Advertisement

Mangaluru: ಕೈಕೊಡುವ ವೆಟ್‌ವೆಲ್‌; ನಂದಿನಿ, ಬಾವಿ ನೀರು ಕಲುಷಿತ

02:20 PM Jan 01, 2025 | Team Udayavani |

ಚೇಳ್ಯಾರು: ಸುರತ್ಕಲ್‌ ಮುಂಚೂರು ಬಳಿಯ ವೆಟ್‌ವೆಲ್‌ 1ರಲ್ಲಿ ಪಂಪ್‌ ಪದೇ ಪದೆ ಕೈಕೊಡುತ್ತಿದ್ದು, ಇದರಿಂದ ಸುರತ್ಕಲ್‌ ವಿಭಾಗೀಯ ಪಾಲಿಕೆ ವ್ಯಾಪ್ತಿಯ ಭಾಗದ ಒಳಚರಂಡಿ ನೀರು ಚೇಳ್ಯಾರು ಗ್ರಾಮ ಪ್ರವೇಶಿಸಿ ಸಿಹಿ ನೀರಿನ ಬಾವಿ, ನಂದಿನಿ ನದಿಯನ್ನು ಕಲುಷಿತ ಗೊಳಿಸುತ್ತಿರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಜಕಾಲುವೆಯನ್ನೇ ಬಂದ್‌ ಮಾಡುವುದಾಗಿ ಎಚ್ಚರಿಸಿದ್ದಾರೆ.

Advertisement

ರವಿವಾರ ಮುಂಚೂರು ಬಳಿ ರಾಜಕಾಲುವೆ ಬಳಿ ಸೇರಿದ ಗ್ರಾಮಸ್ಥರು, ಎಸ್‌ಟಿಪಿಯಿಂದ ನೇರವಾಗಿ ಕಾಲುವೆ ಸೇರುವ ಕೊಳಚೆ ನೀರಿನ ಹರಿವನ್ನು ಕಂಡರು. ಸುಮಾರು 40 ಎಕರೆಗೂ ಮಿಕ್ಕಿ ಕೃಷಿ ಭೂಮಿ ನಾಶ, ಹೈನುಗಾರಿಕೆಗೆ ಹುಲ್ಲು ತೆಗೆಯಲೂ ಸಮಸ್ಯೆ, ಬಾವಿ ನೀರು ಮಾಲಿನಗೊಂಡು ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ. ದೂರದ ಕಟೀಲಿನಿಂದ ಹರಿಯುವ ನಂದಿನಿ ನದಿ ಸಮುದ್ರ ಸೇರುವವರೆಗೂ ಉದ್ದಕ್ಕೂ ಮಲಿನಗೊಂಡು ನಿರುಪಯುಕ್ತವಾಗುವ ಭೀತಿ ವ್ಯಕ್ತ ಪಡಿಸಿದರು.

ಮುಕ್ಕ ಸುತ್ತಮುತ್ತಲಿನ ಸುರತ್ಕಲ್‌, ಚೊಕ್ಕಬೆಟ್ಟು ಭಾಗದ ಬೃಹತ್‌ ವಸತಿ, ಆಸ್ಪತ್ರೆ, ಮನೆ, ವ್ಯಾಪಾರ ಕೆಂದ್ರದ ಒಳಚರಂಡಿಯನ್ನು ನೇರವಾಗಿ ನದಿಗೆ ಬಿಟ್ಟು ರೋಗ ಹರಡುತ್ತಿದೆ ಎಂದು ದೂರಿದ್ದಾರೆ.

