Advertisement

Mangaluru: ಮತ್ತೆ ಮುಂದುವರಿದ ಫುಟ್‌ಬೋರ್ಡ್‌ ಪ್ರಯಾಣ !

06:30 PM Sep 14, 2023 | Team Udayavani |

ಮಹಾನಗರ: ಬಸ್‌ ಗಳ ಫುಟ್‌ಬೋರ್ಡ್‌ನಲ್ಲಿ ನಿಲ್ಲುವ ಪರಿಪಾಠವನ್ನು ನಿರ್ವಾಹಕರು ಮತ್ತೆ ಮುಂದುವರಿಸಿರುವುದು ನಗರದ ಹಲವೆಡೆ  ಕಂಡು ಬಂದಿದೆ. ಆ. 29ರಂದು ನಗರದ ನಂತೂರಿನಲ್ಲಿ ಸಿಟಿಬಸ್‌ನ ಫುಟ್‌ಬೋರ್ಡ್‌ನಿಂದ ಬಿದ್ದು ನಿರ್ವಾಹಕ ಮೃತಪಟ್ಟ ಅನಂತರ ಪೊಲೀಸರು ಫುಟ್‌ಬೋರ್ಡ್‌ ಪ್ರಯಾಣದ ವಿರುದ್ಧ ವ್ಯಾಪಕ ಕಾರ್ಯಾಚರಣೆ ನಡೆಸಿದ್ದರು. 150ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.

Advertisement

ಸಾರ್ವಜನಿಕರು ಕೂಡ ಈ ರೀತಿಯ ಫುಟ್‌ಬೋರ್ಡ್‌ ಪ್ರಯಾಣದ ವಿರುದ್ಧ ಕಠಿನ ಕ್ರಮಕ್ಕೆ ಆಗ್ರಹಿಸಿದ್ದರು. ಆದರೆ ಸದ್ಯ
ಪೊಲೀಸರು ಕೂಡ ಮೃದುಧೋರಣೆ ತೋರಿಸುತ್ತಿರುವುದು ಕಂಡುಬಂದಿದೆ. ಬಸ್‌ ಮಾಲಕರು ಮತ್ತು ಪೊಲೀಸರು ಜಂಟಿಯಾಗಿ ಬಸ್‌ ಸಿಬಂದಿಗೆ ಸೂಚನೆಗಳನ್ನು ನೀಡಿ ಜಾಗೃತಿ ಮೂಡಿಸಿದ್ದರು. ಜಾಗೃತಿ ಮತ್ತು ಕಾರ್ಯಾಚರಣೆಯ ಫ‌ಲವಾಗಿ ಕೆಲವು ಬಸ್‌ ನಿರ್ವಾಹಕರು ಸುರಕ್ಷ ಕ್ರಮ ಗಳನ್ನು ಅನುಸರಿಸುತ್ತಿದ್ದರೂ ಬಹುತೇಕರು ನಿರ್ಲಕ್ಷಿಸುತ್ತಿರುವುದು ಕಂಡುಬಂದಿದೆ.

ಫುಟ್‌ಬೋರ್ಡ್‌ ಪ್ರಯಾಣ ಅನಿವಾರ್ಯವೆ?
ಬಸ್‌ ನಿರ್ವಾಹಕರು ಫುಟ್‌ಬೋರ್ಡ್‌ ನಲ್ಲಿ ನಿಂತುಕೊಂಡು ಪ್ರಯಾಣಿಕರನ್ನು ಕರೆದು ಹತ್ತಿಸಿಕೊಳ್ಳುತ್ತಾರೆ. ಸಮಯ ಪರಿ
ಪಾಲನೆಗಾಗಿ ತ್ವರಿತವಾಗಿ ಪ್ರಯಾಣಿಕರನ್ನು ಹತ್ತಿಸಿ ಕೊಳ್ಳಲು ಫುಟ್‌ಬೋರ್ಡ್‌ ನಲ್ಲೇ ನಿಂತು ಕೊಂಡಿರುತ್ತಾರೆ. ಇದು ಅನಿವಾರ್ಯ ಎಂಬ ರೀತಿಯಲ್ಲಿ ನಡೆದು ಕೊಳ್ಳುತ್ತಿದ್ದು, ಅಪಾಯವನ್ನು ಆಹ್ವಾನಿಸುತ್ತಿದ್ದಾರೆ.

ಬಾಗಿಲು ಅಳವಡಿಕೆಯೂ ನಿರ್ಲಕ್ಷ್ಯ 
ಬಸ್‌ ಮಾಲಕರ ಸಭೆಯಲ್ಲಿ ಪೊಲೀಸ್‌ ಆಯುಕ್ತರು ಬಸ್‌ಗಳಿಗೆ ಬಾಗಿಲುಗಳನ್ನು ಅಳವಡಿಸುವಂತೆ ಸೂಚಿಸಿದ್ದರು. ಅಲ್ಲದೆ ನಿರ್ವಾಹಕರು, ಪ್ರಯಾಣಿಕರು ಯಾರು ಕೂಡ ಫುಟ್‌ಬೋರ್ಡ್‌ನಲ್ಲಿ ನಿಂತು ಪ್ರಯಾಣಿಸಬಾರದು. ಸಮಯ ಪಾಲನೆಗಿಂತಲೂ ಸುರಕ್ಷೆ ಮುಖ್ಯ ಎಂದು ಹೇಳಿದ್ದರು. ಆದಾಗ್ಯೂ ಬಸ್‌ಗಳಿಗೆ ಬಾಗಿಲು ಹಾಕುವಲ್ಲಿಯೂ ಹೆಚ್ಚಿನ ಮಾಲಕರು ಆಸಕ್ತಿ ತೋರಿಸಿಲ್ಲ. ಒಂದೆಡೆ ಬಸ್‌ ಮಾಲಕರು, ಪೊಲೀಸರು ಸೂಚನೆ ಮತ್ತು ಎಚ್ಚರಿಕೆ ನೀಡಿದರೂ ಇನ್ನೊಂದೆಡೆ ಕೆಲವು ಬಸ್‌ ಸಿಬಂದಿ ಹಿಂದಿನಂತೆಯೇ ತಮ್ಮ ಪರಿಪಾಠ ಮುಂದುವರಿಸಿದ್ದಾರೆ.

ನಿರಂತರ ಕ್ರಮ
ಫುಟ್‌ಬೋರ್ಡ್‌ನಲ್ಲಿ ನಿಂತು ಪ್ರಯಾಣಿಸುವ ನಿರ್ವಾಹಕರ ವಿರುದ್ಧ ನಿರಂತರವಾಗಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಪೊಲೀಸರು
ನೋಡುತ್ತಾರೆಂಬ ಕಾರಣಕ್ಕೆ ಮಾತ್ರವೇ ಬಸ್‌ ನಿರ್ವಾಹಕರು ಎಚ್ಚರ ವಹಿಸುವುದಲ್ಲ, ಅವರ ಜೀವ ರಕ್ಷಣೆಗೆ ಸ್ವಯಂ ಜಾಗೃತರಾಗಬೇಕು. ಈ ರೀತಿ ನಿರ್ಲಕ್ಷ್ಯ ವಹಿಸುವವರ ಬಗ್ಗೆ ಸಾರ್ವಜನಿಕರು ಕೂಡ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ಅವರು ಪ್ರತಿಕ್ರಿಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next