ಮಂಗಳೂರು: ಅಯೋಧ್ಯೆ ಶ್ರೀರಾಮ ಜನ್ಮಭೂಮಿಯ ಸಮಗ್ರ ಮಾಹಿತಿಯನ್ನು ಬಿತ್ತರಿಸುವ ಹನುಮ ರಥ ಡಿ. 27ರಂದು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಲಿದೆ.
ನಮೋ ಬ್ರಿಗೇಡ್ 2.0 ವತಿಯಿಂದ ಹನುಮ ರಥ ರಾಜ್ಯಾದ್ಯಂತ ಸಂಚರಿಸುತ್ತಿದ್ದು ಡಿ. 27ರಂದು ಚಿಕ್ಕಮಗಳೂರಿನಿಂದ ಉಜಿರೆಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಲಿದೆ.
ಬೆಳಗ್ಗೆ 8ಕ್ಕೆ ಉಜಿರೆ ಜಂಕ್ಷನ್, 12ಕ್ಕೆ ಕಡಬ ಪೇಟೆ, 3ಕ್ಕೆ ಸುಳ್ಯ ಪೇಟೆ, ರಾತ್ರಿ 7ಕ್ಕೆ ಪುತ್ತೂರು, ಡಿ. 28ರಂದು ಬೆಳಗ್ಗೆ 9ಕ್ಕೆ ವಿಟ್ಲ, 11ಕ್ಕೆ ಕಲ್ಲಡ್ಕ, 3.30ಕ್ಕೆ ಉಳ್ಳಾಲ ಹಾಗೂ ಸಂಜೆ 5ಕ್ಕೆ ಮಂಗಳೂರಿನ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತದ ಸಮೀಪ, ಪಾಸ್‌ಪೋರ್ಟ್ ಕಚೇರಿಯ ಬಳಿ ಹನುಮ ರಥ ನಿಲ್ಲಲಿದೆ.
ಎಲ್ಲ ಕಡೆ ಎಲ್‌ಇಡಿಯಲ್ಲಿ 20 ನಿಮಿಷಗಳ ಸಾಕ್ಷ್ಯಚಿತ್ರ ಪ್ರದರ್ಶಿಸಲಾಗುತ್ತಿದ್ದು, ಅದರಲ್ಲಿ 500 ವರ್ಷಗಳ ಅಯೋಧ್ಯೆ ರಾಮಜನ್ಮಭೂಮಿಯ ಹೋರಾಟ, ಮಂದಿರ ನಿರ್ಮಾಣಕ್ಕೆ ಎದುರಾದ ಸವಾಲುಗಳು ಮತ್ತು ಅದನ್ನು ಜಯಿಸಿದ ರೀತಿಯ ಬಗ್ಗೆ ಮಾಹಿತಿ ನೀಡಲಾಗುವುದು.
ಹನುಮರಥದ ಜತೆಗೆ ಸೇನಾಧಿಪತಿ ವಾಹನ ಸಾಗುತ್ತಿದ್ದು ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ಶಿಲಾನ್ಯಾಸದಿಂದ ಇತ್ತೀಚಿನ ತನಕದ ಫೋಟೋ ಪ್ರದರ್ಶನ ಕೂಡ ನಡೆಯುತ್ತಿದೆ ಎಂದು ನಮೋ ಬ್ರಿಗೇಡ್ ಪ್ರಕಟನೆ ತಿಳಿಸಿದೆ.