Advertisement
ಉತ್ತರ ಪ್ರದೇಶ ಮೂಲದ ಚಂದನ್ ಕುಮಾರ್(30) ಮೃತಪಟ್ಟವರು. ಮತ್ತೂಬ್ಬ ಬಿಹಾರ ಮೂಲದ ರಾಜ್‌ಕುಮಾರ್ (18) ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Related Articles
Advertisement
ಮೊದಲ ರಕ್ಷಣೆಸುಮಾರು 2 ಗಂಟೆ ಕಾರ್ಯಾಚರಣೆ ನಡೆಸಿದ ರಕ್ಷಣ ಸಿಬಂದಿ 2.30ರ ಸುಮಾರಿಗೆ ಮಣ್ಣಿನಲ್ಲಿ ಸಿಲುಕಿದ್ದ ರಾಜ್ ಕುಮಾರ್ ಅವರನ್ನು ಎತ್ತಿ, ಆ್ಯಂಬುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ಕಳುಹಿಸಿದರು. ಈ ಹಂತದಲ್ಲಿ ಅವರಿಗೆ ಪ್ರಜ್ಞೆ ಇರಲಿಲ್ಲ. ಅನಂತರ ಆಸ್ಪತ್ರೆಯಲ್ಲಿ ಅವರು ಚೇತರಿಸಿ ಕೊಂಡರು. ರಾಜ್ ಕುಮಾರ್ ಅವರ ನ್ನು ರಕ್ಷಿಸುವವರೆಗೆ ಮಳೆಯೂ ಇರದ ಕಾರಣ ಕಾರ್ಯಾಚರಣೆ ಸುಗಮವಾಗಿತ್ತು. ಆ ಬಳಿಕ ಮಳೆಯೂ ಸುರಿಯಲಾರಂಭಿಸಿದ್ದು, ಕಾರ್ಯಾ ಚರಣೆಗೆ ಅಡಚಣೆಯಾಯಿತು. ಕ್ಲಿಷ್ಟಕರ ಕಾರ್ಯಾಚರಣೆ
ಸುಮಾರು 10ರಿಂದ 12 ಅಡಿ ಎತ್ತರ ರಿಟೇನಿಂಗ್ ವಾಲ್ ನಿರ್ಮಿಸಲಾಗಿತ್ತು. ಅಲ್ಲಿನ ಭೂಮಿಯ ಮಟ್ಟಕ್ಕೆ ತಲುಪಲು ಇನ್ನೂ ಸುಮಾರು 10 ಅಡಿಯಷ್ಟು ಮೇಲೇರಲಿತ್ತು. ಅಷ್ಟು ಎತ್ತರದಿಂದ ಕಾರ್ಮಿಕರ ಮೇಲೆ ಸುಮಾರು 10 ಅಡಿಯಷ್ಟು ಮಣ್ಣು ಬಿದ್ದಿತ್ತು. ಆರಂಭಿಕ ಹಂತದಲ್ಲಿ ರಿಟೇನಿಂಗ್ ವಾಲ್‌ನ ಇನ್ನೊಂದು ಬದಿಯಿಂದ ಡ್ರಿಲ್ಲಿಂಗ್ ಮೆಷಿನ್ ಮೂಲಕ ಕೋರ್ ಕಟ್ಟಿಂಗ್ ನಡೆಸಿ, ಕಾರ್ಮಿಕರಿಗೆ ಉಸಿ ರಾಟಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು. ಬಲವಾದ ರಾಡ್ ಹಾಗೂ ಕಾಂಕ್ರೀಟ್ ಇದ್ದ ಸುಮಾರು ಒಂದು ಅಡಿ ದಪ್ಪದ ವಾಲ್ ಕೊರೆಯುವುದೂ ಕ್ಲಿಷ್ಟಕರವಾಗಿತ್ತು. ಸುಮಾರು ಅರ್ಧ ಅಡಿ ವ್ಯಾಸದಲ್ಲಿ ಡ್ರಿಲ್ ಮಾಡಿ 2-3 ಕಡೆ ಕೊರೆದಾಗ ಒಳಗೆ ಕಾರ್ಮಿಕ ಚಂದನ್ ಇರುವುದು ಗೋಚರಿಸಿದ್ದು, ಆರೋಗ್ಯ ಇಲಾಖೆಯ ಸಿಬಂದಿ ಆಗಮಿಸಿ, ಡ್ರಿಪ್ಸ್ ನೀಡುವುದು ಸಹಿತ ಪ್ರಥಮ ಚಿಕಿತ್ಸೆಯನ್ನು ನೀಡಲು ಮುಂದಾದರು. ಆದರೆ ಆಗಲೇ ಕಾರ್ಮಿಕನ ಸ್ಥಿತಿ ಗಂಭೀರವಾಗಿತ್ತು. ಮಣ್ಣಿನಲ್ಲಿ ಆಳವಾಗಿ ಹುದುಗಿದ್ದ ಕಾರಣ ತೆರವು ಕ್ಲಿಷ್ಟಕರವಾಗಿ ಪರಿಣಮಿಸಿತು ಎಂದು ಕಾರ್ಯಾಚರಣೆ ನಡೆಸಿದ ಸಿಬಂದಿ ತಿಳಿಸಿದ್ದಾರೆ. ಬುಧವಾರ ಸುಮಾರು 60 ಕಾರ್ಮಿಕರು ಕಾಮಗಾರಿ ಪ್ರದೇಶದಲ್ಲಿದ್ದರೂ ಮಣ್ಣು ಕುಸಿತವಾದ ಸ್ಥಳದಲ್ಲಿ ಇಬ್ಬರು ಮಾತ್ರವೇ ಕೆಲಸ ನಿರತರಾಗಿದ್ದು, ಹೆಚ್ಚು ಮಂದಿ ಇದ್ದರೆ ಇನ್ನಷ್ಟು ದೊಡ್ಡ ದುರಂತ ಸಂಭವಿಸುತ್ತಿತ್ತು. ಸಂಚಾರಕ್ಕೆ ಅಡ್ಡಿ: ಮುಖ್ಯ ರಸ್ತೆ ಬದಿಯಲ್ಲೇ ಇರುವ ಪ್ರದೇಶವಾದ್ದರಿಂದ ಕಾರ್ಯಾಚರಣೆ ನೋಡಲು ಜನ ಬರುತ್ತಿದ್ದು ಸ್ಥಳದಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಕಾರ್ಯಾಚರಣೆ ವೇಳೆ ಬಲ್ಮಠ ರಸ್ತೆಯಲ್ಲಿ ರಕ್ಷಣ ವಾಹನಗಳು, ಆ್ಯಂಬುಲೆನ್ಸ್ ಗಳಿಗೆ ಸರಾಗವಾಗಿ ಸಂಚರಿಸುವಂತಾಗಲು ಬೆಂದೂರ್‌ವೆಲ್‌ನಿಂದ ಬಲ್ಮಠವರೆಗಿನ ರಸ್ತೆಯನ್ನು ಇತರ ವಾಹನಗಳಿಗೆ ಮುಚ್ಚಲಾಗಿತ್ತು. ಕೋರ್ ಕಟ್ಟಿಂಗ್ ಮೂಲಕ ನೆರವು
