Advertisement

ಏರುತ್ತಿದೆ ಉರಿ ಬಿಸಿಲು; ಮಳೆರಾಯನ ಕಣ್ಣಾಮುಚ್ಚಾಲೆ

02:57 PM May 15, 2019 | Naveen |

ಮಹಾನಗರ: ‘ಫೋನಿ’ ಚಂಡಮಾರುತದ ಪರಿಣಾಮ ದಿಂದ ಕರಾವಳಿಯಲ್ಲಿ ಉತ್ತಮ ಮಳೆಯಾಗಬಹುದು ಎನ್ನುವ ಲೆಕ್ಕಾಚಾರ ಹುಸಿಯಾಗಿದ್ದು, ದಿನದಿಂದ ದಿನಕ್ಕೆ ಉಷ್ಣಾಂಶ ಏರಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.

Advertisement

ಮಂಗಳವಾರ ದಾಖಲಾದ ದೇಶದಲ್ಲಿ ಅತೀ ಹೆಚ್ಚು ಉಷ್ಣಾಂಶವಿರುವ 10 ನಗರಗಳಲ್ಲಿ ಕರ್ನಾಟಕದ ಕಲಬುರಗಿ ಜಿಲ್ಲೆ ಕೂಡ ಇದೆ. ಕಲಬುರಗಿಯಲ್ಲಿ ಮಂಗಳವಾರ 43 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ಈ ಹಿಂದೆ ಮುನ್ಸೂಚನೆ ನೀಡಿತ್ತು.

ಕರಾವಳಿ ಭಾಗದ ಅನೇಕ ಕಡೆಗಳಲ್ಲಿ ಸಂಜೆ ವೇಳೆಗೆ ಮೋಡ ಕವಿದ ವಾತಾವರಣವಿರುತ್ತದೆಯಾದರೂ ಮಳೆ ಬರುವುದಿಲ್ಲ. ಮಂಗಳೂರು ನಗರದಲ್ಲಿ ಒಂದು ವಾರದಿಂದ ಸಂಜೆ ವೇಳೆ ಮೋಡ ಕವಿದು, ದಟ್ಟ ಮುಗಿಲು ಇದ್ದರೂ ಮಳೆ ಮಾತ್ರ ಬರುತ್ತಿಲ್ಲ. ಮಳೆ ಇಲ್ಲದೆ ನಗರದಲ್ಲಿ ಜಲಕ್ಷಾಮ ಉಂಟಾಗಿದ್ದು, ನೀರಿಗೆ ಹಾಹಾಕಾರವಿದೆ.

ದೇವರಿಗೆ ಮೊರೆ
ಮಳೆ ಇಲ್ಲದೆ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಬೇಗನೆ ಮಳೆ ಸುರಿಯುವಂತೆ ಪ್ರಾರ್ಥಿಸಿ ವಿವಿಧ ದೇಗುಲಗಳಲ್ಲಿ ಈಗಾಗಲೇ ಸೀಯಾಳ ಅಭಿಷೇಕ ನಡೆದಿದೆ. ಮೇ 15ರಂದು ಎಲ್ಲ ಧರ್ಮದವರು ಅವರವರ ಶ್ರಧ್ಧಾಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸುವಂತೆ ಈಗಾಗಲೇ ಮನವಿ ಮಾಡಲಾಗಿದ್ದು, ಅದಕ್ಕೆ ಹೆಚ್ಚಿನವರು ತಯಾರಿ ನಡೆಸಿದ್ದಾರೆ.

ದುರ್ಬಲ ಪೂರ್ವ ಮುಂಗಾರು
ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆಯು ಮಾರ್ಚ್‌ನಿಂದ ಮೇ ತಿಂಗಳಿನವರೆಗೆ ಬೀಳುತ್ತದೆ. ಬಳಿಕ ಮೇ ಕೊನೆಯ ವಾರದಲ್ಲಿ ಅಥವಾ ಜೂನ್‌ ಮೊದಲ ವಾರದಲ್ಲಿ ಮುಂಗಾರು ಪ್ರವೇಶ ಪಡೆಯುತ್ತದೆ.

