Advertisement

ದ.ಕ.: ಹೆಚ್ಚುತ್ತಿದೆ ಐಎಲ್‌ಐ, “ಸಾರಿ’ಪ್ರಕರಣ!

07:56 AM Jul 04, 2020 | mahesh |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದ್ದು, ಜಿಲ್ಲೆಯ ಜನತೆಯಲ್ಲಿ ಇನ್ನಷ್ಟು ಆತಂಕ ಸೃಷ್ಟಿಸಿದೆ. ಅದರಲ್ಲೂ “ಇನ್‌ಫ್ಲೂಯೆನ್ಜ್ ಲೈಕ್‌ ಇಲ್‌ನೆಸ್‌ (ಐಎಲ್‌ಐ)’ ಮತ್ತು ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಸ್ಥಳೀಯವಾಗಿ ಕೋವಿಡ್ ಸೋಂಕು ಹಬ್ಬುತ್ತಿರುವುದು ಹೆಚ್ಚುತ್ತಿದೆ.

Advertisement

ಜಿಲ್ಲೆಯಲ್ಲಿ ಕಳೆದ 13 ದಿನಗಳ ಅವಧಿಯಲ್ಲಿ 723 ಮಂದಿ ಸೋಂಕಿಗೊಳಗಾಗಿರುವುದು ಕೋವಿಡ್ ಹರಡುವಿಕೆಯ ವೇಗದ ಬಗ್ಗೆ ಭೀತಿ ಶುರುವಾಗಿದೆ. ಈ ಪೈಕಿ ಬಹುತೇಕರು ಗಲ್ಫ್ ರಾಷ್ಟ್ರಗಳಿಂದ ಬಂದವರು ಮತ್ತು ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ದೃಢಪಟ್ಟವರು. ಆದರೆ, 213 ಮಂದಿ ಸೋಂಕು ಪೀಡಿತರು ಜಿಲ್ಲೆಯಲ್ಲೇ ವಾಸಿಸುವವರಾಗಿದ್ದು, ಯಾವುದೇ ಸಂಪರ್ಕ ಇಲ್ಲದೆ ಕೋವಿಡ್ ದೃಢಪಟ್ಟಿದೆ. ಇದರಲ್ಲಿ 162 ಇನ್‌ಫ್ಲೂಯೆನ ಲೈಕ್‌ ಇಲ್‌ನೆಸ್‌ ಮತ್ತು 51 ಮಂದಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರಾಗಿದ್ದಾರೆ.

ಬಂಟ್ವಾಳ, ಶಕ್ತಿನಗರ, ಬೋಳೂರಿನಲ್ಲಿ ಪಾಸಿಟಿವ್‌ ಕಂಡು ಬಂದವರು ಕೋವಿಡ್ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಸ್ಥಳೀಯವಾಗಿ ಕೋವಿಡ್ ಹರಡುವಿಕೆ ಕಡಿಮೆಯಾಗಿತ್ತು. ಆದರೆ, ಇದೀಗ ಐಎಲ್‌ಐ ಮತ್ತು ಸಾರಿ ಪ್ರಕರಣಗಳು ಜಾಸ್ತಿಯಾಗುತ್ತಿರುವುದು ಜಿಲ್ಲೆಯಲ್ಲಿ ಮತ್ತೆ ಆತಂಕಕ್ಕೆ ಕಾರಣವಾಗಿದೆ.

13 ದಿನ: 723 ಪ್ರಕರಣ
ಆರಂಭಿಕ ಹಂತದಲ್ಲಿ ಕೋವಿಡ್ ಹರಡುವಿಕೆಯ ವೇಗವೂ ತೀರಾ ಕಡಿಮೆ ಇತ್ತು. ಮಾ. 23ರಿಂದ ಎ. 5ರ ವರೆಗೆ 12 ಮಂದಿಗೆ ಕೋವಿಡ್ ಬಾಧಿಸಿದ್ದು, ಇವರಲ್ಲಿ 11 ಮಂದಿ ವಿದೇಶದಿಂದ ಆಗಮಿಸಿದವರೇ ಆಗಿದ್ದರು. ಆದರೆ, ಎ. 18ರ ಬಳಿಕ ಒಂದೇ ಮನೆಯ ನಾಲ್ಕಾರು ಮಂದಿಗೆ ಕೋವಿಡ್ ತಗುಲತೊಡಗಿದ್ದು, ಬಳಿಕ ನಿಂತಿತ್ತು. ಇದೀಗ ಈ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಸಾಗುತ್ತಿದ್ದು, ಕಳೆದ 13 ದಿನಗಳ ಅವಧಿಯಲ್ಲಿ 723 ಮಂದಿ ಕೊರೊನಾ ಬಾಧಿತರಾಗಿದ್ದಾರೆ.

ತಪಾಸಣೆಗೆ ಬನ್ನಿ
ಐಎಲ್‌ಐ ಮತ್ತು ಸಾರಿ ಪ್ರಕರಣಗಳು ಜಿಲ್ಲೆಯಲ್ಲಿ ಜಾಸ್ತಿಯಾಗುತ್ತಿವೆ. ಸರಕಾರವು ಈ ಎರಡು ರೋಗ ಲಕ್ಷಣಗಳಿರುವವರನ್ನು ಕಡ್ಡಾಯವಾಗಿ ಗಂಟಲು ದ್ರವ ಮಾದರಿ ತೆಗೆದು ಪರೀಕ್ಷೆಗೊಳಪಡಿಸಬೇಕೆಂದು ಹೇಳಿದೆ. ಜನ ಲಕ್ಷಣ ಕಾಣಿಸಿಕೊಂಡರೆ ಮನೆಯಲ್ಲೇ ಕುಳಿತುಕೊಳ್ಳದೆ ತಪಾಸಣೆಗೆ ಆಗಮಿಸಬೇಕು. ಹಾಗೆ ಮಾಡುವುದರಿಂದ ಮನೆಯವರಿಗೂ ಹರಡುವ ಸಾಧ್ಯತೆಯನ್ನು ನಿಯಂತ್ರಿಸಬಹುದು.
-ಡಾ| ರಾಮಚಂದ್ರ ಬಾಯರಿ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next