Advertisement

ಮಂಗಳೂರು ಪ್ರಕರಣ: ಚಿಕಿತ್ಸಾ ವೆಚ್ಚ ಭರಿಸಲು ಪುರುಷೋತ್ತಮ ಕುಟುಂಬಸ್ಥರ ಪರದಾಟ

01:17 AM Dec 22, 2022 | Team Udayavani |

ಮಂಗಳೂರು : ಕುಕ್ಕರ್‌ ಬಾಂಬ್‌ ಸ್ಫೋಟದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರ ಚಿಕಿತ್ಸಾ ವೆಚ್ಚ ಭರಿಸಲು ಕುಟುಂಬ
ಸ್ಥರಿಗೆ ಒತ್ತಡ ಹಾಕಬಾರದು ಎಂದು ದ.ಕ. ಜಿಲ್ಲಾಧಿಕಾರಿ ಯವರು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ನಿರ್ದೇಶ ನೀಡಿದ್ದಾರೆ.

Advertisement

ಪುರುಷೋತ್ತಮ ಅವರಿಗೆ ಸೂಕ್ತ ಚಿಕಿತ್ಸೆ ಮುಂದುವರಿಸಬೇಕು. ವೆಚ್ಚ ಭರಿಸುವಂತೆ ಒತ್ತಡ ಹಾಕಬಾರದು. ಅವರ ಪುತ್ರಿಯ ಇಎಸ್‌ಐನಿಂದ ಭರಿಸಿರುವ ಮೊತ್ತವನ್ನು ಸರಕಾರದ ವತಿಯಿಂದ ಮರು ಪಾವತಿಸಲಾಗುವುದು ಎಂದು ಡಿಸಿಯವರು ಪತ್ರದ ಮೂಲಕ ವೈದ್ಯಕೀಯ ಅಧೀಕ್ಷಕರಿಗೆ ತಿಳಿಸಿದ್ದಾರೆ.

“ಪುರುಷೋತ್ತಮ ಅವರ ಚಿಕಿತ್ಸಾ ವೆಚ್ಚವನ್ನು ಪುತ್ರಿಯ ಇಎಸ್‌ಐ ಮೂಲಕ ಭರಿಸಲಾಗಿತ್ತು. ಆದರೆ ಮುಂದಿನ ಚಿಕಿತ್ಸೆಯನ್ನು ಇಎಸ್‌ಐನಿಂದ ಭರಿಸಲಾಗುವುದಿಲ್ಲ ಎಂದು ಆಸ್ಪತ್ರೆಯವರು ತಿಳಿಸಿದ್ದರಿಂದ ಕುಟುಂಬದವರು ಡಿಸಿಯವರಲ್ಲಿ ಸಂಕಷ್ಟ ಹೇಳಿಕೊಂಡಿದ್ದರು. ಈ ಹಿನ್ನೆಲೆ ಯಲ್ಲಿ ಅವರು ಆಸ್ಪತ್ರೆಯವರಿಗೆ ನಿರ್ದೇಶ ನೀಡಿದ್ದಾರೆ.

ನ. 19ರಂದು ಆಟೋರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡು ಪುರುಷೋತ್ತಮ ಪೂಜಾರಿ ಅವರು ಗಾಯಗೊಂಡಿದ್ದು ಇನ್ನು ಕೂಡ ಅವರ ಚಿಕಿತ್ಸೆ ಮುಂದುವರಿದಿದೆ. ಘಟನೆ ನಡೆದ ಅನಂತರ ಆಸ್ಪತ್ರೆಗೆ ಭೇಟಿ ನೀಡಿದ್ದ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಚಿಕಿತ್ಸಾ ವೆಚ್ಚವನ್ನು ಸರಕಾರದ ವತಿಯಿಂದ ಭರಿಸಲಾಗುವುದು ಎಂದು ತಿಳಿಸಿ ದ್ದರು. ಆದರೆ ಸರಕಾರ ಚಿಕಿತ್ಸಾ ವೆಚ್ಚ ಭರಿಸದೇ ಇದ್ದುದರಿಂದ ಮತ್ತು ಆರ್ಥಿಕ ಸಹಾಯ ನೀಡುವ ಭರವಸೆ ಈಡೇರಿಸದೆ ಇದ್ದುದರಿಂದ ಕುಟುಂಬಸ್ಥರು ನೋವು ತೋಡಿಕೊಂಡಿದ್ದರು.

