Advertisement

ತೋಟಬೆಂಗ್ರೆ ಗ್ಯಾಂಗ್‌ರೇಪ್‌: ನಾಲ್ವರ ಬಂಧನ

02:45 AM Nov 28, 2018 | Karthik A |

ಮಂಗಳೂರು: ತೋಟ ಬೆಂಗ್ರೆಯಲ್ಲಿ 22 ವರ್ಷದ ಯುವತಿ ಮೇಲೆ ನಡೆದ ಗ್ಯಾಂಗ್‌ರೇಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಮಹಿಳಾ ಪೊಲೀಸ್‌ ಠಾಣೆ ಹಾಗೂ ಪಣಂಬೂರು ಠಾಣೆ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದು, ಪ್ರಕರಣದಲ್ಲಿ ಮೂವರು ಅಪ್ರಾಪ್ತ ವಯಸ್ಕರು ಸೇರಿದಂತೆ ಒಟ್ಟು ಏಳು ಮಂದಿ ಭಾಗಿಯಾಗಿರುವುದು ಗೊತ್ತಾಗಿದೆ.

Advertisement

ಪ್ರಕರಣ ಸಂಬಂಧ ಬೆಂಗ್ರೆ ಸ್ಯಾಂಡ್‌ಪಿಟ್‌ ನಿವಾಸಿಗಳಾದ ಪ್ರಜ್ವಲ್‌ ಸುವರ್ಣ ಯಾನೆ ಪ್ರಜ್ವಲ್‌ (25) ಅರುಣ್‌ ಯಾನೆ ಅರುಣ್‌ ಅಮೀನ್‌ (26), ತೋಟ ಬೆಂಗ್ರೆ ನಿವಾಸಿಗಳಾದ ಆದಿತ್ಯ ಸಾಲಿಯಾನ್‌ ಯಾನೆ ಆದಿ (25) ಅಬ್ದುಲ್‌ ರಿಯಾಝ್ ಯಾನೆ ರಿಯಾಝ್ ಯಾನೆ ಪಿಟ್ಟೆ, (35) ಅವರನ್ನು ಬಂಧಿಸಲಾಗಿದೆ. ಇನ್ನೂ ಮೂವರಿಗಾಗಿ ಶೋಧ ಮುಂದುವರಿದಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ನಗರ ಪೊಲೀಸ್‌ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.

ತಡವಾಗಿ ಬೆಳಕಿಗೆ 
ಮರ್ಯಾದೆಗೆ ಅಂಜಿದ ಜೋಡಿ ಪ್ರಕರಣದ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಆರೋಪಿಗಳು ಫೋನ್‌ನಲ್ಲಿ ಕಿರುಕುಳ ನೀಡುತ್ತಿದ್ದರಿಂದ ಅವರು ದೂರು ನೀಡಲು ಬಂಟ್ವಾಳ ಠಾಣೆಗೆ ತೆರಳಿದ್ದರು. ಆದರೆ ಪ್ರಕರಣ ಮಂಗಳೂರಿನಲ್ಲಿ ನಡೆದಿದ್ದರಿಂದ ಅಲ್ಲೇ ದೂರು ನೀಡುವಂತೆ ತಿಳಿಸಲಾಗಿತ್ತು. ಘಟನೆ ಬಗ್ಗೆ ಸುದ್ದಿಗಳು ಹರಿದಾಡತೊಡಗಿದ್ದರಿಂದ ನಗರ ಪೊಲೀಸ್‌ ಆಯುಕ್ತರ ಗಮನಕ್ಕೆ ಬಂದಿದ್ದು, ಅವರು ಯುವಕ- ಯುವತಿಯನ್ನು ಮಂಗಳೂರಿಗೆ ಕರೆಸಿ ಮಾಹಿತಿ ಪಡೆದಿದ್ದಾರೆ. ಅನಂತರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ. ಪ್ರಕರಣ ದಾಖಲಾದ ಕೂಡಲೇ ಯುವತಿಯ ಮೊಬೈಲ್‌ನಲ್ಲಿ ದಾಖಲಾಗಿದ್ದ ದೂರವಾಣಿ ಸಂಖ್ಯೆಯ ಜಾಡು ಹಿಡಿದ ಪೊಲೀಸರು ನಾಲ್ವರು ಆರೋಪಿಗಳನ್ನು ಸೋಮವಾರ ರಾತ್ರಿ ಬಂಧಿಸಿದ್ದಾರೆ. ಯುವಕ 18 ವರ್ಷದವನಾಗಿದ್ದು, ಕಲ್ಲಡ್ಕದಲ್ಲೇ ನೆಲೆಸಿದ್ದಾನೆ. ಈತನಿಗೆ ಹಿಂದಿ ಭಾಷೆ ಬಿಟ್ಟರೆ ಬೇರೆ ಯಾವ ಭಾಷೆಯೂ ಗೊತ್ತಿಲ್ಲ. ಕಳೆದ 2 ವರ್ಷಗಳಿಂದ ಆತ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು.