ಮೇಲ್ಭಾಗದಲ್ಲಿ ಮಣ್ಣಿನ ದೊಡ್ಡ ರಾಶಿಯೇ ಇದ್ದ ಕಾರಣ ರಕ್ಷಣ ಕಾರ್ಯದಲ್ಲಿ ತಳಭಾಗದಲ್ಲಿ ತಡೆಗೋಡೆಯ ಕೋರ್ ಕಟ್ಟಿಂಗ್ ಮಾಡುವ ಮೂಲಕವೇ ರಕ್ಷಣೆಗೆ ಆದ್ಯತೆ ನೀಡಿದರು. ಒಂದು ಬದಿಯಿಂದ ಮಣ್ಣಿನ ರಾಶಿಯನ್ನು ತೆರವು ಮಾಡುವ ಕೆಲಸವೂ ನಡೆಯಿತು. ಕೋರ್ ಕಟ್ಟಿಂಗ್ ನಿಂದಾಗಿ ಮಾಡಲಾದ ರಂಧ್ರದ ಮೂಲಕವೇ ಕಾರ್ಮಿಕರಿಗೆ ನೀರು ಕೊಡುವುದಕ್ಕೆ ವ್ಯವಸ್ಥೆ ಮಾಡಲಾಯಿತು. ಮೂರು ಅಡಿ ಸುತ್ತಲತೆಯ ರಂಧ್ರ ಮಾಡಿದರೂ ಕಾರ್ಮಿಕರು ತೀರಾ ಅಸ್ವಸ್ಥರಾಗಿದ್ದರಿಂದ ರಂಧ್ರದ ಮೂಲಕ ಅವರನ್ನು ಹೊರ ತರಲು ಸಾಧ್ಯವಾಗಲಿಲ್ಲ. ಮಣ್ಣು ತೆರವು ಮಾಡಿಯೇ ಹೊರತರಲಾಯಿತು. ಆಗಾಗ ಮಳೆ
ಮೊದಲ ಕಾರ್ಮಿಕನ ರಕ್ಷಣೆಯ ಬಳಿಕ ಮಳೆ ತೀವ್ರಗೊಂಡಿತು. ಮಳೆಯಿಂದಾಗಿ ಯೋಜನ ಸೈಟ್ ಸುತ್ತಲಿನ ಲಂಬವಾಗಿ ಕಡಿಯಲಾದ ಮಣ್ಣಿನ ಗೋಡೆ ಸಡಿಲವಾಗಿರುವುದು ರಕ್ಷಣ ಕಾರ್ಯಾಚರಣೆ ನಡೆಸುವವರಿಗೂ ಅಪಾಯ ತಂದೊಡ್ಡುವಂತಿತ್ತು. ಸ್ಥಳದಲ್ಲಿ ಜನದಟ್ಟಣೆ
ಘಟನಾ ಸ್ಥಳದಲ್ಲಿ ನೂರಾರು ಮಂದಿ ಸಾರ್ವಜನಿಕರು ಜಮಾಯಿಸಿದರು. ಅವರನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಯಿತು. ಕೆಲವು ಸಮಯದ ಅನಂತರ ಕಾರ್ಯಾಚರಣೆ ಹೊರಭಾಗಕ್ಕೆ ಕಾಣಿಸದಂತೆ ತಗಡು ಶೀಟ್, ಪ್ಲಾಸ್ಟಿಕ್ ಕವರ್‌ಗಳನ್ನು ಅಳವಡಿಸಲಾಯಿತು. ಮಳೆಯಲ್ಲೂ ಕಾರ್ಯಾಚರಣೆ
ಎನ್‌ಡಿಆರ್‌ಎಫ್ನ 35 ಮಂದಿ, ಎಸ್‌ಡಿಆರ್‌ಎಫ್, ಅಗ್ನಿಶಾಮಕ ಇಲಾಖೆ, ಪೊಲೀಸ್ ಸಹಿತ ವಿವಿಧ ರಕ್ಷಣ ತಂಡಗಳು ಆಗಾಗ್ಗೆ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಸತತ 7 ತಾಸು ಕಾರ್ಯಾಚರಣೆ ನಡೆಸಿದವು. ಮಳೆ ನೀರು ಬಿದ್ದು ಮತ್ತೆ ಕುಸಿತವಾಗುವುದನ್ನು ತಡೆಯಲು ಟಾರ್ಪಾಲು ಅಳವಡಿಸಲಾಯಿತು. ಅಡ್ಡಿಯಾದ ರಾಡ್
