ಮಂಗಳೂರು: ಸಜೀಪ ಮುನ್ನೂರು ಕೋಮಾಲಿನ ಪ್ರಗತಿಪರ ಕೃಷಿಕ ಗಣಪತಿ ಭಟ್ ಅವರು ಆವಿಷ್ಕರಿಸಿರುವ ಅಡಿಕೆ ಮರ ಏರುವ “ಬೈಕ್’ ಯಂತ್ರದ ಬಗ್ಗೆ ಮಹೀಂದ್ರ ಸಂಸ್ಥೆಯ ಅಧ್ಯಕ್ಷ ಆನಂದ ಮಹೀಂದ್ರ ಅವರು ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ರಾಜೇಶ್ ಎಂಬವರಿಗೆ ಪ್ರತ್ಯುತ್ತರ ನೀಡುವಾಗ ಈ ಯಂತ್ರದ ಬಗ್ಗೆ ಉಲ್ಲೇಖೀಸಿರುವ ಅವರು, ಇದೊಂದು ಪರಿಣಾಮಕಾರಿ ಯಂತ್ರದಂತೆ ತೋರುತ್ತಿದ್ದು, ಉತ್ತಮವಾಗಿ ಕೆಲಸ ನಿರ್ವಹಿಸುತ್ತದೆ. ಕಡಿಮೆ ತೂಕದೊಂದಿಗೆ ಸೊಗಸಾಗಿ ವಿನ್ಯಾಸ ಗೊಳಿಸಲಾಗಿದೆ. ನಿಮ್ಮ ತಂಡವು ಇದನ್ನು ಸೂಕ್ಷ್ಮವಾಗಿ ಗಮನಿಸಿ ಮತ್ತು ಭಟ್ ಅವರ ಈ ಯಂತ್ರವನ್ನು ನಮ್ಮ ಸಂಸ್ಥೆಯ ಕೃಷಿ ಯಂತ್ರೋಪಕರಣಗಳ ಭಾಗವಾಗಿಸಿ ಮಾರುಕಟ್ಟೆ ಒದಗಿಸುವ ಬಗ್ಗೆ ಯೋಚಿಸಿ ಎಂದು ಟ್ವೀಟ್ ಮಾಡಿದ್ದಾರೆ.
ಕೃಷಿಕ ಗಣಪತಿ ಭಟ್ ಅವರು ಸಜ್ಜುಗೊಳಿಸಿದ ಅಡಿಕೆ ಮರ ಏರುವ ಯಂತ್ರ ಅತ್ಯಂತ ಸರಳವೂ ಸುಧಾರಿತ ತಂತ್ರಜ್ಞಾನದ್ದೂ ಆಗಿದೆ. ದ್ವಿಚಕ್ರ ವಾಹನದಂತೆ ಸಲೀಸು, ಸೇಫ್ಟಿ ಬೆಲ್ಟ್ ಕಟ್ಟಿಕೊಂಡು ಸ್ವಿಚ್ ಒತ್ತಿದರೆ 30 ಸೆಕೆಂಡ್‌ಗಳ ಅಂತರದಲ್ಲಿ ಅಡಿಕೆ ಮರದ ನಿರ್ದಿಷ್ಟ ಭಾಗಕ್ಕೆ ಏರಬಹುದು.
ಕೆಳಕ್ಕೂ ಇದೇ ಮಾದರಿಯಲ್ಲಿ ಸಲೀಸಾಗಿ ಜಾರಿಕೊಂಡು ಬರಲು ಸಾಧ್ಯವಿದೆ. ಎಲ್ಲಿ ಬೇಕಾದಲ್ಲಿ ನಿಲ್ಲಿಸುವುದಕ್ಕೆ ಸಾಧ್ಯವಾಗುವಂತಿದೆ. ಅಡಿಕೆ ಕೊçಲು ಮಾಡುವ ನಿಷ್ಣಾತರ ಕೊರತೆ ಇರುವ ಈ ಕಾಲದಲ್ಲಿ ಮರ ಏರುವ ಯಂತ್ರವನ್ನು ಹೈಟೆಕ್ ಮಾದರಿಯಲ್ಲಿ ನಿರ್ಮಿಸಿ ಸ್ವಂತ ಬಳಕೆ ಜತೆ ರೈತರಿಗೆ ಅನುಕೂಲ ಕಲ್ಪಿಸುವ ಅವರ ಯೋಜನೆ ಎಲ್ಲರಿಂದಲೂ ಶ್ಲಾಘನೆಗೆ ಪಾತ್ರವಾಗಿದೆ.