Advertisement

ಇಂದಿನಿಂದ 2 ದಿನಗಳ ಮಂಗಳೂರು ಲಿಟ್‌ ಫೆಸ್ಟ್‌

11:13 PM Feb 17, 2023 | Team Udayavani |

ಮಂಗಳೂರು: ಸಮಾಜದ ಹಲವು ಜ್ವಲಂತ ವಿಚಾರಗಳ ಬಗ್ಗೆ ಹೊಸ ಹೊಳಹು ಮೂಡಿಸುವ ಆಶಯದೊಂದಿಗೆ ಮಂಗಳೂರು ಲಿಟ್‌ಫೆಸ್ಟ್‌ನ 5ನೇ ಆವೃತ್ತಿ ಫೆ.18 ಮತ್ತು 19ರಂದು ನಡೆಯುತ್ತಿದೆ.

Advertisement

ಭಾರತ್‌ ಫೌಂಡೇಶನ್‌ ಹಮ್ಮಿಕೊಂಡಿರುವ ಲಿಟ್‌ ಫೆಸ್ಟ್‌ ನಗರದ ಟಿಎಂಎ ಪೈ ಸಭಾಭವನದಲ್ಲಿ “ದಿ ಐಡಿಯಾ ಆಫ್‌ ಭಾರತ್‌’ ಎಂಬ ಪರಿಕಲ್ಪನೆಯಡಿ ನಡೆಯಲಿದ್ದು 50ಕ್ಕೂ ಅಧಿಕ ವಿಷಯ ಪರಿಣಿತರು ಸಮಾಲೋಚನೆ ನಡೆಸಲಿದ್ದಾರೆ. ಒಟ್ಟು 25ರಷ್ಟು ಗೋಷ್ಠಿಗಳು ಎರಡು ಪ್ರತ್ಯೇಕ ಸಭಾಂಗಣದಲ್ಲಿ ನಡೆಯಲಿವೆ.

ಪ್ರತಿಬಾರಿಯೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಖ್ಯಾತಿಯ ಸಾಹಿತಿಗಳು, ಕಲಾವಿದರು, ಪತ್ರಕರ್ತರನ್ನು ಕರೆದು ಸಮಾಲೋಚನೆ ಆಯೋಜಿಸುವ ಮೂಲಕ ಅಲ್ಲದೆ ರಾಷ್ಟ್ರೀಯತೆಯ ಚೌಕಟ್ಟಿನಲ್ಲಿ ಇದೆಲ್ಲವನ್ನೂ ನಡೆಸುವ ಮೂಲಕ ಮಂಗಳೂರು ಲಿಟ್‌ಫೆಸ್ಟ್‌ ತನ್ನದೇ ಹೆಜ್ಜೆ ಗುರುತು ಮೂಡಿಸುತ್ತ ಬಂದಿದೆ.

ಈ ಬಾರಿ ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ, ಕಲಾವಿದರಾದ ಪ್ರಕಾಶ್‌ ಬೆಳವಾಡಿ, ಪತ್ರಕರ್ತೆ ಸ್ಮಿತಾ ಪ್ರಕಾಶ್‌, ಪತ್ರಕರ್ತ ಶಿವ್‌ ಆರೂರು, ಅಜಿತ್‌ ಹನುಮಕ್ಕನವರ್‌, ಆರೆಸ್ಸೆಸ್‌ ಧುರೀಣ ರಾಮ್‌ ಮಾಧವ್‌, ಸಾಹಿತಿ ಅಡ್ಡಂಡ ಕಾರ್ಯಪ್ಪ, ದಕ್ಕುಲ ಮುನಿಸ್ವಾಮಿ ಮತ್ತಿತರ ವಿಷಯ ಪರಿಣಿತರು ಇರುತ್ತಾರೆ. ಲಿಟ್‌ ಫೆಸ್ಟ್‌ನಲ್ಲಿ 2 ಸಿನಿಮಾಗಳ ಪ್ರದರ್ಶನ ಜರಗಲಿದೆ. ಅಲ್ಲದೆ ಪುಸ್ತಕ ಮಳಿಗೆಗಳು ಕೂಡ ಇರಲಿವೆ.

ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ತುಕಾರಾಮ್‌ ಪೂಜಾರಿ ಅವರಿಗೆ ಈ ಬಾರಿಯ ಪ್ರಶಸ್ತಿ ನೀಡಲಾಗುತ್ತಿದೆ. ಲಿಟ್‌ಫೆಸ್ಟ್‌ನಲ್ಲಿ ಪುಸ್ತಕ ಮಳಿಗೆ, ತುಳು ಅಕ್ಷರ ಕಲಿಕಾ ಕಾರ್ಯಾಗಾರ, ಮಕ್ಕಳ ಸಾಹಿತ್ಯ ಅಭಿರುಚಿ ಮತ್ತು ಕಥೆಯ ಬಗ್ಗೆ ಪಾಲಕರಿಗೆ ಆಸಕ್ತಿ ಬೆಳೆಸುವ ದೃಷ್ಟಿಯಿಂದ ಲೇಖಕರೊಂದಿಗೆ ಸಂವಾದ (ಹರಟೆ ಕಟ್ಟೆ) ಈ ಬಾರಿಯ ಲಿಟ್‌ ಫೆಸ್ಟ್‌ನ ವಿಶೇಷತೆ.

Advertisement

ಫೆ.18ರಂದು ಬೆಳಗ್ಗೆ 10ರಿಂದ “ಅಮೃತಕಾಲದಲ್ಲಿ ಭಾರತದ ಪರಿಕಲ್ಪನೆ, ಸರಿಯಾದ ಮಾರ್ಗವನ್ನು ಆರಿಸುವುದು’ ಎಂಬ ಪರಿಕಲ್ಪನೆಯೊಂದಿಗೆ ಉದ್ಘಾಟನ ಸಮಾರಂಭ ನಡೆಯಲಿದ್ದು ಹಿರಿಯ ಪತ್ರಕರ್ತ ಆರ್‌. ಜಗನ್ನಾಥನ್‌, ನಿಟ್ಟೆ ವಿ.ವಿ. ಕುಲಪತಿ ಎನ್‌.ವಿನಯ ಹೆಗ್ಡೆ, ವಿ. ನಾಗರಾಜ್‌ ಪಾಲ್ಗೊಳ್ಳುವರು.

ಹಿಂದುತ್ವ, ಧರ್ಮ ಮತ್ತು ಮುಂದಿನ ದಾರಿ ಎಂಬ ವಿಚಾರದ ಬಗ್ಗೆ ಆರ್‌.ಜಗನ್ನಾಥನ್‌ ಹಾಗೂ ಅರವಿಂದನ್‌ ನೀಲಕಂಠನ್‌, ಇತ್ತೀಚೆಗೆ ಭಾರತದ ರೈಲ್ವೇಯಲ್ಲಿ ಆಹಾರವನ್ನು ಹೊಗಳುವ ಮೂಲಕ ಸುದ್ದಿಯಾದ ಅಮೆರಿಕನ್‌ ಸಮಾಜಶಾಸ್ತ್ರಜ್ಞ ಸಾಲ್ವತೊರ್‌ ಬಬೊನ್ಸ್‌ ಅವರ ಭಾರತದಿಂದ ವಿಶ್ವಕ್ಕೆ: ಪ್ರಜಾಪ್ರಭುತ್ವ ಮತ್ತು ನೀತಿಯ ಬಗ್ಗೆ ಮಾತು, ಯಕ್ಷಗಾನದ ಬಗ್ಗೆ ಪಟ್ಲ ಸತೀಶ್‌ ಶೆಟ್ಟಿ, ಭಾರತೀಯ ಯೋಧರ ಬಗ್ಗೆ ಪತ್ರಕರ್ತ ಶಿವ್‌ ಆರೂರು, ಸಿನಿಮಾ ಮತ್ತು ಸಂಸ್ಕೃತಿ ಬಗ್ಗೆ ರಿಷಬ್‌ ಶೆಟ್ಟಿ, ಪ್ರಕಾಶ್‌ ಬೆಳವಾಡಿ, ಭಾರತದ ಬಗ್ಗೆ ಬದಲಾಗಬೇಕಿದೆ ವಿಶ್ವದ ಪರಿಕಲ್ಪನೆ ಎಂಬ ವಿಚಾರವಾಗಿ ರಾಮ್‌ ಮಾಧವ್‌ ಅವರ ಮಾತು ಪ್ರಮುಖ ಹೈಲೈಟ್ಸ್‌ ಆಗಿದ್ದರೆ, ಇನ್ನೂ ಹಲವು ವಿಚಾರ ಪ್ರಚೋದಕ ಗೋಷ್ಠಿಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next