Advertisement

ಕಳೆದ ವರ್ಷ ದ.ಕ. ಜಿಲ್ಲೆಯಲ್ಲಿ 227.1 ಮಿ.ಮೀ. ವಾಡಿಕೆ ಮಳೆಯ ಪೈಕಿ 616.9 ಮಿ.ಮೀ. ಸರಾಸರಿ ಮಳೆಯಾಗಿ ಶೇ.172ರಷ್ಟು ಮಳೆ ಹೆಚ್ಚಳವಾಗಿತ್ತು. ಆದರೆ ಈವರೆಗೆ ಹೋಲಿಕೆ ಮಾಡಿದರೆ ಪೂರ್ವ ಮುಂಗಾರು ದುರ್ಬಲವಾಗಿದೆ.

ಮಳೆ ಕೊರತೆ
ದ.ಕ.ದಲ್ಲಿ ಸದ್ಯ ಶೇ.53ರಷ್ಟು ಮಳೆ ಕೊರತೆ ಇದೆ. ಅಲ್ಲದೆ, ಜಿಲ್ಲೆಗೆ ಹೋಲಿಕೆ ಮಾಡಿದರೆ ಮಂಗಳೂರು ನಗರದಲ್ಲಿ ಅತೀ ಕಡಿಮೆ ಪೂರ್ವ ಮುಂಗಾರು ಮಳೆಯಾಗಿದೆ. ಸದ್ಯ ಶೇ.90ರಷ್ಟು ಮಳೆ ಕೊರತೆ ಅನುಭವಿಸುತ್ತಿದೆ.ಕರಾವಳಿಯ ಸೆಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಧ್ಯಾಹ್ನ ವೇಳೆ ಸುಮಾರು 37 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದ್ದು, ಸರಾಸರಿ ಉಷ್ಣಾಂಶದಲ್ಲಿಯೂ ಏರಿಕೆಯಾಗಿದಜಿಲ್ಲೆಯಲ್ಲಿ 2018ರಲ್ಲಿ ಮೇ ತಿಂಗಳ 6 ಮತ್ತು 8ನೇ ತಾರೀಕಿನಂದು ಅತೀ ಹೆಚ್ಚು ಅಂದರೆ 36.9 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಇನ್ನು, 2017ರ ಮೇ 1ರಂದು 37 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾದದ್ದು ಮೇ ತಿಂಗಳ ದಾಖಲೆಯಾಗಿದೆ.

ಮಳೆ ತರುವ ಮಾರುತಗಳಿಲ್ಲ
ಕಳೆದ ಬಾರಿಯ ಪೂರ್ವ ಮುಂಗಾರು ಮಳೆಗೆ ಹೋಲಿಕೆ ಮಾಡಿದರೆ ಈ ಬಾರಿ ಕಡಿಮೆ ಮಳೆಯಾಗಿದೆ. ಸದ್ಯ ಉತ್ತಮ ಮಳೆ ತರುವಂತಹ ಯಾವುದೇ ಮಾರುತವಿಲ್ಲ. ಮುಂದಿನ ದಿನಗಳಲ್ಲಿ ಕರಾವಳಿಯ ಕೆಲವು ಪ್ರದೇಶದಲ್ಲಿ ಸಾಧಾರಣ ಮಳೆಯಾಗಬಹುದು. ಮುಂದಿನ ದಿನಗಳಲ್ಲಿ ಉಷ್ಣಾಂಶ ಮತ್ತಷ್ಟು ಏರಿಕೆಯಾಗಬಹುದು.
ಶ್ರೀನಿವಾಸ ರೆಡ್ಡಿ
ಕೆಎಸ್‌ಎನ್‌ಡಿಎಂಸಿ ನಿರ್ದೇಶಕ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next