ಸ್ಥಳ ಪರಿಶೀಲನೆ
ಘಟನೆ ನಡೆದಿರುವ ತೋಟಬೆಂಗ್ರೆಗೆ ಹೊಂದಿಕೊಂಡಿರುವ ನಿರ್ಜನ ಪ್ರದೇಶಕ್ಕೆ ಮಂಗಳವಾರ ಬೆಳಗ್ಗೆ ಸಂತ್ರಸ್ತ ಯುವತಿ ಹಾಗೂ ಯುವಕನನ್ನು ಪೊಲೀಸರು ಕರೆದೊಯ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಏತನ್ಮಧ್ಯೆ ಘಟನೆ ಕುರಿತಂತೆ ಸ್ಥಳೀಯರೂ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ಕಠಿನ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಪೊಲೀಸ್‌ ಆಯುಕ್ತ ಟಿ. ಆರ್‌ ಸುರೇಶ್‌ ಅವರ ನಿರ್ದೇಶನದಂತೆ ನಗರ ಉಪ-ಆಯುಕ್ತರಾದ ಹನುಮಂತರಾಯ, ಹಾಗೂ ಉಮಾ ಪ್ರಶಾಂತ್‌ ಮಾರ್ಗದರ್ಶನದಂತೆ ಸಂಚಾರ ಉಪ-ವಿಭಾಗ ಸಹಾಯಕ ಪೊಲೀಸ್‌ ಆಯುಕ್ತ ಮಂಜುನಾಥ ಶೆಟ್ಟಿ ನೇತೃತ್ವದಲ್ಲಿ ಪಣಂಬೂರು ಠಾಣಾ ಪೊಲೀಸ್‌ ನಿರೀಕ್ಷಕ ರಫೀಕ್‌ ಕೆ.ಎಂ, ಮಂಗಳೂರು ಮಹಿಳಾ ಠಾಣಾ ಪಿಐ ಕಲಾವತಿ, ಪಣಂಬೂರು ಠಾಣಾ ಪಿಎಸ್‌ಐ ಉಮೇಶ್‌ ಕುಮಾರ್‌.ಎಂ.ಎನ್‌. ಹಾಗೂ ಮಂಗಳೂರು ನಗರ ಉತ್ತರ ಉಪ-ವಿಭಾಗ ರೌಡಿ ನಿಗ್ರಹ ದಳದ ಅಧಿಕಾರಿ/ ಸಿಬಂದಿಗಳಾದ ಎ.ಎಸ್‌. ಐಮೊಹಮ್ಮದ್‌, ಕುಶಲ ಮಣಿಯಾಣಿ, ವಿಜಯ ಕಾಂಚನ್‌, ಸತೀಶ್‌ ಎಂ., ಶರಣ್‌ ಕಾಳಿ ಮತ್ತು ಪಣಂಬೂರು ಪೊಲೀಸ್‌ ಸಿಬಂದಿ ಶ್ರಮಿಸಿದ್ದರು.

