Advertisement
ಮಂಗಳೂರು ನಗರ ವ್ಯಾಪ್ತಿಯಲ್ಲಿಯೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿಯೂ ವಿವಿಧೆಡೆ ರಸ್ತೆಗೆ ಹೊಂದಿಕೊಂಡಂತೆ ದಿನದ 24 ಗಂಟೆಯೂ ಘನ ವಾಹನಗಳನ್ನು ನಿಲ್ಲಿಸುವುದು ಕಂಡು ಬರುತ್ತಿದ್ದು, ಇದು ನಿಜವಾಗಿಯೂ ಅಪಾಯಕ್ಕೆ ಆಹ್ವಾನ ನೀಡಿದಂತಿದೆ. ಹಗಲು ವೇಳೆಯಲ್ಲಿ ಸಂಭಾವ್ಯ ಅಪಾಯ ತಪ್ಪಿಸಬಹುದಾದರೂ ರಾತ್ರಿ ವೇಳೆಯಲ್ಲಿ ಸ್ವಲ್ಪ ನಿಯಂತ್ರಣ ತಪ್ಪಿದರೂ ನಿಲ್ಲಿಸಿರುವ ವಾಹನಗಳಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಭಾರೀ ಪ್ರಮಾಣದಲ್ಲಿ ಅವಘಡ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ರಸ್ತೆ ಬದಿಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡದಂತೆ ಎಚ್ಚರಿಕೆ ನೀಡುವ ಅಗತ್ಯವಿದೆ ಎನ್ನುವ ಆಗ್ರಹ ಕೇಳಿ ಬಂದಿದೆ.
ಇಂತಹ ಸಂಭಾವ್ಯ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಲಾರಿಗಳನ್ನು ನಿಲ್ಲಿಸಲು ಹೆದ್ದಾರಿ ಬದಿಯಲ್ಲಿ ಸೂಕ್ತ ಟ್ರಕ್ ಬೇಗಳ ಅಗತ್ಯವಿದೆ. ಪ್ರಸ್ತುತ ನಗರದ ಕಣ್ಣೂರು ಚೆಕ್ ಪೋಸ್ಟ್ ಬಳಿ ಹೆದ್ದಾರಿ ಬದಿಯಲ್ಲಿ ವಿಶಾಲವಾದ ಟ್ರಕ್ ಬೇ ಇದೆ. ಇದರಲ್ಲಿ ಹಗಲು – ರಾತ್ರಿ ಸಾಕಷ್ಟು ಸಂಖ್ಯೆಯಲ್ಲಿ ಟ್ರಕ್ಗಳು ನಿಲ್ಲುತ್ತವೆ. ಕೆಲವೊಮ್ಮೆ ಬೇ ಭರ್ತಿಯಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಬೇಕಾದ ಅನಿವಾರ್ಯವೂ ವಾಹನ ಚಾಲಕರಿಗೆ ಇರುತ್ತದೆ. ಇದನ್ನು ಹೊರತು ಪಡಿಸಿ ಬೇರೆ ಟ್ರಕ್ ಬೇ ಪರಿಕಲ್ಪನೆ ನಗರ ವ್ಯಾಪ್ತಿಯಲ್ಲಿ ಇಲ್ಲ. ಎನ್ಎಂಪಿಟಿ ಬಳಿ ಇದೆಯಾದರೂ ಅದು ಅಲ್ಲಿಗೆ ಬರುವ ಲಾರಿಗಳಿಗೆ ಮಾತ್ರ ಸೀಮಿತವಾಗಿದೆ. ಬೈಕಂಪಾಡಿಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಇನ್ನೂ ಕೈಗೂಡಿಲ್ಲ. ಕೆಲವು ಪೆಟ್ರೋಲ್ ಪಂಪ್ಗ್ಳಲ್ಲಿ ರಾತ್ರಿ ವೇಳೆ ನಿಲ್ಲಿಸಲು ಅವಕಾಶ ಕೊಡುವುದಿಲ್ಲ. ಇದರಿಂದಾಗಿ ರಸ್ತೆ ಬದಿಯಲ್ಲೇ ನಿಲ್ಲಿಸಬೇಕಾದ ಪರಿಸ್ಥಿತಿ ಇರುತ್ತದೆ. ಕನಿಷ್ಠ ನಾಲ್ಕೈದು ಕಿ.ಮೀ.ಗಳಿಗೆ ಒಂದರಂತೆ ಟ್ರಕ್ ಬೇಗಳನ್ನು ನಿರ್ಮಿಸಿದರೆ ನಿಲ್ಲಿಸಲು ಉತ್ತಮವಾಗುತ್ತದೆ ಎನ್ನುವುದು ಚಾಲಕರ ಮಾತು.