ನಿಯಮದಂತೆ ಪರಿಹಾರ ಬಿಡುಗಡೆ: ಶಾಸಕ ಕಾಮತ್‌
ಪುರುಷೋತ್ತಮ ಪೂಜಾರಿ ಅವರಿಗೆ ಪರಿಹಾರ ಧನ ಒದಗಿಸುವ ಬಗ್ಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು ನಿಯಮಗಳಂತೆ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು ಪರಿಹಾರ ಧನ ಬಿಡುಗಡೆಯಾಗಲಿದೆ. ಪುರುಷೋತ್ತಮ ಪೂಜಾರಿ ಅವರಿಗೆ ಸರ್ವ ರೀತಿಯಲ್ಲೂ ಸಹಕಾರ ನೀಡಲಾಗುತ್ತಿದೆ. ಭಯೋತ್ಪಾದನ ಚಟುವಟಿಕೆಗಳಂತಹ ಹೀನ ಕೃತ್ಯಗಳಲ್ಲಿ ರಾಜಕೀಯ ಬೇಳೆ ಬೇಯಿಸುವುದು ಸರಿಯಲ್ಲ. ನಾನು ಈಗಾಗಲೇ ಪುರುಷೋತ್ತಮ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೇನೆ. ಅವರ ಕುಟುಂಬದ ಜತೆ ಸಂಪರ್ಕದಲ್ಲಿದ್ದೇನೆ. ವೈಯಕ್ತಿಕ ನೆಲೆಯಲ್ಲಿ ಈಗಾಗಲೇ ಧನ ಸಹಾಯ ನೀಡಲಾಗಿದೆ. ಕಾರ್ಯಕರ್ತರು ಕುಟುಂಬದ ಸದಸ್ಯರ ಜತೆಗಿದ್ದಾರೆ. ಪುರುಷೋತ್ತಮ ಪೂಜಾರಿ ಅವರಿಗೆ ಹಿಂದಿನ ಪರ್ಮಿಟ್‌ನಲ್ಲಿ ಹೊಸದಾಗಿ ಆಟೋ ರಿಕ್ಷಾ ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ಬುಧವಾರ ಕೂಡ ಬಿಜೆಪಿ ಮುಖಂಡರು ಪುರುಷೋತ್ತಮ ಪೂಜಾರಿ, ವೈದ್ಯರು ಮತ್ತು ಕುಟುಂಬದವರನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್‌ ತಿಳಿಸಿದ್ದಾರೆ.

Advertisement

ಇನ್ನಷ್ಟು ದಿನ ಆಸ್ಪತ್ರೆಯಲ್ಲಿ
ಸುಟ್ಟ ಗಾಯಗಳೊಂದಿಗೆ ನ. 19ರಂದು ಆಸ್ಪತ್ರೆಗೆ ದಾಖಲಿಸಲ್ಪಟ್ಟಿರುವ ಪುರುಷೋತ್ತಮ ಪೂಜಾರಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಇನ್ನೂ ಹಲವು ದಿನಗಳ ಕಾಲ ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ. ಸ್ಫೋಟದಿಂದ ಶೇ. 45ರಷ್ಟು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಶಂಕಿತ ಉಗ್ರ ಮಹಮ್ಮದ್‌ ಶಾರೀಕ್‌ ಬಹುತೇಕ ಚೇತರಿಸಿಕೊಂಡಿದ್ದು ಮುಂದಿನ ಚಿಕಿತ್ಸೆ ಮತ್ತು ವಿಚಾರಣೆಗಾಗಿ ಆತನನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next