Advertisement

ನಡೆದಿದ್ದೇನು?
ಬಿಹಾರ ಮೂಲದ ಯುವಕ ಹಾಗೂ ಕಲ್ಲಡ್ಕ ಮೂಲದ ಯುವತಿ ಕಲ್ಲಡ್ಕದ ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ನ.18ರಂದು ಅವರು ತಣ್ಣೀರುಬಾವಿ ಬೀಚ್‌ಗೆ ಮಧ್ಯಾಹ್ನದ ವೇಳೆಗೆ ಬಂದಿದ್ದರು. ಅಲ್ಲಿಂದ ನಿರ್ಜನ ತೋಟಬೆಂಗ್ರೆ ಬೀಚ್‌ಗೆ ತೆರಳಿದ್ದರು. ಈ ವೇಳೆ ಏಳು ಮಂದಿ ಯುವಕರ ತಂಡ ಅವರ ಮೇಲೆ ಎರಗಿದೆ. ಯುವಕನನ್ನು ಹಿಡಿದು ಥಳಿಸಿದ ತಂಡ ಆತನನ್ನು ಬೆದರಿಸಿ ಹಿಡಿದಿಟ್ಟುಕೊಂಡಿತ್ತು. ನಂತರ ಆತನ ಎದುರಲ್ಲೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದೆ. ಗಾಂಜಾ ಅಮಲಿನಲ್ಲಿದ್ದ ಕಾರಣ ಪುಂಡರ ಗುಂಪು ಅಮಾನುಷವಾಗಿ ವರ್ತಿಸಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಘಟನೆ ಬಳಿಕ ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಸಂತ್ರಸ್ತ ಯುವತಿಗೆ ಬೆದರಿಕೆಯೊಡ್ಡಿ ಆಕೆಯ ಮೊಬೈಲ್‌ ನಂಬರ್‌ ಪಡೆದುಕೊಂಡಿದ್ದರು. ಮರುದಿನ ಯುವತಿಗೆ ಆರೋಪಿಗಳು ಕರೆ ಮಾಡಿ ಕಿರುಕುಳ ನೀಡಲು ಶುರುಮಾಡಿದ್ದರು ಎನ್ನಲಾಗಿದೆ.  

2013ರಲ್ಲೂ ಇಂಥದ್ದೇ ಪ್ರಕರಣ
2013ರ ಡಿ.18 ರಂದು ದೇರಳಕಟ್ಟೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಹಾಗೂ ಆಕೆಯ ಪ್ರಿಯಕರನನ್ನ‌ು ದುಷ್ಕರ್ಮಿಗಳ ತಂಡ ಅಪಹರಿಸಿ ಲೈಂಗಿನ ದೌರ್ಜನ್ಯ ವೆಸಗಿತ್ತು. ಆ ಜೋಡಿಯನ್ನು ಮನೆಯೊಂದರಲ್ಲಿ ಕೂಡಿ ಹಾಕಿ ಲೈಂಗಿಕ ಕ್ರಿಯೆ ನಡೆಸುವಂತೆ ಬಲಾತ್ಕಾರದಿಂದ ಬಳಿಕ ಅದನ್ನು ಚಿತ್ರೀಕರಿಸಿ ಹಣ ವಸೂಲಿ ಮಾಡಿದ್ದರು.

– ನ.18ರಂದು ಸುತ್ತಾಟಕ್ಕೆ ತೋಟಬೆಂಗ್ರೆಗೆ ಬಂದಿದ್ದ ಜೋಡಿ
– ಮಧ್ಯಾಹ್ನ ಹೊತ್ತು ಆರೋಪಿಗಳಿಂದ ಅತ್ಯಾಚಾರ
– ಮರ್ಯಾದೆಗೆ ಅಂಜಿ ದೂರು ನೀಡಲು ಸಂತ್ರಸ್ತರ ಹಿಂದೇಟು
– ಆಯುಕ್ತರಿಗೆ ತಿಳಿದು, ಸಂತ್ರಸ್ತರ ಕರೆಸಿ ದೂರು ದಾಖಲು
– 7 ಆರೋಪಿಗಳಲ್ಲಿ ಇನ್ನೂ ಮೂವರಿಗೆ ಶೋಧ

Advertisement

Udayavani is now on Telegram. Click here to join our channel and stay updated with the latest news.

Next