Advertisement

ಮಂಗಳೂರು: ಸಿಟಿ ಸೆಂಟರ್‌ ಮಾಲ್‌ನಲ್ಲಿ ಬೆಂಕಿ ದುರಂತ

12:30 AM Feb 22, 2019 | Team Udayavani |

ಮಂಗಳೂರು:  ನಗರದ ಕೆ. ಎಸ್‌. ರಾವ್‌ ರಸ್ತೆಯಲ್ಲಿರುವ ಪ್ರತಿಷ್ಠಿತ ಸಿಟಿ ಸೆಂಟರ್‌ ಮಾಲ್‌ನ ಪುಡ್‌ಕೋರ್ಟ್‌ನಲ್ಲಿ ಗುರುವಾರ ಬೆಂಕಿ ದುರಂತ ಸಂಭವಿಸಿದ್ದು,  ಅಗ್ನಿಶಾಮಕದಳ  ಕಾರ್ಯಾಚರಣೆ ನಡೆಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದೆ.ಕಟ್ಟಡದಲ್ಲಿ ಮೂಡಿದ್ದ ದಟ್ಟ ಹೊಗೆ ಸ್ಥಳದಲ್ಲಿ  ಆತಂಕದ ವಾತಾವರಣ ಸೃಷ್ಟಿಸಿತ್ತು.

Advertisement

ಸಿಟಿಸೆಂಟರ್‌ನ  ನಾಲ್ಕನೆಯ ಅಂತಸ್ತಿನಲ್ಲಿ ಗುರುವಾರ ಸುಮಾರು 11ರ  ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು ಬಳಿಕ ದಟ್ಟ ಹೊಗೆ ಬರಲಾರಂಭಿಸಿತು. ಬಳಿಕ ಇತರ ಅಂತಸ್ತುಗಳಿಗೂ ವ್ಯಾಪಿಸತೊಡಗಿತು. ಕೂಡಲೇ ಧಾವಿಸಿ ಬಂದ ಕದ್ರಿ ಹಾಗೂ ಪಾಂಡೇಶ್ವರದ ಆಗ್ನಿಶಾಮಕ ಮತ್ತು ತುರ್ತುಸೇವೆಗಳ ಠಾಣೆಯಿಂದ ಆಗ್ನಿಶಾಮಕ ಸಿಬಂದಿ ಅಗ್ನಿಶಮನ ನಡೆಸಿದರು.

ಮಳಿಗೆಯಲ್ಲಿ ದಟ್ಟಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಒಳಗಿದ್ದವರು ಭೀತಿಯಿಂದ ಹೊರಗೆ ಓಡಿದರು.  ಮಾಲ್‌ನೊಳಗಿದ್ದ  ಸಿಬಂದಿ ಹಾಗೂ ಗ್ರಾಹಕರನ್ನು ತೆರವುಗೊಳಿಸಲಾಯಿತು. ಕಟ್ಟಡದ ಎಲ್ಲ ದ್ವಾರಗಳನ್ನು ತೆರೆದು ಹೊಗೆ ಹೊರಗೆ ಹೋಗಲು ಅನುವು ಮಾಡಿಕೊಡಲಾಯಿತು.ಫುಡ್‌ಕೋರ್ಟ್‌ ಪಕ್ಕದಲ್ಲಿರುವ ಥಿಯೇಟರ್‌ನ 5 ಪರದೆಗಳಲ್ಲಿ ಚಲನಚಿತ್ರ ಪ್ರದರ್ಶನಗಳನ್ನು ರದ್ದು ಪಡಿಸಲಾಯಿತು.ದಟ್ಟ ಹೊಗೆಯಿಂದ ಸಿಟಿಸೆಂಟರ್‌ ಮಾಲ್‌ನ ಇಬ್ಬರು ಸಿಬಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸ‌ಲಾಯಿತು.

ಚಿಮಿಣಿ ಕಾರಣ ?
ಫುಡ್‌ಕೋರ್ಟ್‌ನ ಚಿಮಿಣಿಯಲ್ಲಿ ಎಣ್ಣೆಯ ಅಂಶ ಶೇಖರಣೆಯಾಗಿ ಅದಕ್ಕೆ ಬೆಂಕಿ ಸ್ಪರ್ಶವಾಗಿ ದಟ್ಟ ಹೊಗೆ ಆವರಿಸಿತ್ತು. ಅಗ್ನಿಶಾಮಕ ದಳ ಸಿಬಂದಿ ಹಾಗೂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನುನಿಯಂತ್ರಿಸಿದರು ಎಂದು ಜಿಲ್ಲಾ ಆಗ್ನಿಶಾಮಕ ಮುಖ್ಯ ಅಧಿಕಾರಿ ಟಿ.ಎನ್‌.ಶಿವಶಂಕರ್‌ ತಿಳಿಸಿದ್ದಾರೆ. ಎಸಿಪಿ ಮಂಜುನಾಥ ಶೆಟ್ಟಿ ಹಾಗೂ ಕದ್ರಿ ಹಾಗೂ ಪಾಂಡೇಶ್ವರ ಪೊಲೀಸ್‌ಠಾಣೆ ಸಿಬಂದಿ ಸ್ಥಳದಲ್ಲಿ ಉಪಸ್ಥಿತರಿದ್ದು  ಪರಿಸ್ಥಿತಿಯನ್ನು ನಿಯಂತ್ರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next