Advertisement

Mangaluru: ಕಿನ್ನಿಗೋಳಿಗೆ ಬೇಕು ಹೊರ ಠಾಣೆ

02:31 PM Sep 24, 2024 | Team Udayavani |

ಕಿನ್ನಿಗೋಳಿ: ಅತ್ಯಂತ ವೇಗವಾಗಿ ಬೆಳೆಯುತ್ತಿರುವ, ವಾಹನ ದಟ್ಟಣೆ, ಜನವಸತಿ ಹೆಚ್ಚುತ್ತಿರುವ ಮೂಲ್ಕಿ ತಾಲೂಕಿನ ಪ್ರಮುಖ ಪಟ್ಟಣವಾದ ಕಿನ್ನಿಗೋಳಿಯಲ್ಲಿ  ಸಾರ್ವಜನಿಕರ ಸುರಕ್ಷೆ ಮತ್ತು ನಿರ್ವಹಣೆ ದೃಷ್ಟಿಯಿಂದ ಕನಿಷ್ಠ ಪೊಲೀಸ್‌ ಹೊರಠಾಣೆಯಾದರೂ ಬೇಕು ಎಂಬ ಬೇಡಿಕೆ ಜೋರಾಗಿದೆ. ಈಗ ಏನೇ ನಡೆದರೂ 10 ಕಿ.ಮೀ. ದೂರದ ಮೂಲ್ಕಿಯಿಂದಲೇ ಪೊಲೀಸರು ಬರಬೇಕು. ವಾಹನ ದಟ್ಟಣೆ ನಿಯಂತ್ರಣ, ಅಪರಾಧಗಳ ಮೇಲೆ ನಿಗಾ ಇಡುವುದಕ್ಕಾಗಿ ಪ್ರತ್ಯೇಕ ವ್ಯವಸ್ಥೆಯೊಂದು ಬೇಕಾಗಿದೆ.

Advertisement

ಕಿನ್ನಿಗೋಳಿಯಲ್ಲಿ ಹೆಚ್ಚಿನ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾತೆಗಳು, ಸಹಕಾರಿ ಬ್ಯಾಂಕ್‌ಗಳು ಇವೆ. ಕೋಟ್ಯಂತರ ರೂ. ವ್ಯವಹಾರ ಈ ಪಟ್ಟಣದಲ್ಲಿ ನಡೆಯುತ್ತದೆ. ಪದವಿ ಕಾಲೇಜು ಸೇರಿದಂತೆ 6 ಶಿಕ್ಷಣ ಸಂಸ್ಥೆಗಳುವೆ. ಹತ್ತಿರದಲ್ಲಿಯೇ ಪ್ರಸಿದ್ಧ ಧಾರ್ಮಿಕ ಕೇಂದ್ರ ಕಟೀಲು ದೇಗುಲವಿದೆ. ಕಿನ್ನಿಗೋಳಿಯ ಪರಿಸರದಲ್ಲಿ ಹಲವಾರು ಅಪಾರ್ಟ್‌ಮೆಂಟ್‌ಗಳು, ವ್ಯವಸ್ಥಿತ ಬಡಾವಣೆಗಳು ಇವೆ. ಕಿನ್ನಿಗೋಳಿ ಬಸ್‌ ನಿಲ್ದಾಣದಲ್ಲಿ ದಿನನಿತ್ಯ ನೂರಾರೂ ಬಸ್‌ಗಳ ಓಡಾಟ ಇದೆ.  ಎಲ್ಲ ರೀತಿಯ ಸಾವಿರಾರು ವಾಹನಗಳು, ಅವುಗಳಿಗೆ ಸಂಬಂಧಿಸಿದ ಶೋರೂಮ್‌ಗಳು ಇಲ್ಲಿವೆ.

ಕಿನ್ನಿಗೋಳಿ ಪರಿಸರದಲ್ಲಿ ಹಿಂದೆ ಚಿನ್ನದ ಅಂಗಡಿ ಕಳವು, ಬ್ಯಾಂಕ್‌ ದರೋಡೆ ಪ್ರಕರಣಗಳು ಸಂಭವಿಸಿವೆ. ಇಲ್ಲಿ ಸಾಕಷ್ಟು ವಾಹನಗಳ ಓಡಾಟವಿದೆ. ಸಣ್ಣ ಪುಟ್ಟ ಅಪಘಾತ ಜಗಳ, ಕಳವು, ಅಪರಾಧ ಪ್ರಕರಣಗಳು ನಡೆಯುತ್ತಲೇ ಇರುತ್ತದೆ. ಆದರೆ, ಇವುಗಳ ಮೇಲೆ ನಿಗಾ ಇಡುವ ವ್ಯವಸ್ಥೆ ಇಲ್ಲಿಲ್ಲ. ಹೀಗಾಗಿ  ಹೊರ ಠಾಣೆಯ ಅಗತ್ಯತೆ ಬಗ್ಗೆ ಸಂಘ – ಸಂಸ್ಥೆಗಳು ಬಹು ಹಿಂದಿನಿಂದಲೇ ಮನವಿ ಮಾಡುತ್ತಾ ಬಂದಿವೆ. ಆದರೆ, ಯಾವುದೇ ಆಶಾದಾಯಕ ಬೆಳವಣಿಗೆಗಳು ನಡೆದಿಲ್ಲ.

