ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಿಂದ ಜು. 22ರಿಂದ ಅಬುಧಾಬಿಗೆ ಹೆಚ್ಚುವರಿ ವಿಮಾನಗಳ ಹಾರಾಟ ಆರಂಭವಾಗಲಿದೆ.
ಪ್ರಸ್ತುತ ವಾರಕ್ಕೆ ನಾಲ್ಕು ದಿನ ಸಂಚರಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಇನ್ನು ಮುಂದೆ ಪ್ರತಿದಿನ ಹಾರಾಟ ನಡೆಸಲಿದೆ. ಜು. 22ರಂದು ರಾತ್ರಿ 8.15ಕ್ಕೆ ಐಎಕ್ಸ್ 819 ವಿಮಾನ ಮಂಗಳೂರಿನಿಂದ ಹೊರಡಲಿದ್ದು, ಅಬುಧಾಬಿಯಿಂದ ಬರುವ ಐಎಕ್ಸ್ 820 ವಿಮಾನ ಬೆಳಗ್ಗೆ 5.20ಕ್ಕೆ ಮಂಗಳೂರಿನಲ್ಲಿ ಲ್ಯಾಂಡ್ ಆಗಲಿದೆ.
ಈ ಮಧ್ಯೆ ಇಂಡಿಗೋ ಅಬುಧಾಬಿಗೆ ಆ. 9ರಿಂದ ದೈನಂದಿನ ವಿಮಾನ ಯಾನವನ್ನು ಪ್ರಾರಂಭಿಸಲಿದೆ. 6ಇ 1443 ವಿಮಾನ ಅಬುಧಾಬಿಯಿಂದ ಸಂಜೆ 4ಕ್ಕೆ ಆಗಮಿಸಲಿದ್ದು, ರಾತ್ರಿ 9.40ಕ್ಕೆ 6ಇ1442 ವಿಮಾನ ನಿರ್ಗಮಿಸಲಿದೆ.ದೇಶೀಯ ವಲಯದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜು.22ರಂದು ಬೆಂಗಳೂರಿಗೂ ವಿಮಾನ ಪರಿಚಯಿಸಲಿದೆ. ಐಎಕ್ಸ್ 1789 ವಿಮಾನ ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಜೆ 6.45ಕ್ಕೆ ಮಂಗಳೂರು ತಲುಪಲಿದ್ದು, ಮಂಗಳವಾರ, ಗುರುವಾರ ಮತ್ತು ಶನಿವಾರ ಬೆಳಗ್ಗೆ 7.05ಕ್ಕೆ ಐಕ್ಸ್ 1780 ಮಂಗಳೂರಿನಿಂದ ಹೊರಡಲಿದೆ. ಮುಂಬಯಿಗೆ ಜು.16ರಿಂದ ಹೊಸ ವಿಮಾನ ಆರಂಭವಾಗಿದೆ.
ಐಎಕ್ಸ್ 1295 ಮುಂಬಯಿಯಿಂದ ಮಧ್ಯಾಹ್ನ 12.30ಕ್ಕೆ ಹೊರಟು 2.05ಕ್ಕೆ ಮಂಗಳೂರು ತಲುಪಿದೆ. ಐಎಕ್ಸ್ 1296 ಮಧ್ಯಾಹ್ನ 2.45ಕ್ಕೆ ಸಂಜೆ 4.25ಕ್ಕೆ ಮುಂಬಯಿ ತಲುಪಿದೆ.
ಈ ವಿಮಾನಗಳ ಹೆಚ್ಚಳದಿಂದಾಗಿ ವಾರದಲ್ಲಿ ಸಂಚರಿಸುವ ವಿಮಾನಗಳ ಸಂಖ್ಯೆ 276ರಿಂದ 344ಕ್ಕೆ ಏರಿಕೆಯಾಗಲಿದ್ದು, ಆ.9ರಿಂದ ಶೇ.25ಕ್ಕೆ ಹೆಚ್ಚಳವಾಗಿದೆ ಎಂದು ಪ್ರಕಟನೆ ತಿಳಿಸಿದೆ.