Related Articles
ಹೆದ್ದಾರಿಯಲ್ಲಿರುವ ಗ್ಯಾರೇಜ್, ಶೋರೂಂ, ಸರ್ವಿಸ್ ಸೆಂಟರ್, ವಾಶಿಂಗ್ ಸೆಂಟರ್ಗಳ ಮುಂದೆ ವಾಹನಗಳನ್ನು ರಸ್ತೆ ಬದಿಯಲ್ಲೇ ನಿಲ್ಲಿಸಲಾಗುತ್ತಿದೆ. ಇದರಿಂದ ಪಾದಚಾರಿಗಳಗೆ ನಡೆದುಕೊಂಡು ಹೋಗಲೂ ಸ್ಥಳಾವಕಾಶವಿಲ್ಲದೆ, ಅಪಾಯಕಾರಿ ರೀತಿಯಲ್ಲಿ ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸದಂತೆ ತಡೆಯುವ ಕಲಸ ಆಗಬೇಕಿದೆ.
Advertisement
ದಂಡ ವಿಧಿಸಲು ಸೂಚನೆಹೆದ್ದಾರಿ ಬದಿಯಲ್ಲಿ ಘನ ವಾಹನಗಳನ್ನು ಪಾರ್ಕಿಂಗ್ ಮಾಡಲು ಅವಕಾಶವಿಲ್ಲ. ರಸ್ತೆ ಬದಿಯಲ್ಲಿ ಘನ ವಾಹನಗಳನ್ನು ನಿಲ್ಲಿಸಿದರೆ ದಂಡ ವಿಧಿಸುವಂತೆಯೂ ಹೆದ್ದಾರಿ ಗಸ್ತು ಮತ್ತು ಸಂಚಾರದ ವಿಭಾಗದ ಪೋಲೀಸರಿಗೆ ಸೂಚನೆ ನೀಡಲಾಗಿದೆ. ಆದ್ದರಿಂದ ಚಾಲಕರು ಸೂಕ್ತ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡಿ ಸಂಭಾವ್ಯ ಅಪಘಾತಗಳನ್ನು ಪಡೆಯಬೇಕಿದೆ.
-ದಿನೇಶ್ ಕುಮಾರ್,ಡಿಸಿಪಿ, ಸಂಚಾರ ವಿಭಾಗ ಎಲ್ಲೆಲ್ಲ ರಸ್ತೆ ಬದಿ ಲಾರಿಗಳ ನಿಲುಗಡೆ
ಕೆಪಿಟಿ – ಪದವು ರಸ್ತೆ, ಬಿಕರ್ನಕಟ್ಟೆ- ಮರೋಳಿ ರಸ್ತೆ, ಪಡೀಲ್, ಕೂಳೂರು – ಕೊಟ್ಟಾರ ಚೌಕಿ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ರಾತ್ರಿ ಹಗಲು ಘನ ವಾಹನಗಳು ನಿಂತಿರುತ್ತದೆ. ಕೂಳೂರು -ಬೈಕಂಪಾಡಿ ಸುರತ್ಕಲ್ ರಸ್ತೆಯಲ್ಲಂತೂ ಘನ ವಾಹನಗಳ ನಿಲುಗಡೆ ಸಾಮಾನ್ಯ ಎನ್ನುವಂತಾಗಿದೆ. -ಭರತ್ ಶೆಟ್ಟಿಗಾರ್