ರಾಜ್ ಕುಮಾರ್ ಸ್ವಲ್ಪ ಮೇಲ್ಭಾಗದಲ್ಲಿದ್ದರು. ಅವರನ್ನು ಸುಲಭವಾಗಿ ರಕ್ಷಿಸಿದ ಅನಂತರ ಚಂದನ್ ಕುಮಾರ್ ರಕ್ಷಣೆಗೆ ಕಾರ್ಯಾಚರಣೆ ತೀವ್ರಗೊಳಿಸಲಾಯಿತು. ಆದರೆ ರಿಟೈನಿಂಗ್ ವಾಲ್‌ನ ರಾಡ್‌ಗಳು ಅಡ್ಡಿಯಾದವು. ಅಲ್ಲದೆ ಆತನ ಬಳಿ ಫ್ಲೈವುಡ್ ಕೂಡ ಸಿಲುಕಿದ್ದರಿಂದ ತೊಡಕಾಯಿತು. ಅಕ್ಕಪಕ್ಕದಲ್ಲಿ ವಸತಿ ಸಂಕೀರ್ಣ
ನಿರ್ಮಾಣವಾಗುತ್ತಿರುವ ಕಟ್ಟಡದ ಸುತ್ತ ಮೂರು ಬಹುಮಹಡಿ ವಸತಿ ಸಂಕೀರ್ಣಗಳಿವೆ. ಮಣ್ಣು ಕುಸಿದಿರುವ ಕೆಲವೇ ಅಡಿ ದೂರದಲ್ಲಿ ಕಟ್ಟಡಗಳು ಇವೆ. ಏನಿದು ವಾಟರ್ ಪ್ರೂಫಿಂಗ್ ಕಾರ್ಯ?
ಬಿಹಾರ ಮತ್ತು ಉತ್ತರ ಪ್ರದೇಶ ಮೂಲದ ಸುಮಾರು 24 ಮಂದಿ ಕಾರ್ಮಿಕರ ತಂಡ ಕಳೆದ ಹಲವು ವರ್ಷಗಳಿಂದ ಮಂಗಳೂರು ನಗರದಲ್ಲಿ ಕಟ್ಟಡಗಳ ವಾಟರ್ ಪ್ರೂಫಿಂಗ್ ಕೆಲಸ ನಡೆಸುತ್ತಿದೆ. ರಾಜಕುಮಾರ್ ಮತ್ತು ಚಂದನ್ ಕೂಡ ಇದೇ ತಂಡದ ಸದಸ್ಯರು. ನಿರ್ಮಾಣ ಹಂತದ ರಿಟೆ„ನಿಂಗ್ ಹಾಲ್ ಸೇರಿದಂತೆ ಕಟ್ಟಡಗಳ ವಾಟರ್ ಪ್ರೂಫಿಂಗ್ ಕೆಲಸವನ್ನು ಇವರು ನಡೆಸುತ್ತಾರೆ. ಕಟ್ಟಡ/ಗೋಡೆಯೊಳಗೆ ನೀರು ಬಾರದಂತೆ ಹೊರ ಭಾಗಕ್ಕೆ ಕೆಮಿಕಲ್ ಸಹಿತವಾಗಿ ಪ್ರೂಫಿಂಗ್ ನಡೆಸಲಾಗುತ್ತದೆ. ಬುಧವಾರ ಮೊದಲ ಬಾರಿಗೆ ದುರಂತ ಸಂಭವಿಸಿದ ಕಟ್ಟಡದ ಕೆಲಸಕ್ಕೆ ಬಂದಿದ್ದರು. ಸತತ ಏಳು ತಾಸು ಕಾರ್ಯಾಚರಣೆ
