ಉಳ್ಳಾಲ: ಕಳೆದ ಒಂದು ವಾರದಿಂದ ಕೇರಳ ಕರ್ನಾಟಕ ನಡುವೆ ವಾಹನ ಸ್ಥಗಿತ ಹಿನ್ನಲೆಯಲ್ಲಿ ಕಾಸರಗೋಡು ಮಂಗಳೂರು ನಡುವಿನ ಹೆದ್ದಾರಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎನ್ಬುವ ಮಾಹಿತಿ ಹರಿದಾಡುತ್ತಿದ್ದು ಅಗತ್ಯ ಸಾಮಗ್ರಗಳಿಗೆ ಹೊರತುಡಿಸಿದಂತೆ ಯಾವುದೇ ಇತರ ವಾಹನಗಳಿಗೆ ಸಂಚಾರಕ್ಕೆ ಇದುವರೆಗೂ ಅವಕಾಶ ನೀಡಿಲ್ಲ.
ಮಾರಕ ಕೋವಿಡ್ 19 ಸೋಂಕಿನ ಪ್ರಕರಣಗಳು ಕಾಸರಗೋಡಿನಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಹೆದ್ದಾರಿ ಸಹಿತ ಕೇರಳದಿಂದ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಗಡಿಭಾಗದ ಎಲ್ಲಾ ರಸ್ತೆಗಳನ್ನು ಮುಚ್ಚುವಂತೆ ಆದೇಶ ನೀಡಿತ್ತು.
ಈ ಆದೇಶದನ್ವಯ ಕಾಸರಗೋಡು ಮೂಲಕ ಕೇರಳ ಭಾಗದಿಂದ ಬರುವ ಎಲ್ಲಾ ವಾಹನಗಳನ್ಬು ಗಡಿ ಭಾಗದಲ್ಲಿ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ಅವಶ್ಯಕ ಸರಕು ಸಾಮಾಗ್ರಿಗಳ ವಾಹನಗಳು ಸೇರಿದಂತೆ ಅಗತ್ಯ ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗುತ್ತಿತ್ತು.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಚೆಕ್ ಪೋಸ್ಟ್ ಮತ್ತು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದ್ದು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಚೆಕ್ ಪೋಸ್ಟ್ ಗಳನ್ನು ಮಣ್ಣು ಹಾಕಿ ಸಂಪೂರ್ಣ ಬಂದ್ ಮಾಡಲಾಗಿತ್ತು.
ಆದರೆ, ಇದೀಗ ಕೇಂದ್ರ ಸರಕಾರದ ಆದೇಶದಂತೆ ಮಂಗಳೂರು ಕಾಸರಗೋಡು ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ತೆರವು ಮಾಡಲಾಗುವುದು ಎನ್ನುವ ಮಾಹಿತಿಯಿದ್ದರೂ ಸದ್ಯಕ್ಕೆ ಈ ಭಾಗದಲ್ಲಿ ಯಥಾ ಸ್ಥಿತಿ ಮುಂದುವರೆದಿದೆ. ಮತ್ತು ಅವಶ್ಯಕ ವಸ್ತುಗಳನ್ನು ಸಾಗಿಸುವ ವಾಹನಗಳಿಗೆ ಮಾತ್ರ ಅವಕಾಶವಿದ್ದು, ಇದುವರೆಗೆ ಯಾವುದೇ ಹೊಸ ಆದೇಶ ಕೈಸೇರಿಲ್ಲ ಎಂದು ಸ್ಥಳೀಯ ಪೊಲೀಸ್ ಮೂಲಗಳು ಮಾದ್ಯಮಗಳಿಗೆ ಮಾಹಿತಿ ನೀಡಿದೆ.