Advertisement

ರಸ್ತೆ ಗುಂಡಿ ಮುಚ್ಚಿ ಸಾಮಾಜಿಕ ಕಾಳಜಿ ಮೆರೆದ ಟ್ರಾಫಿಕ್ ಪೊಲೀಸ್‌ಗೆ ಕಮಿಷನರ್ ಪ್ರಶಂಸೆ

05:08 PM Nov 04, 2019 | Naveen |

ಮಂಗಳೂರು: ನಗರದ ಬಂಟ್ಸ್ ಹಾಸ್ಟೆಲ್  ಸರ್ಕಲ್ ಸಮೀಪ ರಸ್ತೆ ಬದಿಯ ಗುಂಡಿಯೊಂದನ್ನು ಕಳೆದ ಶುಕ್ರವಾರ ಕಲ್ಲು, ಮಣ್ಣು ಹಾಕಿ ಮುಚ್ಚುವ ಮೂಲಕ ಜನಪರ ಕಾಳಜಿ ಮೆರೆದ ಟ್ರಾಫಿಕ್ ಪೂರ್ವ ಠಾಣೆ (ಕದ್ರಿ)ಯ ಸಿಬಂದಿ ಪುಟ್ಟರಾಮ ಅವರನ್ನು ಪೊಲೀಸ್ ಆಯುಕ್ತ ಡಾ| ಹರ್ಷ ಪಿ.ಎಸ್. ಅವರು ಸೋಮವಾರ ತಮ್ಮ ಕಚೇರಿಯಲ್ಲಿ ಅಭಿನಂದಿಸಿದರು.

Advertisement

ಬಂಟ್ಸ್ ಹಾಸ್ಟೆಲ್ ಜಂಕ್ಷನ್‌ನಲ್ಲಿ ರಸ್ತೆಯ ಅಂಚಿನಲ್ಲಿ ದೊಡ್ಡ ಹೊಂಡ ನಿರ್ಮಾಣವಾಗಿದ್ದು, ದ್ವಿಚಕ್ರ ವಾಹನ ಮತ್ತು ರಿಕ್ಷಾ ಚಾಲಕರು ವಾಹನ ಚಲಾಯಿಸಲು ಭಾರೀ ಪ್ರಯಾಸ ಪಡುತ್ತಿದ್ದರು. ದ್ವಿಚಕ್ರ ಸವಾರರು ಅಪಘಾತಕ್ಕೂ ಈಡಾಗುತ್ತಿದ್ದರು. ಈ ದುರವಸ್ಥೆಯ ಬಗ್ಗೆ ಟ್ರಾಫಿಕ್ ಪೊಲೀಸ್ ಸಿಬಂದಿ ಪುಟ್ಟರಾಮ ವಿಡಿಯೋ ಮಾಡಿ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಪಾಲಿಕೆ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಇದನ್ನು ಗಮನಿಸಿದ ಪುಟ್ಟರಾಮ ಅವರು ತಾನೇ ಗುಂಡಿ ಮುಚ್ಚಲು ನಿರ್ಧರಿಸಿದರು.
ಶನಿವಾರ ಮಧ್ಯಾಹ್ನ 12.30ರ ವೇಳೆಗೆ ಬಂಟ್ಸ್ಹಾಸ್ಟೆಲ್ ಸಮೀಪ ಖಾಲಿ ಪಿಕಪ್ ಹೋಗುತ್ತಿದ್ದಾಗ ಅದನ್ನು ನಿಲ್ಲಿಸಿ ಕರಂಗಲ್ಪಾಡಿಯಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸ್ಥಳದಿಂದ ಕಲ್ಲು ಮಿಶ್ರಿತ ಮಣ್ಣು ಮತ್ತು ಜಲ್ಲಿ ತರಿಸಿಕೊಂಡಿದ್ದಾರೆ. ಬಳಿಕ ತಾನೇ ಪಿಕಪ್ ಹತ್ತಿ ಹಾರೆ ಹಿಡಿದು ಗುಂಡಿಗೆ ಮಣ್ಣು ಹಾಕಿ ಮುಚ್ಚಿದ್ದರು. ಇದನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು.

ಪುಟ್ಟರಾಮ ಅವರ ಸಾಮಾಜಿಕ ಕಾಳಜಿಗೆ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರನ್ನು ಅಭಿನಂದಿಸುವುದಾಗಿ ತಿಳಿಸಿದ್ದರು. ಅದರ ಪ್ರಕಾರ ಸೋಮವಾರ ತಮ್ಮ ಕಚೇರಿಯಲ್ಲಿ ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next