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳಗಳು ಮಧ್ಯಾಹ್ನ 12.45ರ ಸುಮಾರಿನಿಂದ ರಾತ್ರಿ 7.30ರ ವರೆಗೆ ಸರಿಸುಮಾರು 7 ಗಂಟೆ ನಿರಂತರ ಕಾರ್ಯಾಚರಣೆ ನಡೆಸಿದವು. 2.30ರ ಸುಮಾರಿಗೆ ಓರ್ವ ಕಾರ್ಮಿಕ ರಾಜ್ ಕುಮಾರ್ ಅವರನ್ನು ಜೀವಂತವಾಗಿ ಹೊರ ತೆಗೆದು ಆಸ್ಪತ್ರೆಗೆ ಕಳುಹಿಸಿದಾಗ ಇನ್ನೋರ್ವ ಕಾರ್ಮಿಕ ಚಂದನ್ ಕೂಡ ಜೀವಂತವಾಗಿಯೇ ಹೊರಬರುತ್ತಾರೆ ಎಂಬ ವಿಶ್ವಾಸ ಮೂಡಿತ್ತು. ಆರಂಭದಲ್ಲೇ ಇಬ್ಬರ ಇರುವಿಕೆಯ ಸ್ಥಳವನ್ನೇ ಕೇಂದ್ರೀಕರಿಸಿ ಕಾರ್ಯಾಚರಣೆ ನಡೆಸಲಾಯಿತು. ಒಂದು ಹಂತದಲ್ಲಿ ಇಬ್ಬರು ಕೂಡ ಪ್ರಾಣಾಪಾಯದಲ್ಲಿ ಇಲ್ಲ ಎಂದು ಹೇಳಲಾಯಿತಾದರೂ ಕೆಲವು ಹೊತ್ತಿನ ಅನಂತರ ಚಂದನ್ ಅವರ ಸ್ಥಿತಿ ರಾಜ್ ಕುಮಾರ್ ಅವರಷ್ಟು ಕ್ರಿಯಾಶೀಲವಾಗಿಲ್ಲ ಎಂದು ತಿಳಿದುಬಂತು. ಡ್ರಿಪ್ಸ್ ನೀಡುವ ಪ್ರಯತ್ನವೂ ಸಫಲವಾಗಲಿಲ್ಲ. ದುರದೃಷ್ಟವಶಾತ್ ರಾತ್ರಿ 7.20 ಸುಮಾರಿಗೆ ಚಂದನ್ ಅವರ ಮೃತದೇಹವನ್ನು ಮಾತ್ರ ಹೊರ ತೆಗೆಯುವುದು ಸಾಧ್ಯವಾಯಿತು !. ಒಬ್ಬನ ಮೇಲೆ ಹೆಚ್ಚು ಮಣ್ಣು ಬಿದ್ದಿತ್ತು
ಕಾರ್ಮಿಕರಿಬ್ಬರು ವಾಟರ್ ಪ್ರೂಫಿಂಗ್ ಕೆಲಸದಲ್ಲಿದ್ದಾಗ ಅವರ ಮೇಲ್ಭಾಗದ ಹಲಗೆಯ ಮೇಲೆ ಮಣ್ಣು ಬಿದ್ದಿತ್ತು. ಮಣ್ಣಿನಡಿ ಸಿಲುಕಿದ್ದರೂ ಮಾತನಾಡುತ್ತಿದ್ದ ಓರ್ವನನ್ನು ಬೇಗ ರಕ್ಷಿಸಲಾಯಿತು. ಇನ್ನೊಬ್ಬ ಕಾರ್ಮಿಕರ ಮೇಲೆ ದೊಡ್ಡ ಪ್ರಮಾಣದ ಮಣ್ಣು ಬಿದ್ದಿದ್ದರಿಂದ ಕಾರ್ಯಾಚರಣೆಗೆ ಹೆಚ್ಚು ಸಮಯ ಬೇಕಾಯಿತು. ಮಣ್ಣು ಬಿದ್ದಿರುವಾಗಲೇ ಅವರಿಗೆ ಸಮಸ್ಯೆಯಾಗಿರುವ ಸಾಧ್ಯತೆಯಿದೆ.
-ಮುಲ್ಲೈ ಮುಗಿಲನ್,
ದ.ಕ. ಜಿಲ್ಲಾಧಿಕಾರಿ ಇದನ್ನೂ ಓದಿ: Traffic Jam: ದೇವರಕೊಲ್ಲಿ ಬಳಿ ಮರ ಬಿದ್ದು ಮೈಸೂರು – ಮಾಣಿ ರಾಷ್ಟ್ರೀಯ ಹೆದ್ದಾರಿ ಬಂದ್…