹಾರ್ನ್ ಬಳಕೆಗೆ ಯಾವುದೇ ನಿಯಂತ್ರಣ ಇಲ್ಲಿಲ್ಲ. ನಂತೂರು-ಕೆಪಿಟಿ ಜಂಕ್ಷನ್
ಹೆದ್ದಾರಿ ಹಾದು ಹೋಗುವ ನಂತೂರು ಮತ್ತು ಕೆಪಿಟಿ ಜಂಕ್ಷನ್‌ಗಳೂ ಅತೀ ಹೆಚ್ಚು ವಾಹನ ದಟ್ಟಣೆಯಿಂದ ಕೂಡಿರುವ ಪ್ರದೇವಾಗಿದ್ದು, ಕೆಪಿಟಿಯಲ್ಲಿ ಸಿಗ್ನಲ್ ವ್ಯವಸ್ಥೆಯಿದ್ದರೆ, ನಂತೂರಿನಲ್ಲಿ ಸಿಗ್ನಲ್ ಇಲ್ಲ. ಕೆಪಿಟಿ ರಸ್ತೆಯಲ್ಲಿ ಬೆಳಗ್ಗೆ ಸಂಜೆ ಹೊತ್ತು ವಾಹನಗಳು ಅಧಿಕ ಸಂಖ್ಯೆಯಲ್ಲಿ ಸಂಚರಿಸುವುದರಿಂದ ಧಾವಂತವೂ ಹೆಚ್ಚಿರುತ್ತದೆ. ಹಾರ್ನ್ ಹೊಡೆಯದೆ ವಾಹನಗಳು ಮುಂದಕ್ಕೆ ಸಾಗುವುದಿಲ್ಲ. ನಂತೂರಿನಲ್ಲಿ ಪೊಲೀಸರೇ ವಾಹನ ದಟ್ಟಣೆ ನಿಯಂತ್ರಿಸುತ್ತಿದ್ದು, ಹೆದ್ದಾರಿ ಯಲ್ಲಿ ಸಾಗುವ ವಾಹನಗಳು ತಡೆ ಬಿದ್ದಾಗ, ಘನವಾಹನ ಗಳಿಂದ ಬರುವ ಹಾರ್ನ್ ಶಬ್ದ ಕಿವಿಗೆ ಅಪ್ಪಳಿಸುತ್ತದೆ. ಉಳಿದಂತೆ ಲಾಲ್‌ಬಾಗ್, ಬಂಟ್ಸ್‌ಹಾಸ್ಟೆಲ್, ಬಲ್ಮಠ, ಬೆಂದೂರುವೆಲ್, ಫಳ್ನೀರ್ ರಸ್ತೆ, ಉರ್ವ ಸ್ಟೋರ್, ಚಿಲಿಂಬಿ ರಸ್ತೆ, ಬಂದರು, ಪಾಂಡೇಶ್ವರ, ಮಲ್ಲಿಕಟ್ಟೆ, ಕದ್ರಿರಸ್ತೆ, ಕೆ.ಎಸ್. ರಾವ್ ರಸ್ತೆ ಸಹಿತ ನಗರದ ಎಲ್ಲ ರಸ್ತೆಗಳಲ್ಲಿಯೂ ಹಾರ್ನ್ ಬಳಕೆ ಮಿತಿ ಮೀರಿದ್ದು, ನಿಯಂತ್ರಿಸುವವರು ಯಾರೂ ಇಲ್ಲ. *ಭರತ್ ಶೆಟ್ಟಿಗಾರ್