ಕಳೆದೆರಡು ವಾರದಿಂದ ವೆಟ್‌ವೆಲ್‌ ದುರಸ್ತಿಗೆ ಕ್ರಮ ಕೈಗೊಂಡಿದ್ದರೂ ತೀರ ನಿಧಾನವಾಗಿ ಕಾರ್ಯ ಮಾಡಲಾಗುತ್ತಿದೆ. ಪದೇ ಪದೇ ಹಾಳಾಗುತ್ತಿರುವ ಪಂಪ್‌ಗ್ಳಿಗೆ ಪರಿಹಾರ ದೊರಕಿಲ್ಲ. ಮಂಗಳೂರು ಮಹಾನಗರ ಪಾಲಿಕೆಯ ಒಳಚರಂಡಿ ನೀರು, ಮಾಲಿನ್ಯ ಎಲ್ಲವೂ ನಮ್ಮ ಪಂಚಾಯತ್‌ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಸುಧಾಕರ ಶೆಟ್ಟಿ ಮಾತನಾಡಿ, ಖಂಡೇವು ಉಳ್ಳಾಯ ದೈವದ ಮೀನು ಹಿಡಿಯುವ ಜಾತ್ರೆಗೆ ಮಾಲಿನ್ಯದಿಂದ ಕುಂದುಂಟಾಗಿದೆ. ಗ್ರಾಮದ ಜನತೆ ಕೃಷಿ, ಹೈನುಗಾರಿಕೆ ಮಾಡಲಾಗದೆ ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ ಎಂದರು. ಇದೇ ಸಂದರ್ಭ ವೆಟ್‌ವೆಲ್‌ಗ‌ೂ ಭೇಟಿ ನೀಡಿ ಗ್ರಾಮಸ್ಥರು ಪರಿಶೀಲನೆ ನಡೆಸಿದರು. ವಾಸುದೇವ ಶೆಟ್ಟಿ, ಬಾಲಕೃಷ್ಣ, ನಿತಿನ್‌ ಶೆಟ್ಟಿ ಖಂಡಿಗೆ, ಸುಖೇಶ್‌ ಶೆಟ್ಟಿ, ರಕ್ಷಿತ್‌ ಉಪಸ್ಥಿತರಿದ್ದರು.

Advertisement

ಜನರಿಗೆ ತುರಿಕೆ, ಅಲರ್ಜಿ, ನುಸಿಕಾಟ
ಗ್ರಾಮ ಪಂಚಾಯತ್‌ ಅಧ್ಯಕ್ಷ ಜಯಾನಂದ ಚೇಳಾçರು ಮಾತನಾಡಿ, ಮುಂಚೂರಿನ ಹಾಗೂ ಕೊಡಿಪಾಡಿಯ ವೆಟ್‌ವೆಲ್‌ ಸಂಸ್ಕರಿತ ನೀರನ್ನು ಎಂಆರ್‌ಪಿಎಲ್‌ಗೆ ಬಳಕೆಗೆ ಸಾಗಿಸುವ ಕುರಿತಂತೆ ಪಾಲಿಕೆ ಹೇಳಿದ್ದರೂ ಕ್ರಮ ಕೈಗೊಳ್ಳದೆ ಗ್ರಾಮದ ಜನರಿಗೆ ಮೋಸ ಮಾಡಿದೆ.ನಂದಿನಿ ನದಿ ದುರ್ವಾಸನೆ ಬರುತ್ತಿದೆ. ಅಣೆಕಟ್ಟಿನ ಬಾಗಿಲು ತೆರೆದರೆ ಉಪ್ಪು ನೀರು ಗ್ರಾಮಕ್ಕೆ ನುಗ್ಗುತ್ತದೆ. ನದಿ ದಡದ ಜನತೆ ತುರಿಕೆ, ಅಲರ್ಜಿ, ನುಸಿ ಕಾಟದಿಂದ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಮುಂದೆ ಪಂಚಾಯತ್‌ ಸಹಿಸದು. ವೈಜ್ಞಾನಿಕವಾಗಿ ವೆಟ್‌ವೆಲ್‌ ನಿರ್ವಹಿಸಿ, ಇಲ್ಲವೇ ನಾವು ಗ್ರಾಮಕ್ಕೆ ಹರಿಯುವ ರಾಜಕಾಲುವೆಯನ್ನೇ ಸ್ಥಗಿತ ಮಾಡಬೇಕಾದ ಅನಿವಾರ್ಯ ಬರಬಹುದೆಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next