ಮಂಗಳೂರು: ಮನೆಗೆ ಬೆಂಕಿ ತಗಲಿ ಪೀಠೋಪಕರಣಗಳು, ಅಲಂಕಾರಿಕ ವಸ್ತುಗಳು ಸೇರಿದಂತೆ 18 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಸೊತ್ತುಗಳು ಸುಟ್ಟು ಹೋಗಿರುವ ಘಟನೆ ಶುಕ್ರವಾರ ರಾತ್ರಿ ನಗರದ ಹೊರವಲಯದ ಬಜಾಲ್ ಪಲ್ಲಕೆರೆಯಲ್ಲಿ ಸಂಭವಿಸಿದೆ.
ನಗರದಲ್ಲಿ ಡೆಕೋರೇಶನ್ ವ್ಯವಹಾರ ನಡೆಸುತ್ತಿದ್ದ ಬಜಾಲ್ ಪಲ್ಲಕೆರೆ ನಿವಾಸಿ ಲಕ್ಷ್ಮೀನಾರಾಯಣ್ ಅವರು ಡೆಕೊರೇಶನ್‌ಗೆ ಬಳಕೆ ಮಾಡುವ ಸೊತ್ತುಗಳನ್ನು ಪಲ್ಲಕೆರೆಯ ಮನೆಯ ಮುಂಭಾಗದ ಚಪ್ಪರದಲ್ಲಿರಿಸಿದ್ದರು. ಶುಕ್ರವಾರ ಸಂಜೆಯ ವೇಳೆಗೆ ಅವರು ಕಾರ್ಯನಿಮಿತ್ತ ಹೊರಗಡೆ ಹೋಗಿದ್ದರು. ರಾತ್ರಿ 11ರ ಸುಮಾರಿಗೆ ಬೆಂಕಿ ತಗಲಿದೆ.
ನೆರೆಹೊರೆಯವರು ಬಂದು ಮನೆಯಲ್ಲಿದ್ದ ಲಕ್ಷ್ಮೀನಾರಾಯಣ ಅವರ ಪತ್ನಿಯನ್ನು ರಕ್ಷಿಸಿದ್ದಾರೆ. ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಘಟನ ನಡೆದ ಸ್ಥಳಕ್ಕೆ ಶಾಸಕ ವೇದವ್ಯಾಸ್ ಕಾಮತ್ ಅವರು ಶನಿವಾರ ಬೆಳಗ್ಗೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದರು. ಮನೆ ರಿಪೇರಿಗೆ ಸರಕಾರದಿಂದ ಅನುದಾನ ಒದಗಿಸುವುದಾಗಿಯೂ, ವೈಯಕ್ತಿಕ ಸಹಕಾರ ನೀಡುವುದಾಗಿಯೂ ತಿಳಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿ’ಸೋಜಾ ಅವರು ಭೇಟಿ ನೀಡಿ ಕೂಡಲೇ ಪರಿಹಾರ ನೀಡುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.