ಸಿಸಿ ಕೆಮರಾ ವ್ಯವಸ್ಥೆಯು ಇಲ್ಲ
ಕಿನ್ನಿಗೋಳಿ ಬಸ್‌ನಿಲ್ದಾಣ ಜಂಕ್ಷನ್‌ನಲ್ಲಿ ಪೊಲೀಸ್‌ ಟ್ರಾಫಿಕ್‌ ಕಟ್ಟೆಗೆ ಟ್ರಾಫಿಕ್‌ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸಿಸಿ ಕೆಮರಾ ಆಳವಡಿಸಲಾಗಿತ್ತು. ಒಂದು ವರ್ಷದ ಬಳಿಕ ಅದು  ಸಿಡಿಲು ಬಡಿದು ಹಾಳಾಗಿದೆ. ಮತ್ತೆ ಅಳವಡಿಸಿಲ್ಲ. ಜಂಕ್ಷನ್‌ನಲ್ಲಿ ಎರಡು ತಿಂಗಳ ಹಿಂದೆ ಒಂದು ಅಪಘಾತ ಸಂಭವಿಸಿದಾಗ  ಪಕ್ಕದ ಬ್ಯಾಂಕ್‌ನ ಸಿಸಿ ಕೆಮರಾದ ಮೊರೆ ಹೋಗಬೇಕಾಯಿತು. ಮುಖ್ಯ ರಸ್ತೆಯ ಕಿನ್ನಿಗೋಳಿ ಜಂಕ್ಷನ್‌ನಲ್ಲಿ ಹೈಮಾಸ್ಟ್‌ ದೀಪದ ವ್ಯವಸ್ಥೆ ಬೇಕಾಗಿದೆ. ಚಿಕ್ಕ ಬೀದಿ ದೀಪ ಇದ್ದು ಇದು ಸಾಕಾಗುತ್ತಿಲ್ಲ. ಬಸ್‌ಗಾಗಿ ಕಾಯುವರು, ಇತರರು ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ.

Advertisement

ಹಿಂದಿನ ಚೌಕಿಯಲ್ಲೀಗ ಬ್ಯಾನರ್‌, ಬಂಟಿಂಗ್ಸ್‌!
ಈ ಹಿಂದೆ ಕಿನ್ನಿಗೋಳಿ ಬಸ್‌ ನಿಲ್ದಾಣದ ಕಟ್ಟಡದಲ್ಲಿ  ಒಂದು ಕೋಣೆ ಪೊಲೀಸ್‌ ಚೌಕಿಗಾಗಿ ಇತ್ತು. ಆದರೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣವಾದಾಗ ಅದು ಕಣ್ಮರೆಯಾಯಿತು.  ಕ್ರಮೇಣ ಮುಖ್ಯ ರಸ್ತೆಯಲ್ಲಿ ಪೊಲೀಸ್‌ ವ್ಯವಸ್ಥೆಗೆ ಕಬ್ಬಿಣದ ಗೂಡು ನಿರ್ಮಿಸಿ ಇಡಲಾಯಿತು. ಆದರೆ ಇಂದು ಅದು ಬ್ಯಾನರ್‌ ಬಂಟಿಂಗ್ಸ್‌ ಕಟ್ಟುವ ಜಾಗವಾಗಿದೆ!

ವಿ.ಎಸ್‌. ಆಚಾರ್ಯ ಅವರು ಗೃಹ ಸಚಿವರಾಗಿದ್ದು  ಕಿನ್ನಿಗೋಳಿಗೆ ಬಂದಿದ್ದಾಗ  ಪೊಲೀಸ್‌ ಹೊರಠಾಣೆಯ ಬಗ್ಗೆ ನಾಗರಿಕರು ಮನವಿ ಮಾಡಿದ್ದರು. ಕೂಡಲೇ ಮಂಜೂರು ಮಾಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಪ್ರಕ್ರಿಯೆ ಮುಂದುವರಿದಿಲ್ಲ. ಅನಂತರ ಪೊಲೀಸ್‌ ಕಮಿಷನರೆಟ್‌ ಆದ ಬಳಿಕ ಆಗಬೇಕಿತ್ತು, ಆಗಲೂ ಆದು ನೇರವೆರಲೇ ಇಲ್ಲ.

-ರಘುನಾಥ ಕಾಮತ್‌ ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next